ಹೇಮಾವತಿಯಲ್ಲಿ ಹೂಳಿಲ್ಲ, ಆದರೂ ನೀರಿಲ್ಲ!

7

ಹೇಮಾವತಿಯಲ್ಲಿ ಹೂಳಿಲ್ಲ, ಆದರೂ ನೀರಿಲ್ಲ!

Published:
Updated:
ಹೇಮಾವತಿಯಲ್ಲಿ ಹೂಳಿಲ್ಲ, ಆದರೂ ನೀರಿಲ್ಲ!

ಹಾಸನ: ಹೇಮಾವತಿ ಜಲಾಶಯ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಾದರೂ ಭರ್ತಿಯಾಗುವ ಈ ಜಲಾಶಯ, ಕಳೆದ ಎರಡು ವರ್ಷಗಳಿಂದ ತಡವಾಗಿ ಭರ್ತಿಯಾಗುತ್ತಿದೆ. ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗದಿರುವುದೂ ಇದಕ್ಕೆ ಕಾರಣ.ಹಿಂದಿನ ವರ್ಷ ತಡವಾಗಿ ಭರ್ತಿಯಾದರೂ ಹಿಂಗಾರು ಮಳೆ ಚೆನ್ನಾಗಿ ಸುರಿದ ಪರಿಣಾಮ ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿತ್ತು. ಆದರೆ ಕಳೆದ ವರ್ಷ ಪರಿಸ್ಥಿತಿ ಹಾಗಿರಲಿಲ್ಲ. ಜಲಾಶಯ ತುಂಬ ತಡವಾಗಿ ಭರ್ತಿಯಾಯಿತು. ಜಲಾಶಯ ಭರ್ತಿಯಾಗುತ್ತಿದ್ದಂತೆ ಮಳೆಯೂ ಕೈಕೊಟ್ಟಿತು. ಇದರಿಂದಾಗಿ ಬಾಗಿನ ಅರ್ಪಿಸುವ ದಿನ ಒಂದು ಗೇಟ್‌ನಿಂದ ಮಾತ್ರ ಸ್ವಲ್ಪ ಹೊತ್ತು ನೀರು ಬಿಡಲಾಯಿತು. ಬಾಗಿನ ಕೊಟ್ಟು ಸಚಿವರು ಹೋಗುತ್ತಿದ್ದಂತೆ ಕ್ರೆಸ್ಟ್ ಗೇಟನ್ನೂ ಮುಚ್ಚಲಾಗಿತ್ತು. ಮಳೆಯ ಕೊರತೆಯಿಂದಾಗಿ ಈ ಬಾರಿ ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ ಹಲವು ದಿನಗಳಾಗಿವೆ. ವಿದ್ಯುತ್  ಉತ್ಪಾದನೆಯೂ ಸ್ಥಗಿತಗೊಂಡಿದೆ.ಈಗ ಜಲಾಶಯದ ನೀರಿನ ಮಟ್ಟ ತುಂಬ ಕುಸಿತ ಕಂಡಿದೆ. ನಾಲೆಗಳಿಗೆ ನೀರು ಹರಿಸಲು ಹೋದರೆ ಕುಡಿಯುವ ನೀರಿಗೂ ಸಮಸ್ಯೆಯಾಗಬಹುದು ಎಂಬ ಭೀತಿ ಉಂಟಾಗಿದೆ.ಸಕಾಲಕ್ಕೆ ಮಳೆ ಆರಂಭವಾಗಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಾದರೆ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಹೇಮಾವತಿ ಜಲಾಶಯ ಭರ್ತಿಯಾಗುತ್ತದೆ. ಜೂನ್ ಕೊನೆಯ ವಾರದಿಂದ ಮುಂಗಾರು ಬೆಳೆಗಳಿಗಾಗಿ ನಾಲೆಗಳಲ್ಲಿ ನೀರು ಹರಿಸಲಾಗುತ್ತದೆ. ಇತ್ತ ನಾಲೆಗಳಲ್ಲಿ ನೀರು ಹೋಗುತ್ತಿದ್ದರೂ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿರುವುದರಿಂದ ಒಳಹರಿವೂ ಹೆಚ್ಚಾಗಿ ಜಲಾಶಯ ಭರ್ತಿಯಾಗುತ್ತಲೇ ಇರುತ್ತದೆ.ಮುಂಗಾರು ಬೆಳೆಯ ನಂತರವೂ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೆ ಬೇಸಿಗೆ ಬೆಳೆಗೆ ನೀರು ಕೊಡುವ ಸಂಪ್ರದಾಯವೂ ಇದೆ. (ಹೇಮಾವತಿ ಯೋಜನೆಯ ಪ್ರಕಾರ ಬೇಸಿಗೆ ಬೆಳೆಗೆ ನೀರು ಕೊಡಬೇಕಾಗಿಲ್ಲ).ಕಳೆದ ವರ್ಷ ಹೇಮಾವತಿ ಜಲಾಶಯ ತುಂಬಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ. ಯೋಜನೆಯ ಪ್ರಕಾರ 78.68 ಟಿ.ಎಂ.ಸಿ ನೀರು ಜಲಾಶಯಕ್ಕೆ ಬರಬೇಕು, 83.07 ಟಿ.ಎಂ.ಸಿ ಬಂದಿದೆ. ಜೂನ್ ಮೊದಲವಾರದಿಂದಲೇ ನಾಲೆಗಳಲ್ಲಿ ನೀರು ಹರಿಸಲಾಗಿದೆ.2010ರಲ್ಲಿ ಅಕ್ಟೋಬರ್ ಕೊನೆಯವರೆಗೂ ಜಲಾಶಯದ ಒಳಹರಿವು ಚೆನ್ನಾಗಿತ್ತು. ಈ ವರ್ಷ ಜಲಾಶಯ ಭರ್ತಿಯಾದ ಬಳಿಕ ಮಳೆಯ ಕೊರತೆ ಉಂಟಾಗಿ, ಒಳಹರಿವು ಸಂಪೂರ್ಣವಾಗಿ ಕುಸಿದ ಪರಿಣಾಮ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಲೇ ಹೋಯಿತು. 2010ರಲ್ಲಿ ಬೇಸಿಗೆ ಬೆಳೆಗೂ ನೀರು ಕೊಟ್ಟಿದ್ದರೆ, ಈ ವರ್ಷ ಅದು ಸಾಧ್ಯವಾಗಿಲ್ಲ. ಪ್ರಸಕ್ತ ಜಲಾಶಯದಲ್ಲಿ 6.41 ಟಿ.ಎಂ.ಸಿ ನೀರಿನ ಸಂಗ್ರಹವಿದೆ. ಅದರಲ್ಲಿ 4 ಟಿ.ಎಂ.ಸಿ ಡೆಡ್ ಸ್ಟೋರೇಜ್.ಜಲಾಶಯಗಳಲ್ಲಿ ನೀರು ಕಡಿಮೆಯಾದಾಗಲೆಲ್ಲ ಹೂಳು ತುಂಬಿದೆಯೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಜಲಾಶಯದ ಬಗ್ಗೆ ಈ ಭಾಗದ ರೈತರಿಗೆ ಈಚಿನವರೆಗೂ ಇಂಥ ಸಂದೇಹ ಮೂಡಿರಲಿಲ್ಲ. ಜಲಾಶಯ ಬೇಗ ಖಾಲಿಯಾಗುತ್ತಿರುವುದರಿಂದ ಈಗ ಅಂಥ ಸಂದೇಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯ ನಿರ್ಮಾಣಗೊಂಡು ಮೂರು ದಶಕಗಳು ಕಳೆದಿವೆ. ಈವರೆಗೆ ಒಮ್ಮೆಯೂ ಹೂಳೆತ್ತುವ ಕಾರ್ಯ ನಡೆದಿಲ್ಲ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿರಬಹುದು ಎಂಬುದು ರೈತರ ಸಂದೇಹ. ಆದರೆ ಜಲಾಶಯದ ಎಂಜಿನಿಯರ್‌ಗಳು ಅದನ್ನು ಅಲ್ಲಗಳೆಯುತ್ತಾರೆ.`ರಾಜ್ಯದ ಇತರ ಜಲಾಶಯಗಳಿಗೂ ಹೇಮಾವತಿ ಜಲಾಶಯಕ್ಕೂ ತುಂಬ ವ್ಯತ್ಯಾಸವಿದೆ. ಈ ಜಲಾಶಯದ ಬಹುತೇಕ ಅಚ್ಚುಕಟ್ಟು ಪ್ರದೇಶ ದಟ್ಟ ಅರಣ್ಯವಾಗಿದೆ. ಆದ್ದರಿಂದ ನೀರಿನೊಂದಿಗೆ ಮಣ್ಣು ಹರಿದು ಬರುವ ಸಾಧ್ಯತೆ ತೀರ ಕಡಿಮೆ.ಆರಂಭದ ಮಳೆಗೆ ನದಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಹರಿದು ಬರುತ್ತದೆ. ಹಾಗೆ ಬಂದಿರುವ ಸ್ವಲ್ಪ ಕಲ್ಲು-ಮಣ್ಣು ಜಲಾಶಯದಲ್ಲಿ ಶೇಖರಣೆಯಾಗಿರಬಹುದು. ಆದರೆ ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುವಷ್ಟು ಹೂಳು ತುಂಬಿಲ್ಲ ಎಂಬುದು ನಮ್ಮ ಅಭಿಪ್ರಾಯ~ ಎಂದು ಹೇಮಾವತಿ ಜಲಾಶಯದ ಎಂಜಿನಿಯರ್ ವೆಂಕಟರಮಣಪ್ಪ ನುಡಿಯುತ್ತಾರೆ.ಇತ್ತೀಚೆಗೆ ಬೆಂಗಳೂರಿನಿಂದ ಕರ್ನಾಟಕ ಎಂಜಿನಿಯರಿಂಗ್ ರೀಸರ್ಚ್ ಸ್ಟೇಶನ್ ಸಂಸ್ಥೆಯವರು ಬಂದು ಅಧ್ಯಯನ ಮಾಡಿದ್ದಾರೆ. ದೋಣಿಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನಿಟ್ಟು ಹೂಳಿನ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಆ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ. ವರದಿ ಬಂದರೆ ಎಷ್ಟು ಹೂಳು ತುಂಬಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬಹುದು.ಹೇಮಾವತಿ ಜಲಾಶಯಕ್ಕೆ ಸುಮಾರು 2810 ಚದರ ಕಿ.ಮೀ. ಅಚ್ಚುಕಟ್ಟು ಪ್ರದೇಶವಿದೆ. ಬಹುತೇಕ ಭಾಗ ಅರಣ್ಯ ಪ್ರದೇಶವಾಗಿರುವುದರಿಂದ ಭೂಸವೆತ ತೀರ ಕಡಿಮೆ.ಹೂಳು ತುಂಬಿಕೊಳ್ಳದ ರೀತಿಯಲ್ಲಿಯೇ ಇಡೀ ಜಲಾಶಯವನ್ನು ವಿನ್ಯಾಸ ಮಾಡಲಾಗಿದೆ ಎಂದು ವೆಂಕಟರಮಣಪ್ಪ ನುಡಿಯುತ್ತಾರೆ.ಜಲಾಶಯದಲ್ಲಿ ಹೂಳೆತ್ತುವ ಕಾರ್ಯ ಮಾಡದಿದ್ದರೂ, ನಾಲೆಗಳನ್ನು ಶುಚಿಗೊಳಿಸುವ ಕಾರ್ಯ ಆಗಲೇಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಹೇಮಾವತಿ ಜಲಾಶಯದ ನಾಲೆಗಳಲ್ಲಿ ಕೆಲವೆಡೆ ಹೂಳು ತುಂಬಿಕೊಂಡಿದೆ. ಕೆಲವೆಡೆ ಶಿಥಿಲಗೊಂಡು ನೀರು ಪೋಲಾಗುತ್ತಿದೆ.ಕಳೆದ ಕೆಲವು ತಿಂಗಳುಗಳಿಂದ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ನಾಲೆಗಳನ್ನು ಶುಚಿಗೊಳಿಸಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಸಹ ಆಗ್ರಹಿಸುತ್ತಿದ್ದಾರೆ.1981ರಲ್ಲಿ ಹೇಮಾವತಿ ಜಲಾಶಯದ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ನಾಲೆಗಳ ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗಿಲ್ಲ. ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ 1.60 ಲಕ್ಷ ಹೆಕ್ಟೇರ್ ಭೂಮಿಗೆ ಈ ಜಲಾಶಯದಿಂದ ನೀರನ್ನು ಪೂರೈಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry