ಗುರುವಾರ , ಜನವರಿ 23, 2020
20 °C

ಹೈ.ಕ.ಬಂದ್‌ಗೆ ಬೆಂಬಲಿಸಿ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಹೈದರಾಬಾದ್ ಕರ್ನಾಟಕಕ್ಕೆ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಪ್ರಮಾಣದ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಹೈ.ಕ.ಕ್ಕೆ ವಿಶೇಷ ಸ್ಥಾನಮಾನ ಸಿಗಲೇಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವಜನರು ಜ. 24ರಂದು ನಡೆಯುವ ಬಂದ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹೈದರಾಬಾದ್ ಕರ್ನಾಟಕ ಜನಾಂದೋಲನ ಸಮಿತಿಯ ಕಾರ್ಯದರ್ಶಿ ಬಸವಂತರಾಯ ಕುರಿ ಮನವಿ ಮಾಡಿದರು.ಶಾಸಕರ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಈ ಭಾಗಕ್ಕೆ ಪ್ರಾತಿನಿಧ್ಯ ಇಲ್ಲದಿರುವುದರಿಂದ ಹೈದರಾಬಾದ್ ಮತ್ತು ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಹೆಚ್ಚಿನ ಅಂಕಗಳನ್ನು ಪಡೆದರೂ ಉದ್ಯೋಗ ದೊರಕುತ್ತಿಲ್ಲ. ಇದು ಕೇಂದ್ರ ಸರ್ಕಾರ ಈ ಭಾಗದ ಜನತೆಗೆ ಮಾಡುವ ದೊಡ್ಡ ದ್ರೋಹವಾಗಿದೆ ಎಂದು ಟೀಕಿಸಿದರು.ಕಲಂ 371ರ ತಿದ್ದುಪಡಿ ಸಂಬಂಧ ಮುಖಂಡರು ಮತ್ತು ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಮಾಡಿದ್ದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಸಿಂಧನೂರು ತಾಲ್ಲೂಕಿನಲ್ಲಿಯೇ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 2000ಕ್ಕೂ ಹೆಚ್ಚು ಉಪನ್ಯಾಸಕರು ಮತ್ತು ಸಹಸ್ರಾರು ಶಿಕ್ಷಕರು ಬಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಭೂತಪೂರ್ವವಾಗಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.ದಪ್ಪಚರ್ಮ: ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಭಾಗದ ಸಂಸದರಾದ ಧರ್ಮಸಿಂಗ್, ಫಕೀರಪ್ಪ ಹಾಗೂ ತಾವು ಪಿ.ಚಿದಂಬರಂ ಸೇರಿದಂತೆ ಸಂಬಂಧಿಸಿದ ಕೇಂದ್ರ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಸತ್ತಿನಲ್ಲಿ ಮಾಡಿದ ಪ್ರಶ್ನೆಯೂ ಕಸದ ಬುಟ್ಟಿಗೆ ಹೋಗಿದೆ. ಅಣ್ಣಾ ಹಜಾರೆ ಮತ್ತು ತೆಲಂಗಾಣ ವಿಷಯದಲ್ಲಿ ಕೇಂದ್ರ ನಡೆದುಕೊಂಡ ರೀತಿ ಅಮಾನವೀಯವಾಗಿದೆ. ಇದನ್ನು ಗಮನಿಸಿದರೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಅರ್ಥವಾಗುತ್ತದೆ ಎಂದು ಸಂಸದ ಶಿವರಾಮಗೌಡ ಟೀಕಿಸಿದರು.ಶಾಸಕ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದೂಸಾಬ ಮುಳ್ಳೂರು, ಗುರುಪಾದಯ್ಯಸ್ವಾಮಿ, ನಗರಸಭೆ ಅಧ್ಯಕ್ಷೆ ಪದ್ಮಾವತಿ ಕರಿಯಪ್ಪ, ಸಂಗಯ್ಯಸ್ವಾಮಿ, ಮ್ಲ್ಲಲಿನಾಥಶಾಸ್ತ್ರಿ, ಮಮತಾ ಹಿರೇಮಠ, ಲಿಂಗರಾಜ ಹಂಚಿನಾಳ, ಮಲ್ಲನಗೌಡ ಕನ್ನಾರಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)