ಶನಿವಾರ, ಆಗಸ್ಟ್ 17, 2019
27 °C
ಪಂಚರಂಗಿ

ಹೇಮಂತ ಋತು

Published:
Updated:

`ನಿಂಬೆಹುಳಿ'ಯ ಒಂದು ಪೋಸ್ಟರ್ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ. ವಿಶ್ವದ ಶ್ರೇಷ್ಠ ಕಾಮಿಡಿ ಪೋಸ್ಟರ್‌ಗಳನ್ನು ಆಯ್ಕೆ ಮಾಡುವ ಜಾಲತಾಣವೊಂದು `ನಿಂಬೆಹುಳಿ'ಯ ಭಿತ್ತಿಚಿತ್ರವನ್ನು ವಿಶೇಷವಾಗಿ ಪರಿಗಣಿಸಿದೆ. ಪ್ರಪಂಚದ 25 ಆಕರ್ಷಕ ಕಾಮಿಡಿ ಚಿತ್ರಗಳ ಪೋಸ್ಟರ್ ಪಟ್ಟಿಯಲ್ಲಿ ನಿಂಬೆಹುಳಿ ಕೂಡ ಸೇರಿದೆ. ವೆಬ್‌ಸೈಟ್‌ನಲ್ಲಿ ಸ್ಥಾನಗಿಟ್ಟಿಸಿರುವ ಮತ್ತೊಂದು ಚಿತ್ರ ಅಮೀರ್‌ಖಾನ್ ಅಭಿನಯದ `ತ್ರೀ ಈಡಿಯಟ್ಸ್'.ಇದರೊಂದಿಗೆ ಮತ್ತೊಂದು ಸುಳಿವನ್ನೂ ನಿಂಬೆಹುಳಿಯ ನಿರ್ದೇಶಕ ಹೇಮಂತ್ ಹೆಗಡೆ ಬಿಟ್ಟುಕೊಟ್ಟರು. ಸೆಪ್ಟೆಂಬರ್‌ನಲ್ಲಿ ಅವರ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರುತ್ತಿದೆ. ಕೊಡಗಿನ ಎರಡು ಮನೆತನಗಳ ನಡುವಿನ ವೈಷಮ್ಯ ಚಿತ್ರದ ಹಿನ್ನೆಲೆಗೆ ಇದೆ. ಅದರಿಂದ ಏಳುವ ನಿಗೂಢ ಸಂಗತಿಗಳ ಸುತ್ತ ಕತೆ ಹೆಣೆಯಲಾಗಿದೆ. ಅಂದಹಾಗೆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮುಂಬೈ ಮೂಲದ ಕಾರ್ಪೊರೇಟ್ ಕಂಪೆನಿಯೊಂದು ಚಿತ್ರವನ್ನು ನಿರ್ಮಿಸುತ್ತಿದೆ.ಮಾತು ಮತ್ತೆ `ನಿಂಬೆಹುಳಿ'ಯತ್ತ ವಾಲಿತು. ಅಶ್ಲೀಲ ದ್ವಂದ್ವಾರ್ಥಗಳೇ ಹಾಸ್ಯಚಿತ್ರಗಳ ಬಂಡವಾಳ ಎಂಬ ವಾತಾವರಣ ಇರುವ ಹೊತ್ತಿನಲ್ಲಿ ಕುಟುಂಬದೊಂದಿಗೆ ನೋಡಬಹುದಾದ ಹಾಸ್ಯ ಚಿತ್ರ ಇದು. ಮಧ್ಯಮ ವರ್ಗದ ಜನತೆಯನ್ನೂ ಗಮನದಲ್ಲಿಟ್ಟುಕೊಂಡು ಕತೆ ಹೆಣೆಯಲಾಗಿದೆ. ಚಿತ್ರಕತೆಯಲ್ಲೂ ಸಾಕಷ್ಟು ಪ್ರಯೋಗಗಳು ನಡೆದಿವೆ ಎನ್ನುತ್ತಾರೆ ಅವರು. ಚಿತ್ರದ ಹಾಸ್ಯವೊಂದರ ತುಣುಕು ಹೀಗಿದೆ: ಡಾನ್ ಒಬ್ಬ ತನ್ನ ಶಿಷ್ಯನನ್ನು ಮಹೇಶ್‌ಜೀ ಮಹೇಶ್‌ಜೀ ಎಂದು ಸಂಬೋಧಿಸುತ್ತಿರುತ್ತಾನೆ. ಶಿಷ್ಯನಿಗೋ ಭಾರೀ ಮುಜುಗರ. ಬಾಸ್ ಒಬ್ಬರು ತನ್ನ ಕೆಳಗಿನವನನ್ನು ಹೀಗೆ ಕರೆಯಬಹುದೇ ಎಂದು. ಆತ ಗುರುವನ್ನು `ಏಕೆ ಹೀಗೆ' ಎಂದು ಒಂದು ದಿವಸ ಕೇಳಿ ಬಿಡುತ್ತಾನೆ. ಆಗ ಡಾನ್ ನೀಡುವ ಉತ್ತರ: `ಈಗ ಬಿಸ್ಕೇಟ್‌ಗೂ ಪಾರ್ಲೇಜಿ ಎಂದು ಕರೆಯುತ್ತಾರೆ!'.ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚು ಹೆಚ್ಚು ಸಿನಿಮಾದಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ಹೇಮಂತ್ ವಾದ. ಬಾಲಿವುಡ್‌ನಲ್ಲಿ ಮೂಡಿಬರುತ್ತಿರುವ ಕಾರ್ಪೊರೇಟ್ ಸಂಸ್ಥೆ ಸಿನಿಮಾಗಳ ಉತ್ತಮ ಗುಣಮಟ್ಟವನ್ನು ಅದಕ್ಕೆ ಉದಾಹರಣೆಯಾಗಿ ನೀಡುತ್ತಾರೆ. ಎಷ್ಟೋ ನಿರ್ಮಾಪಕರು ಸಿನಿಮಾ ಪೂರ್ಣಗೊಳ್ಳುವ ಹಂತದಲ್ಲಿ ಹಣವಿಲ್ಲದೆ ಪರದಾಡುತ್ತಾರೆ. ಇದರಿಂದ ಚಿತ್ರ ಚೆನ್ನಾಗಿದ್ದರೂ ಪ್ರಚಾರ ದೊರೆಯದೆ ಹೋಗಬಹುದು ಎಂಬ ಆತಂಕ ಅವರದು.`ನಿಂಬೆಹುಳಿ'ಯ ಬಿಡುಗಡೆ ಗಜಪ್ರಸವದಂತೆ ಅವರಿಗೆ ತೋರಿದ್ದಿದೆ. ಚಿತ್ರದ ಪಾತ್ರವೊಂದರಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಅವರ ಬದಲಿಗೆ ರಮೇಶ್‌ಭಟ್ ನಟಿಸಿದರು. ಚಿತ್ರೀಕರಣ ನಡೆದು ಎಂಟು ತಿಂಗಳ ಸುದೀರ್ಘ ಸಮಯದ ನಂತರ ಡಬ್ಬಿಂಗ್ ಆರಂಭವಾಗಿತ್ತು. ನಾಯಕನಟಿಯೊಬ್ಬರು ಚಿತ್ರೀಕರಣದಲ್ಲಿ ಸರಿಯಾಗಿ ಪಾಲ್ಗೊಳ್ಳದೆ ಗೊಂದಲ ಎಬ್ಬಿಸಿದ್ದರು. ಅಂತೂ ಇಂತೂ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ `ಎಲ್ಲ ಕಾಮಿಡಿಗಳ ದೊಡ್ಡಪ್ಪ'ನಾಗಿ `ನಿಂಬೆಹುಳಿ' ಬರಲಿದೆ ಎನ್ನುತ್ತಾರೆ ಹೇಮಂತ್.ಮಾತುಗಳ ರಾಜ ಎಂದೇ ಗಾಂಧಿನಗರದಲ್ಲಿ ಪ್ರಸಿದ್ಧರಾದ ನಿರ್ದೇಶಕ ಓಂಪ್ರಕಾಶ್‌ರಾವ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಚಿತ್ರದಲ್ಲಿ ಒಂದೇ ಒಂದೂ ಸಂಭಾಷಣೆ ಇಲ್ಲ!

 

Post Comments (+)