ಹೇಮಶ್ರೀ ಮುಖದಲ್ಲಿ ಗಾಯದ ಗುರುತು

7

ಹೇಮಶ್ರೀ ಮುಖದಲ್ಲಿ ಗಾಯದ ಗುರುತು

Published:
Updated:
ಹೇಮಶ್ರೀ ಮುಖದಲ್ಲಿ ಗಾಯದ ಗುರುತು

ಬೆಂಗಳೂರು: ಕಿರುತೆರೆ ನಟಿ ಹೇಮಶ್ರೀ (28) ಸಾವಿನ ಸಂಬಂಧ ಪೊಲೀಸರು ಆಕೆಯ ಪತಿ ಸುರೇಂದ್ರ ಬಾಬುವನ್ನು (52) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತಿಯೊಂದಿಗೆ ಮಂಗಳವಾರ ಅನಂತಪುರಕ್ಕೆ ಹೋಗುವಾಗ ಹೇಮಶ್ರೀ ಸಾವನ್ನಪ್ಪಿದ್ದರು.`ಮಾರ್ಗ ಮಧ್ಯೆ ಆಕೆ ಅಸ್ವಸ್ಥಗೊಂಡಿದ್ದರಿಂದ ಬೆಂಗಳೂರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದೆ. ಆದರೆ ಆಕೆ ಮೃತಳಾಗಿದ್ದಾಳೆ ಎಂದು ವೈದ್ಯರು ಹೇಳಿದರು~ ಎಂಬುದಾಗಿ ಸುರೇಂದ್ರ ಬಾಬು ವಿಚಾರಣೆ ವೇಳೆ ತಿಳಿಸಿದ್ದರು. ಹೀಗಾಗಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.ಆದರೆ, ಹೇಮಶ್ರೀ ತಂದೆ ನಾಗರಾಜ್ ಅವರು, `ಅಳಿಯನೇ ಮಗಳನ್ನು ಕೊಲೆ ಮಾಡಿದ್ದಾನೆ~ ಎಂದು ಬುಧವಾರ ದೂರು ನೀಡಿದ್ದಾರೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡು ಬಾಬುವಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.`ಸುರೇಂದ್ರ, ಮಗಳನ್ನು ಅನಂತಪುರಕ್ಕೆ ಏಕೆ ಕರೆದುಕೊಂಡು ಹೋಗಿದ್ದ ಎಂಬುದು ಗೊತ್ತಿಲ್ಲ. ಮಾರ್ಗ ಮಧ್ಯೆ ಪತ್ನಿ ಅಸ್ವಸ್ಥಗೊಂಡಳು ಎಂದು ಹೇಳಿರುವ ಸುರೇಂದ್ರ, ಆಕೆಯನ್ನು ಬೆಂಗಳೂರಿಗೆ ಕರೆತರುವ ಬದಲು ಅನಂತಪುರದಲ್ಲೇ ಆಸ್ಪತ್ರೆಗೆ ದಾಖಲಿಸಬಹುದಿತ್ತು. ದಂಪತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಪತಿಯಿಂದ ದೂರ ಉಳಿಯುವುದಾಗಿ ಮಗಳು ಪದೇ ಪದೇ ಹೇಳುತ್ತಿದ್ದಳು. ಮಗಳ ತುಟಿ, ಮುಖ ಹಾಗೂ ತಲೆಯ ಮೇಲೆ ತರಚಿದ ಗಾಯಗಳಾಗಿವೆ. ಆತನೇ, ಮಗಳನ್ನು ಕೊಲೆ ಮಾಡಿದ್ದಾನೆ~ ಎಂದು ನಾಗರಾಜ್ ಎರಡು ಪುಟಗಳ ದೂರಿನಲ್ಲಿ ಹೇಳಿದ್ದಾರೆ.ಸಾವಿಗೆ ಪೋಷಕರೇ ಕಾರಣ: `ಇಷ್ಟವಿಲ್ಲದಿದ್ದರೂ ಪೋಷಕರು ಬಲವಂತವಾಗಿ ಸುರೇಂದ್ರ ಬಾಬು ಜತೆ ಆಕೆಯ ವಿವಾಹ ಮಾಡಿದ್ದರು. ಹೀಗಾಗಿ ಅವಳ ಸಾವಿಗೆ ಹೇಮಶ್ರೀ ಪೋಷಕರೇ ಕಾರಣ. ಗಂಡಿನ ಹಿನ್ನೆಲೆ ತಿಳಿಯದೇ ನೀವು ನನ್ನ ಜೀವನವನ್ನು ಹಾಳು ಮಾಡುತ್ತಿದ್ದೀರಿ. ಈ ಮದುವೆ ಬೇಡ ಎಂದು ಹೇಮಶ್ರೀ ಪೋಷಕರಲ್ಲಿ ಬೇಡಿಕೊಂಡಿದ್ದಳು. ಆದರೆ, ಮಗಳ ಮಾತನ್ನು ಕೇಳದೆ ಆತನೊಂದಿಗೆ ಬಲವಂತವಾಗಿ ವಿವಾಹ ಮಾಡಿಸಿದ್ದರು~ ಎಂದು ಹೇಮಶ್ರೀ ಸ್ನೇಹಿತೆಯರು ಆರೋಪಿಸಿದ್ದಾರೆ.`ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮರಣೋತ್ತರ ಪರೀಕ್ಷೆ ನಡೆಯಿತು. ಹೇಮಶ್ರೀ ಅವರ ಮುಖ ಹಾಗೂ ತುಟಿಯ ಬಳಿ ಗಾಯದ ಗುರುತುಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರ ನೆರವು ಕೋರಿದ್ದೇವೆ. ಅವರ ವರದಿ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.ಮದುವೆ ಸಂದರ್ಭದಲ್ಲಿ ಸುರೇಂದ್ರ ತನ್ನ ವಯಸ್ಸು 32 ಎಂದು ಸುಳ್ಳು ಹೇಳಿದ್ದರು. ಆದರೆ, ಅವರ ವಯಸ್ಸು ಐವತ್ತು ದಾಟಿದೆ ಎಂಬುದು ನಂತರ ಗೊತ್ತಾಯಿತು. ಈ ಮದುವೆಗೆ ನಮ್ಮ ಪೋಷಕರೂ ಸಹ ಒಪ್ಪಿಕೊಂಡರು.

