ಶನಿವಾರ, ಮೇ 8, 2021
20 °C

`ಹೇರ್ ಯೋಗ'ದ ಹರಿಕಾರ

ಸಂದರ್ಶನ: ಎಸ್ಸೆನ್ Updated:

ಅಕ್ಷರ ಗಾತ್ರ : | |

`ಹೇರ್ ಯೋಗ'ದ ಹರಿಕಾರ

ಇಲ್ಲಿನವರು ಫ್ಯಾಷನ್‌ನಲ್ಲಿ ತುಂಬಾ ಹಿಂದಿದ್ದಾರೆ ಎನ್ನುತ್ತಾ ಕೈಯಲ್ಲಿ ಕತ್ತರಿ, ಬಾಚಣಿಕೆ ಹಿಡಿದೇ ಬಿರುಸಿನಿಂದ ನಡೆದು ಬಂದ ಅಂತರರಾಷ್ಟ್ರೀಯ ಕೇಶ ವಿನ್ಯಾಸಕ, ಸೌಂದರ್ಯ ತಜ್ಞ ಜಾವೇದ್ ಹಬೀಬ್ `ಹೇರ್ ಯೋಗ' ಕುರಿತು ಪ್ರಾತ್ಯಕ್ಷಿಕೆ ನೀಡಲೆಂದೇ ಇಲ್ಲಿಗೆ ಬಂದಿದ್ದರು.ಮಾತಿಗೆ ಮುನ್ನ ತಮ್ಮ ತಲೆಗೂದಲನ್ನು ಸವರಿಕೊಳ್ಳುತ್ತಿದ್ದ ಜಾವೇದ್ ಪರ್ಮನೆಂಟ್ ಬ್ಲೋ ಡ್ರೈ, 3ಡಿ ಕಲರ್ ಟೆಕ್ನಿಕ್, ಅಡ್ವಾನ್ಸ್‌ಡ್ ಕಲರಿಂಗ್, ಕ್ರಿಯೇಟಿವ್ ಹೈಲೈಟ್ಸ್, ಇನೊವೇಟಿವ್ ಟೆಕ್ಸ್‌ಚರೈಸಿಂಗ್ ಕಟ್ ಹೀಗೆ ಕೇಶರಕ್ಷಣೆಯ ಹಲವು ದಾರಿಗಳ ಬಗ್ಗೆ ಮಾತನಾಡಿದರು. ಕೆಲವು ಸಲಹೆಗಳನ್ನೂ ನೀಡಿದರು.`ಹೇರ್‌ಯೋಗ' ಎಂದರೇನು?

ಯೋಗ ಎಂದರೆ ನೈಸರ್ಗಿಕವಾಗಿ ಆರೋಗ್ಯವಾಗಿರುವ ಮಾರ್ಗ. ಅದು ಮನಸ್ಸಿಗೆ, ದೇಹಕ್ಕೆ ಮಾತ್ರವಲ್ಲ, ಕೂದಲಿಗೂ ಅನ್ವಯವಾಗುತ್ತದೆ. ಕೂದಲನ್ನು ನೈಸರ್ಗಿಕವಾಗಿ ಹೇಗೆ ಆರೋಗ್ಯವಾಗಿಟ್ಟುಕೊಳ್ಳುವುದು ಎಂಬ ವಿಧಾನವನ್ನು ತಿಳಿಸುವುದೇ ಹೇರ್ ಯೋಗ.ನಿಮ್ಮ ಪ್ರಕಾರ ಕೂದಲನ್ನು ಕಾಪಾಡಿಕೊಳ್ಳಲು ಇರುವ ಮಾರ್ಗ ಯಾವುದು?

ಹೇರ್ ಯೋಗದಲ್ಲಿ ನಾನು ತಿಳಿಸುವುದು ಒಂದೇ ವಿಧಾನ. ಕೂದಲನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಚೆನ್ನಾಗಿ ನೀರು ಹಾಗೂ ಹಾಲನ್ನು ಕುಡಿಯಬೇಕು ಮತ್ತು ಕಣ್ತುಂಬ ನಿದ್ದೆ ಮಾಡಬೇಕು. ಇದು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಕೂದಲು ಉದುರುವುದನ್ನೂ ತಡೆಗಟ್ಟುತ್ತದೆ.ಈಗಿನ ಜೀವನಶೈಲಿಯಲ್ಲಿ ಕೇಶ ಸಂರಕ್ಷಣೆ ತುಂಬಾ ಕಷ್ಟವಲ್ಲವೇ?

ಇದು ತುಂಬಾ ಬಿಜಿ ಜಗತ್ತು. ಪ್ರತಿಯೊಂದು ಕ್ಷಣವೂ ಮುಖ್ಯ. ಹಾಗೆಂದು ನಮ್ಮ ವೈಯಕ್ತಿಕ ಆಸಕ್ತಿಗಳನ್ನೂ ಬಿಡಬಾರದು. ನಾವು ಶುದ್ಧವಾಗಿ, ಚೆನ್ನಾಗಿ ಕಾಣುವುದೂ ಅಷ್ಟೇ ಮುಖ್ಯವಲ್ಲವೇ? ಈಗಿನವರಿಗೆ  ತಮ್ಮ ಸೌಂದರ್ಯದ ಬಗ್ಗೆ ಕಾಳಜಿಯೂ ಹೆಚ್ಚಿದೆ. ಆದರೆ ಅವರಿಗೆ ಸರಿಯಾದ ಮಾರ್ಗ ತಿಳಿದಿಲ್ಲ.ಕೇಶವಿನ್ಯಾಸ ಕ್ಷೇತ್ರದಲ್ಲಿ ಭಾರತೀಯರು ಮುಂದಿದ್ದಾರೆಯೇ?

ಭಾರತೀಯರು ಇನ್ನೂ ಪಳಗಬೇಕಿದೆ. ಅವರ ಪ್ರಕಾರ ಕೂದಲಿನ ರಕ್ಷಣೆ ಎಂದರೆ ಹರ್ಬಲ್ ಮತ್ತು ಎಣ್ಣೆ ಅಷ್ಟೆ. ಅದರಿಂದಾಚೆಗೆ ಯೋಚಿಸುವುದೇ ಇಲ್ಲ. ಹೊಸತನಕ್ಕೆ ತೆರೆದುಕೊಳ್ಳುವುದಕ್ಕೂ ತುಂಬಾ ಯೋಚಿಸುತ್ತಾರೆ.ಮಳೆಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು?

ಮಳೆಗಾಲದಲ್ಲಿ ಕೂದಲು ಹೆಚ್ಚೇ ಆರೈಕೆ ಬೇಡುತ್ತದೆ. ಈ ಸಮಯದಲ್ಲಿ ಕೂದಲು ಉದುರುವುದೂ ಹೆಚ್ಚು. ದಿನಕ್ಕೆ 200 ಕೂದಲು ಉದುರುತ್ತದೆ. ಬೆಳಗ್ಗಿನ ಹೊತ್ತು ಬೆವರುವುದರಿಂದ ತಲೆಹೊಟ್ಟು ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿ ದಿನ ಗುಣಮಟ್ಟದ ಶ್ಯಾಂಪುವಿನಿಂದ ಸ್ನಾನ ಮಾಡಬೇಕಷ್ಟೆ.ಕೂದಲಿನ ವಿಷಯದಲ್ಲಿ ಎಣ್ಣೆ ಎಷ್ಟು ಪ್ರಾಮುಖ್ಯ ವಹಿಸುತ್ತದೆ?

ಜನರಲ್ಲಿ ಕೂದಲಿನ ಬಗ್ಗೆ ಎಷ್ಟೊಂದು ತಪ್ಪು ಕಲ್ಪನೆಗಳಿವೆ. ಎಣ್ಣೆ ಹಾಕಿದರೆ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ ಎನ್ನುತ್ತಾರೆ. ಅದು ಸುಳ್ಳು. ಎಣ್ಣೆ ಕೇವಲ ಮಾಯಿಶ್ಚರೈಸರ್‌ನಂತೆ ಮಾತ್ರ ಕೆಲಸ ಮಾಡುತ್ತದೆ. ಅದೇ ಕೂದಲಿಗೆ ಆರೋಗ್ಯ ನೀಡುತ್ತದೆ ಎಂಬುದು ನಿಜಕ್ಕೂ ಸುಳ್ಳು.ಕಲರಿಂಗ್ ಕೂದಲಿಗೆ ಎಷ್ಟು ಮುಖ್ಯ?

ಜನರು ಬದಲಾವಣೆ ಬಯಸುತ್ತಾರೆ. ಆ ಬದಲಾವಣೆಗೆ ಒಂದು ಉದಾಹರಣೆಯೇ ಕೂದಲ ಬಣ್ಣ. ಹೇರ್ ಕಲರಿಂಗ್ ರಾಸಾಯನಿಕದ್ದು, ಅದನ್ನು ಬಳಸಬಾರದು ಎನ್ನುತ್ತಾರೆ. ನಾವು ಬಳಸುವ ಪ್ರತಿಯೊಂದು ವಸ್ತುವಿನಲ್ಲೂ ರಾಸಾಯನಿಕವಿದೆ.ಸೋಪು, ಟೂತ್‌ಪೇಸ್ಟ್‌ನಲ್ಲೂ ಇದೆ. ಹಾಗೆಂದು ನಾವು ಹಲ್ಲುಜ್ಜುವುದು, ಮುಖ ತೊಳೆಯುವುದು ಬಿಟ್ಟಿಲ್ಲ. ಈಗೀಗ ಹರ್ಬಲ್ ಎಂಬ ಹೆಸರು ಎಲ್ಲೆಲ್ಲೂ ಹರಿದಾಡುತ್ತಿದೆ. ಆದರೆ ಅದೆಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಹೇಳಲಾಗುವುದಿಲ್ಲ. ನನ್ನ ಪ್ರಕಾರ ಕಲರಿಂಗ್ ಮಾಡಿದ ನಂತರದ ಆರೈಕೆ ಸರಿಯಿದ್ದರೆ ಯಾವುದೇ ಹಾನಿಯಿಲ್ಲ.ಕೇಶವಿನ್ಯಾಸವನ್ನು ಯಾವ ಆಧಾರದ ಮೇಲೆ ಮಾಡುತ್ತೀರಾ?

ಕೇಶವಿನ್ಯಾಸ ಎನ್ನುವುದು ಕ್ರಿಯಾಶೀಲತೆ. ಅದು ನನ್ನ ತಂದೆಯಿಂದಲೇ ಬಳುವಳಿಯಾಗಿ ಬಂದಿದ್ದು. ವ್ಯಕ್ತಿಯೊಬ್ಬರನ್ನು ಕಂಡ ತಕ್ಷಣ ಅವರಿಗೆ ಯಾವ ವಿನ್ಯಾಸ ಚೆನ್ನಾಗಿ ಕಾಣುತ್ತದೆ ಎಂಬುದು ಮನಸ್ಸಿಗೆ ಹೊಳೆಯುತ್ತದೆ. ನಂತರ ಅದನ್ನು ಮುಂದುವರಿಸುತ್ತೇನೆ. ಇದುವರೆಗೂ ಕೇಶವಿನ್ಯಾಸ ಮಾಡಿರುವುದರಲ್ಲಿ ಯಾರೂ ಮೆಚ್ಚದೆ ಇಲ್ಲ.ಫ್ಯಾಷನ್ ಕುರಿತು ಬೆಂಗಳೂರು ಸ್ಪಂದಿಸುತ್ತಿರುವುದು ಹೇಗೆ?

ಬೆಂಗಳೂರು ತುಂಬಾ ಹಿಂದುಳಿದಿದೆ ಎನ್ನಬಹುದು. ಅದರಲ್ಲೂ ದೆಹಲಿ, ಮುಂಬೈಗೆ ಹೋಲಿಸಿದರೆ ಈ ನಗರ ಏನೇನೂ ಇಲ್ಲ. ಇಲ್ಲಿನ ಜನರೂ ಫ್ಯಾಷನ್ ವಿಷಯದಲ್ಲಿ ಇನ್ನೂ ಕಲಿಯಬೇಕಾದ್ದು ಸಾಕಷ್ಟಿದೆ. ಕೇಶವಿನ್ಯಾಸದ ಬಗ್ಗೆಯಂತೂ ಇವರಿಗೆ ಸ್ಪಷ್ಟ ಕಲ್ಪನೆಗಳೇ ಇಲ್ಲ.ಬೆಂಗಳೂರಿನಲ್ಲಿ ನಿಮ್ಮ ಶಾಖೆಗಳು ಎಲ್ಲಿವೆ?

ಬೆಂಗಳೂರಿನಲ್ಲಿ ಈಗಾಗಲೇ ಶಾಖೆಗಳಿದ್ದು, ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ. ಆಸಕ್ತಿಯುಳ್ಳವರು 91673 32882 ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.