ಶನಿವಾರ, ಅಕ್ಟೋಬರ್ 19, 2019
28 °C

ಹೈ.ಕ.ಗೆ ಹೆಚ್ಚಿನ ಅನುದಾನ

Published:
Updated:
ಹೈ.ಕ.ಗೆ ಹೆಚ್ಚಿನ ಅನುದಾನ

ಗುಲ್ಬರ್ಗ: ಹಿಂದುಳಿದಿರುವ ಹೈದರಾಬಾದ್ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಕಟ್ಟಡದ ದುರಸ್ತಿ ಮತ್ತು ಉನ್ನತೀಕರಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಈ ಪ್ರದೇಶದಲ್ಲಿ ಜಲಾನಯನ ಕಾರ್ಯಕ್ರಮದಿಂದ ಶಾಶ್ವತ ನೀರಿನ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ  ಹೆಚ್ಚು ಒತ್ತು ನೀಡಲು ಸರ್ವೇ ಮಾಡಿ ವರದಿ ನೀಡಲು ಸೂಚಿಸಲಾಗಿದೆ ಎಂದರು.ಗ್ರಾಮ ಪಂಚಾಯತಿಗಳಲ್ಲಿರುವ ಗಂಟು ಬಿಚ್ಚುವ(ಅನ್‌ಟೈಡ್) ಬಜೆಟ್ ಮಾದರಿಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ   ಹಾಗೂ ಗ್ರಾಮೀಣ ಅಭಿವದ್ಧಿ ಸಚಿವರ ಗಮನಕ್ಕೆ ತರಲಾಗುವುದು. ಜಿಲ್ಲಾ ಪಂಚಾಯಿತಿ ಕಟ್ಟಡದ ದುರಸ್ತಿಗೆ ಬೇಕಾಗುವ 40 ಲಕ್ಷ ರೂಪಾಯಿ ಮತ್ತು      ಪತ್ರಿಕಾ ಭವನಕ್ಕೆ ಬೇಕಾಗುವ ಸುಮಾರು 30 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯರು ಜನಾನುರಾಗಿಗಳಾಗಿ ಮತ್ತು ಜನದನಿಯಾಗಿ ಒಗ್ಗಟ್ಟಿನಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಜನರ ಸುತ್ತ ಅಭಿವೃದ್ಧಿಯಾಗಬೇಕೇ ವಿನಃ ಅಭಿವೃದ್ಧಿ ಸುತ್ತ ಜನ ಸುತ್ತುವಂತಾಗಬಾರದು. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.ಹೈದರಾಬಾದ್ ಕರ್ನಾಟಕ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಗುಲ್ಬರ್ಗ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ, ಉಪಾಧ್ಯಕ್ಷ ನಿತೀನ್ ವಿ.ಗುತ್ತೇದಾರ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಈ ಇದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ ಜಮಾದಾರ ಸ್ವಾಗತಿಸಿದರು. ಇದಕ್ಕೂ ಮುನ್ನ ಸಚಿವರು ನಿರ್ಮಾಣ ಹಂತದಲ್ಲಿರುವ ಪತ್ರಿಕಾ ಭವನ ಕಟ್ಟಡ ಕಾಮಗಾರಿ    ಸ್ಥಳಕ್ಕೆ      ಭೇಟಿ ನೀಡಿ ಪರಿಶೀಲನೆ ನಡೆಸಿದರು.

Post Comments (+)