ನನ್ನ ಕೈಕಾಲುಗಳನ್ನು ಕಟ್ಟಿ ತಿರುಪತಿಗೆ ಕರೆದುಕೊಂಡು ಹೋದ ಸುರೇಂದ್ರ, ಜೂ.22, 2011ರಂದು ಬಲವಂತವಾಗಿ ನನ್ನನ್ನು ಮದುವೆಯಾದರು. ಅವರೊಂದಿಗೆ ಜೀವನ ನಡೆಸಲು ನನಗೆ ಇಷ್ಟವಿಲ್ಲ~ ಎಂದು ಹೇಮಶ್ರೀ ಚನ್ನಮ್ಮನಕೆರೆ ಅಚ್ಚಕಟ್ಟು, ಕಬ್ಬನ್‌ಪಾರ್ಕ್, ಹಲಸೂರು ಗೇಟ್ ಮಹಿಳಾ ಠಾಣೆಗಳಲ್ಲಿ ಹಲವು ಬಾರಿ ದೂರು ನೀಡಿದ್ದರು. ಇತ್ತೀಚೆಗೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರಿಗೂ ದೂರು ಸಲ್ಲಿಸಿದ್ದರು.ವಠಾರ, ದಂಡಪಿಂಡಗಳು, ಸಾಹಸ ಲಕ್ಷ್ಮೀಯರು, ತುಳಸಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚಿನ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದ ಹೇಮಶ್ರೀ, ಕಾರ್ಯಕ್ರಮ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು. ನಂತರ ಸಿರಿವಂತ, ವರ್ಷ, ಮರ್ಮ, ಸಿನಿಮಾ ಅಲ್ಲ ರಿಯಲ್ ಸ್ಟೋರಿ, ವೀರಪರಂಪರೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ, `ನೀ ಸುಖಮೈನೇ ಕೋರಕುನ್ನಾ~ ಎಂಬ ತೆಲುಗು ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2008ರಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಮೃತರ ಅಂತ್ಯಕ್ರಿಯೆ ಮಾಗಡಿ ರಸ್ತೆಯಲ್ಲಿರುವ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ಸಂಜೆ ನಡೆಯಿತು.ಯಾರೀ ಸುರೇಂದ್ರ ಬಾಬು

`ನಗರದ ಕಗ್ಗದಾಸನಪುರದಲ್ಲಿ ವಾಸಿಯಾದ ಸುರೇಂದ್ರ ಬಾಬು, ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಸಾಕಷ್ಟು ಹಣ ಗಳಿಸಿದ್ದರು. ವೃತ್ತಿಯಲ್ಲಿ ವಕೀಲರೂ ಆಗಿದ್ದ ಅವರು ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್‌ಸಿಟಿ, ಆಡುಗೋಡಿ, ಕೆ.ಆರ್.ಪುರದಲ್ಲಿ ನೂರಾರು ಎಕರೆ ಜಮೀನು ಪಡೆದು ಲೇಔಟ್‌ಗಳನ್ನು ನಿರ್ಮಿಸಿದ್ದರು.

 

ನಂತರ 2008ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಜಮೀನು ವಿವಾದದ ವಿಷಯವಾಗಿ ಸುರೇಂದ್ರ ಬಾಬು ವಿರುದ್ಧ ಬೈಯಪ್ಪನಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮದುವೆ ಸಂದರ್ಭದಲ್ಲಿ ಹೇಮಶ್ರೀಗೆ ಐವತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮಾಡಿಸಿ ಕೊಟ್ಟಿದ್ದರು~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry