ಗುರುವಾರ , ನವೆಂಬರ್ 14, 2019
18 °C
ಪಂಚರಂಗಿ

ಹೇಮಾ ಹಿತವಚನ

Published:
Updated:

ಚಿತ್ರರಂಗದಲ್ಲಿ ತುಂಬ ಎತ್ತರಕ್ಕೆ ಬೆಳೆಯಬೇಕೆಂಬ ಕನಸು ಹೊತ್ತು ಬರುವ ಹೊಸ ಹುಡುಗಿಯರೇ ಸ್ವಲ್ಪ ಇಲ್ಲಿ ಕೇಳಿ. ತಲೆ ನೆರೆತ ಜನಪ್ರಿಯ ಹಿರಿಯ ನಟರ ಚಿತ್ರಗಳಲ್ಲಿ ನಟಿಸುವ ಮೂಲಕ ನಿಮ್ಮ ಚಿತ್ರ ಪಯಣ ಆರಂಭಿಸಬೇಡಿ. ಒಂದು ವೇಳೆ ಹಿರಿಯ ನಟರ ಚಿತ್ರಗಳಲ್ಲಿ ಕಾಣಿಸಿಕೊಂಡರೆ ನೀವು ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಕನಸು ಚಿಗುರುವ ಮೊದಲೇ ಮುರುಟಿ ಹೋಗುತ್ತದೆ' ಹೀಗೆ ಕಿರಿಯ ನಟಿಯರಿಗೆ ಹಿತವಚನ ನೀಡುತ್ತಿದ್ದಾರೆ ಹಿರಿಯ ನಟಿ ಹೇಮಾ ಮಾಲಿನಿ.`ನಟಿಯರಾದ ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ ಈ ಮೂವರು ಬಾಲಿವುಡ್‌ಗೆ ಎಂಟ್ರಿ ನೀಡಿದ್ದು ಹಿರಿಯ ನಟರ ಚಿತ್ರಗಳ ಮೂಲಕವೇ. ಜನಪ್ರಿಯ ಹಿರಿಯ ನಟರ ತೋಳತೆಕ್ಕೆಯಲ್ಲಿ ಬಂದಿಯಾಗಿ ಹಾಡಿ-ಕುಣಿಯುವುದು ಮೊದ ಮೊದಲಿಗೆ ಚೆಂದ ಅನಿಸುತ್ತದೆ. ಆದರೆ, ಅಂಥ ನಟಿಯರ ಜೀವನ ಮುಂದೊಂದು ದಿನ ಮುರುಟಿಕೊಳ್ಳುತ್ತದೆ' ಎಂದು ದೂರಾಲೋಚನೆಯ ಮಾತುಗಳನ್ನಾಡಿದ್ದಾರೆ ಹೇಮಾ.`ಸಾಮಾನ್ಯವಾಗಿ ಹೊಸಬರೆಲ್ಲಾ ಜನಪ್ರಿಯ ಹಿರಿಯ ನಟರ ಜತೆ ನಟಿಸಲು ಉತ್ಸುಕರಾಗಿರುತ್ತಾರೆ. ಅದು ಅವರ ವೃತ್ತಿ ಜೀವನಕ್ಕೆ ಮಾರಕ ಎಂಬ ಅರಿವು ಅವರಲ್ಲಿ ಇರುವುದಿಲ್ಲ. ಸದಾ ಹಿರಿಯ ನಟರ ಚಿತ್ರಗಳಲ್ಲೇ ನಟಿಸುವ ಬದಲು ಯುವ ನಟರು ಹಾಗೂ ಹೊಸಬರೊಂದಿಗೆ ನಟಿಸಿದರೆ ಆ ಹುಡುಗಿಯರು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಬಹುದು. ಬೆಳವಣಿಗೆ ಕಾಣಬಹುದು. ಈ ಪ್ರವೃತ್ತಿಯನ್ನು ಎಲ್ಲ ನಟಿಯರು ಅನುಸರಿಸಿದರೆ ಅವರ ವೃತ್ತಿ ಜೀವನ ಕ್ಷಿಪ್ರಗತಿಯಲ್ಲಿ ಬದಲಾವಣೆ ಕಾಣುತ್ತದೆ' ಎಂದಿದ್ದಾರೆ 64ರ ಹರೆಯದ ಹೇಮಾ ಮಾಲಿನಿ.ದೀಪಿಕಾ ಮತ್ತು ಅನುಷ್ಕಾ ಬಾಲಿವುಡ್‌ನಲ್ಲಿ ತಮ್ಮ ಖಾತೆ ತೆರೆದದ್ದು ಶಾರುಖ್ ಖಾನ್ ನಾಯಕರಾಗಿದ್ದ ಚಿತ್ರದ ಮೂಲಕ. ದೀಪಿಕಾ `ಓಂ ಶಾಂತಿ ಓಂ' ಚಿತ್ರದಲ್ಲಿ ಶಾರುಖ್ ಜತೆ ಅಭಿನಯಿಸಿದರೆ, ಅನುಷ್ಕಾ `ರಬ್ ನೆ ಬನಾದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಸೋನಾಕ್ಷಿ ಸಿನ್ಹಾ ಸಲ್ಮಾನ್ ಖಾನ್ ಜತೆ ಅಭಿನಯಿಸುವ ಮೂಲಕ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದರು. ಈ ಕುರಿತಂತೆ ತಮ್ಮದೇ ಉದಾಹರಣೆ ನೀಡುವ ಹೇಮಾ ಮಾಲಿನಿ ಹೇಳುವುದು ಹೀಗೆ: `ನಾನು ಇಂಡಸ್ಟ್ರಿಗೆ ಕಾಲಿಟ್ಟದ್ದು `ಸಪ್ನೋಂ ಕಾ ಸೌದಾಗರ್' ಚಿತ್ರದ ಮುಖಾಂತರ. ಈ ಚಿತ್ರಕ್ಕೆ ರಾಜ್ ಸಾಬ್ ನಾಯಕ. (ರಾಜ್ ಕಪೂರ್) ಆ ಸಂದರ್ಭದಲ್ಲಿ ಅವರು ಜನಪ್ರಿಯ ನಟ. ಹಾಗೆಯೇ ವಯಸ್ಸಿನಲ್ಲಿ ತುಂಬಾ ಹಿರಿಯರು'.ಅಂದಹಾಗೆ, ಹೇಮಾ ಮಾಲಿನಿ ಈಗ `ಯಮ್ಲಾ ಪಗ್ಲಾ ದಿವಾನಾ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಡಿಯೋಲ್‌ದ್ವಯರು ನಟಿಸಿರುವ ಈ ಚಿತ್ರ ದೊಡ್ಡ ಯಶಸ್ಸು ಕಾಣುತ್ತದೆ ಎಂಬುದು ಹೇಮಾ ನಂಬಿಕೆ. `ಎಲ್ಲರಿಗಿಂತ ಮೊದಲು ಈ ಚಿತ್ರದ ಪ್ರೋಮೊವನ್ನು ನನಗೆ ತೋರಿಸಿದ್ದಾರೆ. ಖುಷಿಯಿಂದಲೇ ಅದನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ' ಎಂದಿದ್ದಾರೆ ಹೇಮಾ. ಅಂದಹಾಗೆ, `ಯಮ್ಲಾ ಪಗ್ಲಾ ದಿವಾನಾ 2' ಚಿತ್ರದಲ್ಲಿ ಹೇಮಾ ಪತಿ ಧರ್ಮೇಂದ್ರ ಕೂಡ ಅಭಿನಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)