ಸೋಮವಾರ, ಏಪ್ರಿಲ್ 19, 2021
25 °C

ಹೆಸ್ಕಾಂ ಭದ್ರತಾ ಠೇವಣಿ: ಪಾಂಡೆ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯು ಗ್ರಾಹಕರಿಂದ ಪಡೆಯುತ್ತಿರುವ ಭದ್ರತಾ ಠೇವಣಿ ವಿಚಾರವನ್ನು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ ಸಮರ್ಥಿಸಿಕೊಂಡರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸೋಮವಾರ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದದಲ್ಲಿ ಅವರು, ‘ಪ್ರತಿ ಬಿಲ್ ಪಾವತಿಸಲು ನಿರ್ದಿಷ್ಠ ದಿನಾಂಕದಿಂದ 15 ದಿನಗಳ ಹೆಚ್ಚುವರಿ ಅವಧಿ ಇರುತ್ತದೆ. ಹೆಚ್ಚುಕಮ್ಮಿ ಒಂದೂವರೆಯಿಂದ ಎರಡು ತಿಂಗಳ ಅವಧಿಗೆ ಬಿಲ್ ಪಾವತಿಯಾಗುತ್ತದೆ. ವಿದ್ಯುತ್ ಬಿಲ್‌ನ ಎರಡು ತಿಂಗಳ ಮೊತ್ತವನ್ನು ಭದ್ರತಾ ಠೇವಣಿಯಾಗಿ ಪಡೆಯಲಾಗುತ್ತಿದೆ’ ಎಂದರು.‘ಹಳೆಯ ಭದ್ರತಾ ಠೇವಣಿ ಇಟ್ಟರೂ ಬಿಲ್‌ನಲ್ಲಿ ಸೊನ್ನೆ ಎಂದು ಬರುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಕಂಪ್ಯೂಟರ್‌ನಲ್ಲಿ ನಮೂದಿಸುವಾಗಿನ ತಪ್ಪುಗಳಿಂದಾಗಿ ಇದಾಗಿರಬಹುದು. ಇಲಾಖೆಯಲ್ಲಿ ಎಲ್ಲರ ಮಾಹಿತಿಗಳೂ ಸಂಪೂರ್ಣವಾಗಿ ದಾಖಲಾಗಿರುತ್ತವೆ. ಇವುಗಳನ್ನು ಕಂಪ್ಯೂಟರೀಕರಣ ಮಾಡಲು ನೀಡಲಾಗಿರುವ ಏಜೆನ್ಸಿಯಲ್ಲಿ ಇಂತಹ ಪ್ರಮಾದಗಳು ಆಗಿರಬಹುದು. ಇದನ್ನು ಹಂತಹಂತವಾಗಿ ಪರಿಶೀಲಿಸಿ ಹಳೆಯ ಠೇವಣಿಯ ಮೊತ್ತವನ್ನು ಹೊಸ ಭದ್ರತಾ ಠೇವಣಿಗೆ ಸೇರಿಸಲಾಗುವುದು. ಇದನ್ನು ಹೆಸ್ಕಾಂನ ಅಧಿಕಾರಿಗಳೇ ಪರಿಶೀಲನೆ ನಡೆಸಿ, ತಪ್ಪುಗಳನ್ನು ಸರಿಪಡಿಸುವರು’ ಎಂದರು.‘ಯಾವ ಗ್ರಾಹಕನ ಹೆಸರಲ್ಲಿ ಮೀಟರ್ ಇರುತ್ತದೆಯೋ ಅವರೇ ಭದ್ರತಾ ಠೇವಣಿಯನ್ನು ಕಟ್ಟಬೇಕು. ಮನೆಯ ಮಾಲೀಕ ಅಥವಾ ಬಾಡಿಗೆದಾರರಲ್ಲಿ ಯಾರು ಕಟ್ಟಬೇಕು ಎನ್ನುವುದು ಅವರ ಹೊಂದಾಣಿಕೆಗೆ ಬಿಟ್ಟಿದ್ದು’ ಎಂದು ಸ್ಪಷ್ಟಪಡಿಸಿದರು. ‘ಕಳೆದ ವರ್ಷದಲ್ಲಿ ಇದ್ದ 352 ಕೋಟಿ ರೂಪಾಯಿ ಭದ್ರತಾ ಠೇವಣಿಗೆ 24 ಕೋಟಿ ರೂಪಾಯಿ ಬಡ್ಡಿ ನೀಡಲಾಗಿದೆ. ಈ ಬಡ್ಡಿಯನ್ನು ಏಪ್ರಿಲ್-ಮೇ ತಿಂಗಳ ಬಿಲ್‌ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ’ ಎಂದು ಪಾಂಡೆ ಹೇಳಿದರು.ನೀರಾವರಿ ಪಂಪ್‌ಸೆಟ್ ಹೆಚ್ಚು: ‘ಹೆಸ್ಕಾಂ ಶೇ.21ರಷ್ಟು ನಷ್ಟವನ್ನು ಅನುಭವಿಸುತ್ತಿದ್ದು, ರಾಜ್ಯದ ಉಳಿದ ವಿದ್ಯುತ್ ಕಂಪೆನಿಗಳ ಕಾರ್ಯಕ್ಷೇತ್ರ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ) ಕಾರ್ಯವ್ಯಾಪ್ತಿಗೂ ಬಹಳಷ್ಟು ವ್ಯತ್ಯಾಸವಿದೆ. ಹೆಸ್ಕಾಂ ವ್ಯಾಪ್ತಿಯ ಬಹುಪಾಲು ವಿದ್ಯುತ್ ನೀರಾವರಿ ಪಂಪ್‌ಸೆಟ್‌ಗಳಿಗೆ ಒದಗಿಸಲಾಗುತ್ತಿದ್ದು, ಒಟ್ಟು ಐದು ಲಕ್ಷ ಪಂಪ್‌ಸೆಟ್‌ಗಳು ನಮ್ಮ ವ್ಯಾಪ್ತಿಯಲ್ಲಿವೆ’ ಎಂದು ಪಾಂಡೆ ತಿಳಿಸಿದರು.‘ನಷ್ಟವನ್ನು ತಡೆಯಲು ನಿರಂತರ ಜ್ಯೋತಿ ಯೋಜನೆ, ಸರಬರಾಜು ಲೈನುಗಳನ್ನು ಮರುಪರಿಶೀಲನೆ ಮಾಡಿಸಿ ಸರಿಪಡಿಸುವುದು. ಓವರ್‌ಲೋಡ್ ಫೀಡರ್‌ಗಳನ್ನು ಬ್ಯಾಲೆನ್ಸ್ ಮಾಡುವುದರಿಂದ ನಷ್ಟವನ್ನು ತಡೆಯುವ ನಿರೀಕ್ಷೆಯಿದೆ. ಸರ್ಕಾರದಿಂದ ಸಿಗುವ ಸಬ್ಸಿಡಿಯ ಹಣ ಪಾವತಿಯಾಗುವುದು ವಿಳಂಬ ವಾಗುತ್ತಿರುವುದರಿಂದ ನಾವು ವಿದ್ಯುತ್ ಖರೀದಿಸುವ ಸಂಸ್ಥೆಗಳಿಗೆ ಹಣ ಪಾವತಿಸುವುದು ತಡವಾಗುತ್ತಿದೆ. ಇದರಿಂದಾಗಿ ಬಾಕಿ ಹಣದ ಮೇಲೆ ಆ ಸಂಸ್ಥೆಗಳು ಹಾಕುತ್ತಿರುವ ಬಡ್ಡಿಹಣ ಹೊರೆಯಾಗುತ್ತಿದೆ. ಇದು ಕೂಡ ನಷ್ಟಕ್ಕೆ ಕಾರಣವಾಗುತ್ತದೆ’ ಎಂದರು. ‘ಉತ್ತರ ಕನ್ನಡ ಜಿಲ್ಲೆಯ 11 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಭೌಗೋಳಿಕ ಸಮಸ್ಯೆಗಳ ಕಾರಣದಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ’ ಎಂದರು.‘ಬಾಕಿ ವಸೂಲಿಗಾಗಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಒಬ್ಬ ಸಹಾಯಕ ಎಂಜಿನಿಯರ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ಒಂದೊಂದು ಪ್ರದೇಶದಲ್ಲಿ ವಸೂಲಿ ಅಭಿಯಾನ ನಡೆಸಲಾಗುತ್ತಿದೆ. ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ಹೆಸ್ಕಾಂಗೆ 1470 ಕೋಟಿ ರೂಪಾಯಿ ಬಾಕಿಯಿದೆ. ನೀರಾವರಿ ಪಂಪ್‌ಸೆಟ್‌ಗಳಿಂದ 1036 ಕೋಟಿ, ಗೃಹಬಳಕೆ ಗ್ರಾಹಕರಿಂದ 381 ಕೋಟಿ ಮತ್ತು ಔದ್ಯೋಗಿಕ ಗ್ರಾಹಕರಿಂದ 53 ಕೋಟಿ ರೂಪಾಯಿ ಬಾಕಿಯಿದೆ’ ಎಂದು ತಿಳಿಸಿದರು.‘ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗಲು ವಿದ್ಯುತ್ ಪೂರೈಕೆಯ ವೈಫಲ್ಯವೇ ಕಾರಣ ಎನ್ನುವುದು ಸರಿಯಲ್ಲ. ಜಲಮಂಡಳಿ ಅಥವಾ ಪಾಲಿಕೆಯ ಅಧಿಕಾರಿಗಳು ಯಾವುದೇ ತೊಂದರೆಯಿದ್ದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸುವ ಅವಕಾಶವಿದೆ’ ಎಂದು ಪಾಂಡೆ ಹೇಳಿದರು.

 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮುಲ್ಲಾ ಸ್ವಾಗತಿಸಿದರು. ಶಿವಕುಮಾರ ಮೆಣಸಿನಕಾಯಿ ನಿರೂಪಿಸಿದರು. ಗಿರೀಶ ಪಟ್ಟಣಶೆಟ್ಟಿ ವಂದಿಸಿದರು.

 

ಮುಖ್ಯಾಂಶಗಳು

4ವಿದ್ಯುತ್ ಬಿಲ್‌ನ ಎರಡು ತಿಂಗಳ        ಮೊತ್ತವೇ ಭದ್ರತಾ ಠೇವಣಿ.4‘ಮಾಲೀಕನೇ ಭದ್ರತಾ ಠೇವಣಿಯನ್ನು ಕಟ್ಟಬೇಕು.4352 ಕೋಟಿ ರೂಪಾಯಿ ಭದ್ರತಾ ಠೇವಣಿಗೆ 24 ಕೋಟಿ ರೂಪಾಯಿ ಬಡ್ಡಿ.4ಬಾಕಿ ವಸೂಲಿಗಾಗಿ ವಿಶೇಷ ಅಭಿಯಾನ.4ಉತ್ತರ ಕನ್ನಡ ಜಿಲ್ಲೆಯ 11 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.