ಹೇಳಿ ಪ್ರೀತಿಗೆ ಒಂದು ಸಲಾಂ!

7

ಹೇಳಿ ಪ್ರೀತಿಗೆ ಒಂದು ಸಲಾಂ!

Published:
Updated:

 


ಪ್ರೀತಿ ಎಂಬ ಪದದ ಮೇಲೆ ಯಾರಿಗೆ ತಾನೇ ಪ್ರೀತಿ ಇಲ್ಲ ಹೇಳಿ? ಹೇಳಿ ಕೇಳಿ ಜಗತ್ತು ನಡೆಯುತ್ತಿರುವುದೇ ಪ್ರೀತಿಯ ಮೇಲಲ್ಲವೇ. ಇಷ್ಟಾದರೂ ಪ್ರೀತಿ ಎಂಬ ಪದ ಕೇಳಿದೊಡನೆ ಮೂಗು ಮುರಿಯುವವರೂ ಸಾಕಷ್ಟು ಮಂದಿ ಇದ್ದಾರೆ. ಅಷ್ಟೇ ಏಕೆ, ಪ್ರೀತಿಪಾತ್ರರ ಎದುರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಾಗದೆ ಪರಿತಪಿಸುವವರು, ಪ್ರೀತಿಯ ನಿವೇದನೆಯನ್ನು ಒಪ್ಪಿಕೊಳ್ಳಲಾಗದೆ ಚಡಪಡಿಸುವವರೂ ಇದ್ದಾರೆ. ಆದರೆ ಪ್ರೀತಿ ಎಂಬ ಮಾಯೆಯಿಂದ ತಮ್ಮ ದೇಹದ ಮೇಲಾಗುವ ಸಕಾರಾತ್ಮಕ ಬೆಳವಣಿಗೆಗಳನ್ನು ಅರಿತವರಿಗೆ ಮಾತ್ರ, ಪ್ರೀತಿಯ ಮೇಲೊಂದು ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ!

ಪ್ರೀತಿ ಎಂಬ ಪದ ನಮ್ಮ ದೇಹದ ಕೆಮಿಸ್ಟ್ರಿಯನ್ನೇ ಬದಲಿಸಬಲ್ಲದು ಎಂಬ ವಿಷಯ ನಿಮಗೆ ಗೊತ್ತೇ?

 

ನಮ್ಮಲ್ಲಿ ಪ್ರೀತಿಯ ಭಾವನೆ ಉಕ್ಕಿದಾಗ ಸಂತೋಷಕ್ಕೆ ಕಾರಣವಾಗುವ `ಡೊಪಮೈನ್' ಎಂಬ ಹಾರ್ಮೋನ್ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ದಿನವಿಡೀ ನಾವು ಲವಲವಿಕೆಯಿಂದ ಇರಲು ನೆರವಾಗುತ್ತದೆ. ಆತ್ಮೀಯತೆಯನ್ನು ಉದ್ದೀಪಿಸುವ ಆಕ್ಸಿಟೋಸಿನ್ ರಾಸಾಯನಿಕ ಸಹ ಬಿಡುಗಡೆಯಾಗುತ್ತದೆ. 

 

`ಆಲಿಂಗನ, ಚುಂಬನ ಮತ್ತು ಸ್ಪರ್ಶದಿಂದ ಆಕ್ಸಿಟೋಸಿನ್ ಸೃಷ್ಟಿಯಾಗುತ್ತದೆ' ಎನ್ನುತ್ತಾರೆ ನ್ಯೂಜೆರ್ಸಿಯ ರುಟ್‌ಗರ್ ವಿಶ್ವವಿದ್ಯಾಲಯದ ಸಂಶೋಧಕಿ ಹೆಲೆನ್ ಫಿಶರ್.

 

ಒಂದು ದಿನ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಪತ್ನಿ/ ಪತಿಯನ್ನು ಮುದ್ದಾಡುತ್ತಾ ಇದ್ದುಬಿಡಬೇಕು ಎಂದೇನಾದರೂ ನಿಮಗೆ ಅನಿಸಿದರೆ, ಆ ದಿನ ನಿಜಕ್ಕೂ ಆಕ್ಸಿಟೋಸಿನ್ ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ದೇಹದಲ್ಲಿ ಕಾರ್ಯನಿರತವಾಗಿದೆ ಎಂದರ್ಥ!

 

ಮಕ್ಕಳಿಗೆ ಹಾಲುಣಿಸುವ ತಾಯಂದಿರಲ್ಲೂ ಇದೇ ರಾಸಾಯನಿಕ ಬಿಡುಗಡೆ    ಆಗುತ್ತದೆ. ಇದು ತಾಯಿ ಮಗುವಿನ ಆತ್ಮೀಯ ಬಂಧನಕ್ಕೆ ಭದ್ರವಾದ ಬೆಸುಗೆ ಹಾಕುತ್ತದೆ. ಗಂಡು- ಹೆಣ್ಣಿನ ಪ್ರೀತಿಯಾಗಿದ್ದರೆ ಲೈಂಗಿಕ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದಕ್ಕೆ ವಯಸ್ಸಿನ ಭೇದ ಇಲ್ಲ. ಹದಿವಯಸ್ಕರಲ್ಲಿ ಮಾತ್ರವಲ್ಲದೆ ಮಾಗಿದ ಪ್ರೇಮಿಗಳಲ್ಲೂ ಈ ಹಾರ್ಮೋನ್‌ಗೆ ಸ್ಥಳ ಉಂಟು.

 

ಕಿವಿಯಲ್ಲೂ ಪ್ರೀತಿಸಬಹುದು!

ಪ್ರೀತಿ ಕಣ್ಣಿನಲ್ಲಿ ಹುಟ್ಟುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಬಹುತೇಕರಿಗೆ ಗೊತ್ತಿಲ್ಲದೇ ಇರುವ ಇನ್ನೊಂದು ಸಂಗತಿಯೂ ಇದೆ. ಪ್ರೀತಿ ಹುಟ್ಟಿಸುವ ವಿಷಯದಲ್ಲಿ ನಾನೇನೂ ಕಮ್ಮಿ ಇಲ್ಲ ಎನ್ನುತ್ತದೆ ಕಣ್ಣಿನ ಪಕ್ಕದಲ್ಲೇ ಇಣುಕಿ ನೋಡುತ್ತಿರುವ ನಿಮ್ಮ ಮೂಗು. ಅದು ಬಿಡುಗಡೆ ಮಾಡುವ ಫೆರೋಮೋನ್ ಎಂಬ ರಾಸಾಯನಿಕವು ಲೈಂಗಿಕ ಆಕರ್ಷಣೆಗೆ ನೆರವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ ಫಿಶರ್.

 

ಪ್ರೀತಿ ತುಂಬಿದ ಮನಸ್ಸಿನವರಲ್ಲಿ ನರಕೋಶ ಪ್ರಚೋದಕ ರಾಸಾಯನಿಕವಾದ ನೋರ್‌ಪೈನ್‌ಫ್ರಿನ್ ಸಹ ಹೊರಹೊಮ್ಮುತ್ತದೆ. (ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ) ಒತ್ತಡಕ್ಕೆ ಕಾರಣವಾಗುವ ಈ ಹಾರ್ಮೋನ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಅದಕ್ಕೇ ಇರಬೇಕು, ಯಾರಾದರೂ ವಿಶೇಷ ವ್ಯಕ್ತಿ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬಂದ ಕೂಡಲೇ ನಿಮ್ಮ ಹೃದಯದ ತಾಳ ತಪ್ಪುವುದು, ಮೈ ತಾನೇತಾನಾಗಿ ಬೆಚ್ಚಗಾಗುವುದು ಮತ್ತು ನವಿರಾದ ಭಾವನೆಯಿಂದ ನೀವು ಉದ್ವೇಗಕ್ಕೆ ಒಳಗಾಗುವುದು.

 

ನೋಡಿದಿರಾ ಪ್ರೀತಿಯಿಂದ ಏನೆಲ್ಲಾ ಆಗುತ್ತದೆ? ಹಾಗಿದ್ದರೆ ಸರಿ, ಇನ್ನೇಕೆ ತಡ. ಕೂಡಲೇ ಹೇಳಿಬಿಡಿ ಒಂದು ಸಲಾಂ ಈ ಪ್ರೀತಿಗೆ ಮತ್ತು ಅದರ ರೀತಿಗೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry