ಹೇಮಶ್ರೀ ಕೊಲೆ : 3 ತಿಂಗಳ ಹಿಂದೆಯೇ ಸಂಚು?

7

ಹೇಮಶ್ರೀ ಕೊಲೆ : 3 ತಿಂಗಳ ಹಿಂದೆಯೇ ಸಂಚು?

Published:
Updated:
ಹೇಮಶ್ರೀ ಕೊಲೆ : 3 ತಿಂಗಳ ಹಿಂದೆಯೇ ಸಂಚು?

ಬೆಂಗಳೂರು: ಕಿರುತೆರೆ ನಟಿ ಹೇಮಶ್ರೀ ಕೊಲೆ ಮಾಡಿರುವ ಆರೋಪ ಎದುರಿಸಿ ಬಂಧನಕ್ಕೊಳಗಾಗಿರುವ ಆಕೆಯ ಪತಿ ಸುರೇಂದ್ರ ಬಾಬು ಮೂರು ತಿಂಗಳ ಹಿಂದೆಯೇ ಅನಂತಪುರದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಯೋಜನೆ ರೂಪಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಅನಂತಪುರದಿಂದ 17 ಕಿ.ಮೀ ದೂರದ ರೆಡ್ಡಿಪಾಳ್ಯದಲ್ಲಿರುವ ಮುರಳಿ ಅವರ ಫಾರ್ಮ್‌ಹೌಸ್‌ಗೆ, ಸುರೇಂದ್ರ ಮೂರು ತಿಂಗಳ ಹಿಂದೆಯೇ ಹೋಗಿ ಮೋಜಿನ ಕೂಟ ನಡೆಸಿದ್ದ. ಪತ್ನಿಯನ್ನು ಇದೇ ಫಾರ್ಮ್‌ಹೌಸ್‌ಗೆ ಕರೆದುಕೊಂಡು ಬಂದು ಅನುಭವಿಸಬೇಕು ಎಂಬ ಸಂಚನ್ನು ಆಗಲೇ ರೂಪಿಸಿಕೊಂಡಿದ್ದ. ಇದಕ್ಕಾಗಿ ರೌಡಿಗಳನ್ನು ಪತ್ನಿಯ ಹಿಂದೆ ಬಿಟ್ಟಿದ್ದ ಅರೋಪಿ, ಆಕೆಯನ್ನು ಅಪಹರಿಸುವಂತೆ ಹೇಳಿದ್ದ. ಈ ಮಾಹಿತಿ ತಿಳಿದುಕೊಂಡ ಹೇಮಶ್ರೀ, ತನಗೆ ಜೀವ ಬೆದರಿಕೆ ಇರುವುದಾಗಿ ಹದಿನೈದು ದಿನಗಳ ಹಿಂದೆ ನಗರ ಪೊಲೀಸರಿಗೆ ದೂರು ನೀಡಿದ್ದರು.ಅ. 8 ರ ಮಧ್ಯರಾತ್ರಿ ನಿದ್ರಿಸುತ್ತಿದ್ದ ಹೇಮಶ್ರೀಯ ಕೋಣೆಗೆ ಹೋದ ಸುರೇಂದ್ರ, ಕ್ಲೋರೊಫಾರ್ಮ್‌ನಿಂದ ಆಕೆಯ ಉಸಿರುಗಟ್ಟಿಸಿದ್ದ. ಪ್ರಜ್ಞೆ ತಪ್ಪಿದ ಪತ್ನಿಯನ್ನು ಚಾಲಕ ಸತೀಶ್‌ನ ನೆರವಿನಿಂದ ಕಾರಿನಲ್ಲಿ ಕೂರಿಸಿಕೊಂಡು ಬಳ್ಳಾರಿ ಮಾರ್ಗವಾಗಿ ಅನಂತಪುರ ತಲುಪಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.ಮಾರ್ಗ ಮಧ್ಯೆ ಫಾರ್ಮ್‌ಹೌಸ್ ಮಾಲೀಕ ಮುರಳಿಗೆ ಸುಮಾರು 15- 20 ಬಾರಿ ಕರೆ ಮಾಡಿದ್ದ. ಮುರಳಿ ಕರೆ ಸ್ವೀಕರಿಸದ ಕಾರಣ, ಫಾರ್ಮ್‌ಹೌಸ್‌ನ ಬಳಿ ಇದ್ದ ಕೃಷ್ಣ ಎಂಬಾತನಿಗೆ ಕರೆ ಮಾಡಿ `ನಾನು ಮತ್ತು ನನ್ನ ಪತ್ನಿ ಹೈದರಾಬಾದ್‌ಗೆ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ. ಸ್ವಲ್ಪ ಕಾಲ ವಿರಮಿಸಿಕೊಂಡು ಹೋಗುತ್ತೇವೆ. ಫಾರ್ಮ್‌ಹೌಸ್‌ನಲ್ಲಿ ಕೊಠಡಿ ವ್ಯವಸ್ಥೆ ಮಾಡುವಂತೆ ಹೇಳಿದ್ದ. ಆರೋಪಿ ಮಾಲೀಕರ ಸ್ನೇಹಿತನಾಗಿದ್ದರಿಂದ ಕೊಠಡಿ ನೀಡಲು ಕೃಷ್ಣ ಒಪ್ಪಿಕೊಂಡಿದ್ದನು.ಅ. 9ರ ನಸುಕಿನ ವೇಳೆ ಫಾರ್ಮ್ ಹೌಸ್ ಬಳಿ ಬಂದ ಸುರೇಂದ್ರ, ಪತ್ನಿಗೆ ಪ್ರಯಾಣದಿಂದ ಆಯಾಸವಾಗಿದೆ. ಮಾರ್ಗ ಮಧ್ಯೆ ಹಲವು ಬಾರಿ ವಾಂತಿಯಾಗಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕೊಠಡಿಗೆ ಕರೆದುಕೊಂಡು ಹೋಗಲು ಸಹಕರಿಸಿ ಎಂದು ಫಾರ್ಮ್‌ಹೌಸ್ ನೌಕರರ ನೆರವು ಪಡೆದು ಕೊಠಡಿಗೆ ಕರೆದುಕೊಂಡು ಹೋಗಿದ್ದ. ಆದರೆ, ಹೇಮಶ್ರೀಯ ದೇಹ, ಕೈಕಾಲುಗಳು ಸ್ವಾಧೀನ ಕಳೆದುಕೊಂಡಿದ್ದನ್ನು ಕಂಡು ಅನುಮಾನಗೊಂಡ ಫಾರ್ಮ್‌ಹೌಸ್ ಸಿಬ್ಬಂದಿ ಮುರಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.ಕೂಡಲೇ ಮುರಳಿ ವೈದ್ಯರನ್ನು ಫಾರ್ಮ್ ಹೌಸ್ ಬಳಿ ಕಳುಹಿಸಿ ತಪಾಸಣೆ ನಡೆಸಿದಾಗ ಅವರು ಸಾವನ್ನಪ್ಪಿದ್ದಾರೆ ಎಂಬುದು ಗೊತ್ತಾಯಿತು. ಇದರಿಂದ ಆತಂಕಗೊಂಡ ಚಾಲಕ ಸತೀಶ್ ಅಲ್ಲಿಂದ ಪರಾರಿಯಾಗಿದ್ದ. ಆದ್ದರಿಂದ ಮುರಳಿ, ಸ್ನೇಹಿತನ ಕಾರನ್ನು ಸುರೇಂದ್ರನಿಗೆ ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.`ಮರಣೋತ್ತರ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಬುಧವಾರ ಪೊಲೀಸರ ಕೈಸೇರಲಿವೆ. ಈಗಾಗಲೇ ಹೇಮಶ್ರೀ ಆಪ್ತ ಮಂಜುನಾಥ್ ಹಾಗೂ ಫಾರ್ಮ್‌ಹೌಸ್ ಮಾಲೀಕ ಮುರಳಿವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಹೇಮಶ್ರೀ ಪೋಷಕರು ಅಸ್ಥಿ ವಿಸರ್ಜನೆಗೆ ವಾರಣಾಸಿಗೆ ಹೋಗಿದ್ದಾರೆ. ಅವರ ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು~ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry