ಶುಕ್ರವಾರ, ಮೇ 27, 2022
27 °C

ಹೇಳಿಕೆ ತಳ್ಳಿಹಾಕಿದ ಕೋರ್ಟ್: ಅತ್ತೆ, ಮಾವ ಖುಲಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ದೆಹಲಿ ನ್ಯಾಲಯವೊಂದು, ಪತಿ ಮತ್ತು ಅವರ ಪೋಷಕರು ತನಗೆ ಬೆಂಕಿ ಹಚ್ಚಿದ್ದರು ಎಂದು ಸಾಯುವ ಸಂದರ್ಭದಲ್ಲಿ ಮಹಿಳೆ ನೀಡಿರುವ ಹೇಳಿಕೆಯನ್ನು ತಿರಸ್ಕರಿಸಿದ್ದು; ಪತಿ ಹಾಗೂ ಆತನ ಪೋಷಕರನ್ನು ದೋಷಮುಕ್ತರನ್ನಾಗಿ ಮಾಡಿದೆ.

ಪತಿ ಮತ್ತು ಅತ್ತೆ- ಮಾವ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಸಾಯುವ ಕಾಲದಲ್ಲಿ ಮಹಿಳೆ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಅತ್ಯಂತ ಹತ್ತಿರದ ಸಂಬಂಧಿಗಳು ಪ್ರಾಸಿಕ್ಯೂಷನ್‌ಗೆ ಸಹಕಾರ ನೀಡಿಲ್ಲ. ಮತ್ತು ಮಹಿಳೆಯನ್ನು ಹತ್ಯೆ ಮಾಡಿರುವ ಆರೋಪವನ್ನು ಹೊತ್ತಿರುವವರಿಗೂ ಸುಟ್ಟಗಾಯಗಳಾಗಿದ್ದು, ಮಹಿಳೆಯನ್ನು ರಕ್ಷಿಸಲು ಅವರೂ ಯತ್ನಿಸಿದ್ದರು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದೆ.

ಮೃತಪಟ್ಟ ಮಹಿಳೆ ಯಾವಾಗ ಈ ಹೇಳಿಕೆ ನೀಡಿದ್ದಳು ಎಂಬುದೂ ಸ್ಪಷ್ಟವಾಗಿಲ್ಲ. ಆ ಸಂದರ್ಭದಲ್ಲಿ ಆಕೆ  ಮಾನಸಿಕವಾಗಿ ಸದೃಢವಾಗಿದ್ದಳೇ ಎಂಬುದೂ ತಿಳಿದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿತು.

‘ಮಹಿಳೆಯು ಸಾಯುವ ಕಾಲದಲ್ಲಿ ನೀಡಿರುವ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಆರೋಪಿಗಳಿಗೆ ಶಿಕ್ಷೆ ನೀಡುವುದು ಯಾವತ್ತಿಗೂ ಸುರಕ್ಷಿತವಲ್ಲ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೋಜ್ ಜೈನ್ ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

2010ರ ಏಪ್ರಿಲ್‌ನಲ್ಲಿ 8ರಂದು ಈ ಘಟನೆ ನಡೆದಿತ್ತು. ಮದುವೆ ಸಂಬಂಧ ಉಂಟಾದ ವಿವಾದದ ಹಿನ್ನೆಲೆಯಲ್ಲಿ ದಿನೇಶ್ ಎಂಬುವವರು ತಮ್ಮ ತಂದೆ ಮತ್ತು ತಾಯಿಯೊಂದಿಗೆ ಸೇರಿ ಪತ್ನಿ ಕವಿತಾ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಸಂಶಯದ ಲಾಭವನ್ನು ಆರೋಪಿಗಳಿಗೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.