ಹೇರಿಕೆ ಸರಿಯಲ್ಲ

ಶುಕ್ರವಾರ, ಜೂಲೈ 19, 2019
24 °C

ಹೇರಿಕೆ ಸರಿಯಲ್ಲ

Published:
Updated:

ಹಿಂದಿ ಹೇರಿಕೆ ವಿವಾದದ ಭೂತ  ಸುಮಾರು ಐದು ದಶಕಗಳ ನಂತರ ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಕಂಡು ಬರು­ತ್ತಿವೆ. ಅಧಿಕೃತ ಆದೇಶ, ಸೂಚನಾ ಪತ್ರಗಳು ಮತ್ತು ಸಾಮಾಜಿಕ ಜಾಲ­ತಾಣ­ಗಳಲ್ಲಿ ಹಿಂದಿ ಬಳಕೆಗೆ ಪ್ರಾಧಾನ್ಯ ನೀಡುವಂತೆ ಕೇಂದ್ರ ಸರ್ಕಾರದ ಇಲಾಖೆಗಳು, ಬ್ಯಾಂಕ್‌ಗಳು, ಸಾರ್ವಜನಿಕ ಉದ್ಯಮಗಳಿಗೆ ಕೇಂದ್ರ ಗೃಹ ಸಚಿ­ವಾ­ಲಯದ ಅಧಿಕೃತ ಭಾಷಾ ವಿಭಾಗದ ನಿರ್ದೇಶಕರು ಕಳಿಸಿದ ಸುತ್ತೋಲೆ ಇದಕ್ಕೆಲ್ಲ ಮೂಲ ಕಾರಣ.ಗುಜರಾತಿ ಭಾಷಿಕ ಪ್ರಧಾನಿಯ ಆಡಳಿತದಲ್ಲಿಯೇ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಸವಾರಿಗೆ ಉತ್ತೇಜನ ಕೊಡುವ ಈ ನೀತಿ ಎಳ್ಳಷ್ಟೂ ಸರಿಯಲ್ಲ. ಏಕೆಂದರೆ ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಸ್ಥಾನಮಾನವೇನೂ ಇಲ್ಲ.  ಕನ್ನಡ, ತಮಿಳು, ಅಸ್ಸಾಮಿ ಹೀಗೆ ಇತರೆಲ್ಲ ಅಧಿಕೃತ ಭಾರತೀಯ ಭಾಷೆಗಳಂತೆ ಅದೂ ಒಂದು ಭಾಷೆಯಷ್ಟೆ. ಆದರೂ ಅಗ್ರಪೂಜೆಗೆ ಅದೊಂದೇ ಅರ್ಹ ಎಂಬ ಮನೋಭಾವ ಈ ಸುತ್ತೋಲೆಯ ಹಿಂದೆ ಕಾಣುತ್ತದೆ. ಈ ಮೂಲಕ ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರುವ ಯತ್ನ ಮತ್ತೆ ಪ್ರಾರಂಭವಾಗಿದೆ ಎಂಬ ಭಾವನೆ ಮೂಡು­ವಂತಾಗಿದೆ. ಈ ಸುತ್ತೋಲೆ ಹಿಂದಿಯೇತರ ಭಾಷಿಕ ರಾಜ್ಯಗಳಿಗೆ ಅನ್ವಯಿ­ಸುವುದಿಲ್ಲ ಎಂದು  ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದ್ದರೂ ಅನುಮಾನ­ವಂತೂ ಪೂರ್ಣ ಪರಿಹಾರವಾಗಿಲ್ಲ. ಏಕೆಂದರೆ ಹಿಂದಿ ಭಾಷಿಕರ ಯಜಮಾನಿಕೆ ಮನೋಭಾವ, ಇದುವರೆಗಿನ ಅನುಭವಗಳು ನಮ್ಮ ಕಣ್ಣ ಮುಂದಿವೆ.ಭಾಷೆ ಮತ್ತು ಧರ್ಮ ಅತ್ಯಂತ ಬೇಗ ಭಾವೋದ್ವೇಗಕ್ಕೆ ಕಾರಣವಾಗುವ ಸಂಗತಿ­ಗಳು. ಇವೆರಡರ ಬಗ್ಗೆಯೂ ವ್ಯವಹರಿಸುವಾಗ ತುಂಬ ಜಾಗರೂಕತೆ ಅವಶ್ಯ. ಅದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ದೇಶದ ಮುಂದೆ ಅನೇಕ ಪ್ರಮುಖ ಸಮಸ್ಯೆಗಳಿವೆ. ಅವುಗಳ ಕಡೆ ತುರ್ತು ಗಮನ ಹರಿಸಬೇಕು. ಆದರೆ ಅದೆಲ್ಲವನ್ನೂ ಬಿಟ್ಟು ಹಿಂದಿ ಭಾಷೆಗೆ ಅಗ್ರಪಟ್ಟ ಕಟ್ಟುವ ಹುನ್ನಾರ ಸರಿಯಲ್ಲ. 2001ರ ಜನಗಣತಿ ಪ್ರಕಾರ ನಮ್ಮ ದೇಶದಲ್ಲಿ ಹಿಂದಿ ಮಾತೃಭಾಷಿಕರ ಪ್ರಮಾಣ ಶೇ 40ರ ಆಸುಪಾಸಿನಲ್ಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ಉತ್ತರದ ಕೈಬೆರಳೆಣಿಕೆಯಷ್ಟು ರಾಜ್ಯಗಳಿಗೆ ಸೀಮಿತ­ವಾದ ಭಾಷೆಯೊಂದನ್ನು ಇಡೀ ದೇಶದ ಮೇಲೆ ಹೇರುವುದು  ಸರಿಯಲ್ಲ.ಹಾಗೆ ನೋಡಿದರೆ ದಕ್ಷಿಣದ ರಾಜ್ಯಗಳೂ ಸೇರಿದಂತೆ ಹಿಂದೀಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ಇತ್ತೀಚಿನ ದಶಕಗಳಲ್ಲಿ ಕಡಿಮೆ­ಯಾಗುತ್ತ ಬಂದಿತ್ತು. ಹತ್ತಾರು ಇತರ ಭಾಷೆಯಂತೆ ಹಿಂದಿಯನ್ನೂ ಜನ ಸ್ವೀಕರಿಸಿದ್ದರು. ಹಿಂದಿ ಸಿನಿಮಾಗಳು, ಟಿ.ವಿ. ವಾಹಿನಿಗಳು ಈ ದಿಸೆಯಲ್ಲಿ ನಮಗೆ ಅರಿವಿಲ್ಲದಂತೆಯೇ ನಮ್ಮಲ್ಲಿ ಹಿಂದಿ ವಿರೋಧಿ ಭಾವನೆ ತಗ್ಗಿಸಿದ್ದವು. ಬದ­ಲಾಗಿ ಹಿಂದಿ ಪ್ರೇಮ ಹೆಚ್ಚಿಸಿದ್ದವು.  ಹಿಂದಿ ಭಾಷೆಗೂ ಸಮಾನ ಸ್ಥಾನಮಾನವುಳ್ಳ ತ್ರಿಭಾಷಾ ಸೂತ್ರ ಒಪ್ಪಿಕೊಂಡು ಬಹಳ ಹಿಂದೆಯೇ ದಕ್ಷಿಣದ ರಾಜ್ಯಗಳು ಔದಾರ್ಯ ಪ್ರದರ್ಶಿಸಿದ್ದವು. ಆದರೂ ಈ ಸಜ್ಜನಿಕೆ­ಯನ್ನು ಕಡೆಗಣಿಸಿ ಹಿಂದಿಗೆ ಪಟ್ಟ ಕಟ್ಟುವ ಸುತ್ತೋಲೆ ಹೊರಡಿಸಿರುವುದು ಭಾಷಾ ವಿವಾದದ ಭೂತವನ್ನು ನಿದ್ದೆಯಿಂದ ಬಡಿದೆಬ್ಬಿಸಿದಂತಾಗಿದೆ. ಈ ಸಂದರ್ಭದಲ್ಲಿ ಇದೊಂದು ಅನಗತ್ಯ ದುಸ್ಸಾಹಸ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಧಾನಿಯವರ ಅಭಿಲಾಷೆಗೆ ವಿರುದ್ಧ. ಹೇರಿಕೆ ಪ್ರವೃತ್ತಿ ಇಲ್ಲಿಗೇ ನಿಲ್ಲಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry