ಹೇಳಿದ್ದು ರೂ 5 ಲಕ್ಷ, ಕೊಟ್ಟಿದ್ದು ರೂ 3 ಲಕ್ಷ

7
ಅಂಧರಿಗೆ ಚೆಕ್ ಪ್ರದಾನ ಪ್ರಹಸನ: ಒಂದೂವರೆ ನಿಮಿಷದಲ್ಲಿ ಮುಕ್ತಾಯ

ಹೇಳಿದ್ದು ರೂ 5 ಲಕ್ಷ, ಕೊಟ್ಟಿದ್ದು ರೂ 3 ಲಕ್ಷ

Published:
Updated:
ಹೇಳಿದ್ದು ರೂ 5 ಲಕ್ಷ, ಕೊಟ್ಟಿದ್ದು ರೂ 3 ಲಕ್ಷ

ಬೆಂಗಳೂರು: ಅಂಧರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಆಟಗಾರರಿಗೆ ಅದ್ದೂರಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯಬೇಕು ಎನ್ನುವ ಕನಸಿತ್ತು. ಆದರೆ, ಅವರಿಗೆ ಗುರುವಾರ ತೀವ್ರ ನಿರಾಸೆ ಉಂಟಾಯಿತು. ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾದರೂ,  ಒಂದೂವರೆ ನಿಮಿಷದಲ್ಲಿ ಮುಗಿದೇ ಹೋಯಿತು!ಡಿಸೆಂಬರ್‌ನಲ್ಲಿ ನಡೆದ ಅಂಧರ ಚೊಚ್ಚಲ `ಟ್ವೆಂಟಿ-20' ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿದಿತ್ತು. ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಭಾರತದ ಹುಡುಗರ ಈ ಸಾಧನೆಗೆ ಸಾಕಷ್ಟು ಕ್ರಿಕೆಟ್ ತಾರೆಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಅಷ್ಟೇ ಅಲ್ಲ, ಅಂಧರ ಕ್ರಿಕೆಟ್‌ಗೆ ಭಾರತದಲ್ಲಿ ಉತ್ತಮ ಸ್ಥಾನಮಾನ ದೊರೆಯಬೇಕು ಎಂದು ಒತ್ತಾಯಿಸಿದ್ದರು. ಆದರೆ, ಈ ಚಾಂಪಿಯನ್ನರಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒಂದೂವರೆ ಗಂಟೆ ಕಾಯಿಸಿ ಬಿಸಿಲಿನಲ್ಲಿ `ಬಹುಮಾನ' ಪ್ರದಾನ ಮಾಡಿದರು.ಒಂದೂವರೆ ನಿಮಿಷ: ಸಮಾರಂಭವು ಕಾಟಾಚಾರದಂತಿತ್ತು. ಕಾರ್ಯಕ್ರಮ 8.30ಕ್ಕೆ ನಿಗದಿಯಾಗಿತ್ತು ಆದರೆ, ಆರಂಭವಾದಾಗ ಸಮಯ ಹತ್ತು ಗಂಟೆ. ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದ ಎದುರಿಗಿರುವ ಹುಲ್ಲು ಹಾಸಿನ ಬಯಲಿನಲ್ಲಿಯೇ ಕುರ್ಚಿಗಳನ್ನು ಹಾಕಿ ಅಲ್ಲಿಯೇ ಕಾರ್ಯಕ್ರಮ ನಡೆಸಲಾಯಿತು.`ಮುಖ್ಯಮಂತ್ರಿಯವರು ಈಗ ಬರುತ್ತಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ ತಕ್ಷಣವೇ ಭಾರತ ತಂಡದಲ್ಲಿದ್ದ ಕನ್ನಡಿಗರಾದ ಶೇಖರ್ ನಾಯ್ಕ, ಪ್ರಕಾಶ್ ಜಯರಾಮಯ್ಯ ಮತ್ತು ಎಸ್. ರವಿ ಅವರನ್ನು ಹುಲ್ಲು ಹಾಸಿನ ಬಳಿ ಕರೆ ತರಲಾಯಿತು. ಆದರೂ ಸಿ.ಎಂ ಹತ್ತು ನಿಮಿಷ ತಡವಾಗಿ ಬಂದರು. ಅಲ್ಲಿಯವರೆಗೂ ಆಟಗಾರರು ವಿಧಿಯಿಲ್ಲದೆ ಬಿಸಿಲಲ್ಲೇ ಕಾಲ ಕಳೆಯಬೇಕಾಯಿತು.ಹತ್ತು ಗಂಟೆಗೆ ಬಂದ ಮುಖ್ಯಮಂತ್ರಿ ತರಾತುರಿಯಲ್ಲಿಯೇ ಬಹುಮಾನ ಪ್ರದಾನ ಮಾಡಿದರು. ಸಿಬ್ಬಂದಿಯಿಂದ ಹೂ ಗುಚ್ಛ ಹಾಗೂ ಚೆಕ್ ಪಡೆದುಕೊಂಡು ಅವಸರದಲ್ಲಿಯೇ ಆಟಗಾರರಿಗೆ ಕೊಟ್ಟರು. ಈ ವೇಳೆ ಮಾಧ್ಯಮದವರು ಛಾಯಾಚಿತ್ರಕ್ಕೆ ಒತ್ತಾಯಿಸಿದಾಗ, ಕುಳಿತುಕೊಳ್ಳುತ್ತಿದ್ದಂತೆಯೇ ಎದ್ದು ಹೊರಟು ಹೋದರು. ಬಹುಮಾನ ಪ್ರದಾನದ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂದು ಕಾದು ಕುಳಿತಿದ್ದ ಜನಕ್ಕೂ ಇದರಿಂದ ನಿರಾಸೆ ಕಾಡಿತು.

ಇದಕ್ಕೂ ಮುನ್ನ ವಿಶ್ವಕಪ್ ವಿಜೇತ ಆಟಗಾರರು `ಕೃಷ್ಣಾ' ಪ್ರವೇಶಿಸಲು ಪ್ರಯಾಸ ಪಟ್ಟರು. ಭದ್ರತಾ ಸಿಬ್ಬಂದಿ ಆಟಗಾರರನ್ನು ಬಹಳ ಹೊತ್ತು ಬ್ಯಾರಿಕೇಡ್ ಬಳಿ ನಿಲ್ಲಿಸಿಕೊಂಡಿದ್ದರು. ನಂತರ ದೂರವಾಣಿ ಮೂಲಕ ಸಂಪರ್ಕಿಸಿದ ಆಟಗಾರರು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಒಳಗಡೆ ಹೋದರು. ಈ ಬಿಸಿ ಮಾಧ್ಯಮದವರಿಗೂ ತಟ್ಟಿತು. ಛಾಯಾಚಿತ್ರಕಾರರಿಗೆ ಮಾತ್ರ ಒಳಗಡೆ ಪ್ರವೇಶ, ವರದಿಗಾರರಿಗೆ ಅನುಮತಿ ಇಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಆದ್ದರಿಂದ ಕೆಲ ವರದಿಗಾರರು ಬೇರೆ ದಾರಿಯಿಲ್ಲದೇ ವಾಪಸ್ ತೆರಳಿದರು.ಸಚಿನ್‌ಗೂ ಹೀಗೆ ಮಾಡ್ತಾರಾ?:

`ಕಣ್ಣು ಇಲ್ಲದವರು ವಿಶ್ವಕಪ್ ಗೆದ್ದಿರುವುದು ಐತಿಹಾಸಿಕ ಸಾಧನೆ. ಆದರೆ, ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಬೇಸರ ಮೂಡಿಸಿದೆ. ಸಚಿನ್ ತೆಂಡೂಲ್ಕರ್ ಇಲ್ಲವೇ ಮಹೇಂದ್ರ ಸಿಂಗ್ ದೋನಿ ಇಲ್ಲಿಗೆ ಬಂದಿದ್ದರೆ ರಾಜ್ಯ ಸರ್ಕಾರದವರು ಹೀಗೆಯೇ ನಡೆದುಕೊಳ್ಳುತ್ತಿದ್ದರಾ.ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂದರೆ ಇದ್ಯಾವ ನ್ಯಾಯ ಸರ್...' ಎಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬಂದಿದ್ದ ಹೆಸರು ಹೇಳಲು ಇಷ್ಟಪಡದ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.`ಸಿಎಂ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ'

ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಂಧ ಕ್ರಿಕೆಟ್ ಸಾಧಕರಿಗೆ ಐದು ಲಕ್ಷ ರೂಪಾಯಿ ಕೊಡುತ್ತೇವೆಂದು ಧಾರವಾಡದಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವ ಕೃಷ್ಣ ಸ್ಪಷ್ಟ ಪಡಿಸಿದ್ದಾರೆ.

ಅಂಧ ಕ್ರಿಕೆಟ್ ಸಾಧಕರಿಗೆ ಗುರುವಾರ ತಲಾ 3ಲಕ್ಷ ಕೊಟ್ಟ ಹಿನ್ನೆಲೆಯಲ್ಲಿ ಹಿಂದೆ ಮುಖ್ಯಮಂತ್ರಿಗಳ `ಹೇಳಿಕೆ' ಬಗ್ಗೆ ಪ್ರಸ್ತಾಪಿಸಿದಾಗ ಬಲದೇವ ಕೃಷ್ಣ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಕಾರಣಕ್ಕೂ ಇನ್ನು ಎರಡು ಲಕ್ಷ ರೂಪಾಯಿಗಳನ್ನು ನೀಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದೂ ಅವರು ಖಚಿತ ಪಡಿಸಿದರು.ಗುರುವಾರ ಬೆಳಿಗ್ಗೆಯ ಕಾರ್ಯಕ್ರಮ ತೀರಾ ಅವಸರದಲ್ಲಿ ನಡೆದಿರುವುದು ನಿಜ ಎಂದು ಒಪ್ಪಿಕೊಂಡ ಅವರು `ಮುಂದೊಂದು ದಿನ ಇದಕ್ಕೆ ಸಂಬಂಧಿಸಿದಂತೆ ಉತ್ತಮ ಕಾರ್ಯಕ್ರಮವೊಂದನ್ನು ಸಂಘಟಿಸುತ್ತೇವೆ' ಎಂದರು.ಧಾರವಾಡದಲ್ಲಿ ಹೇಳಿದ್ದನ್ನು ಬೆಂಗಳೂರಲ್ಲಿ ಮರೆತರು!

ಅಂಧರ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆಗಾಗಿ ಧಾರವಾಡದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆ ವೇಳೆ ಮೈದಾನಕ್ಕೆ ಹೋಗಿದ್ದ ಮುಖ್ಯಮಂತ್ರಿ ಶೆಟ್ಟರ್, ಭಾರತ ತಂಡಕ್ಕೆ ಆಯ್ಕೆಯಾಗುವ ರಾಜ್ಯದ ಆಟಗಾರರಿಗೆ ತಲಾ ಐದು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು.ಆದರೆ, ಕೊಟ್ಟದ್ದು ಕೇವಲ ಮೂರು ಲಕ್ಷ ರೂಪಾಯಿ ಮಾತ್ರ. ಈ ಕುರಿತು ಪ್ರಶ್ನೆ ಕೇಳಲು ಮುಂದಾಗುವಷ್ಟರಲ್ಲಿಯೇ ಮುಖ್ಯಮಂತ್ರಿ ಅವಸರದಲ್ಲಿ ಹೋಗಿಬಿಟ್ಟರು.  ಸಾಕಷ್ಟು ಕನಸು ಕಂಡಿದ್ದ ಆಟಗಾರರ ಅಂಧ ಮೊಗದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು.`ಆಟಗಾರರ ಕೈಗೆ ಚೆಕ್ ನೀಡುವ ಮುನ್ನ ಬಹುಮಾನ ಮೊತ್ತ ಐದು ಲಕ್ಷ ರೂಪಾಯಿ ಎಂದೇ ನಾವು ತಿಳಿದಿದ್ದೆವು. ಆದರೆ, ಚೆಕ್ ನೀಡಿದ ನಂತರವೇ ಈ ವಿಷಯ ಗೊತ್ತಾಯಿತು. ಇದರಿಂದ ಅಚ್ಚರಿಯೂ ಆಯಿತು. ಉಳಿದ ಹಣ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ'

-ಜಿ.ಕೆ. ಮಹಾಂತೇಶ್, ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ (ಕ್ಯಾಬಿ) ಪ್ರಧಾನ ಕಾರ್ಯದರ್ಶಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry