ಹೈಕೋರ್ಟ್‌ಗೆ ಯಡಿಯೂರಪ್ಪ ಮೊರೆ

7

ಹೈಕೋರ್ಟ್‌ಗೆ ಯಡಿಯೂರಪ್ಪ ಮೊರೆ

Published:
Updated:
ಹೈಕೋರ್ಟ್‌ಗೆ ಯಡಿಯೂರಪ್ಪ ಮೊರೆ

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಜುಲೈ 27ರಂದು ನೀಡಿರುವ ತನಿಖಾ ವರದಿಯ ರದ್ದತಿಗೆ ಕೋರಿ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ.`ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ಈ ವರದಿಯು ಕಾನೂನುಬಾಹಿರ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಆಧಾರ, ದಾಖಲೆಗಳನ್ನು ಒದಗಿಸದ ಲೋಕಾಯುಕ್ತರು ಊಹೆಯ ಆಧಾರದ ಮೇಲೆ ನನ್ನ ಹೆಸರನ್ನು ವರದಿಯಲ್ಲಿ ಸೇರಿಸಿದ್ದಾರೆ~ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.ಅರ್ಜಿಯಲ್ಲಿ ಏನಿದೆ? 32 ಪುಟಗಳ ಈ ಅರ್ಜಿಯಲ್ಲಿ ಯಡಿಯೂರಪ್ಪ ಹೇಳಿರುವುದು ಇಷ್ಟು:

`ವರದಿಯಲ್ಲಿ ನನ್ನ ಹೆಸರನ್ನು ಸೇರಿಸುವ ಮುನ್ನ ನೋಟಿಸ್ ಜಾರಿ ಮಾಡಿಲ್ಲ. ಈ ಕುರಿತು ನನ್ನ ಅಹವಾಲು ಆಲಿಸಿಲ್ಲ. ಒಂದು ವೇಳೆ ನೋಟಿಸ್ ಜಾರಿ ಮಾಡಿ, ಮುಂಚೆಯೇ ಮಾಹಿತಿ ನೀಡಿದ್ದರೆ, ಆರೋಪಗಳಿಗೆ ನಾನು ಹಾಗೂ ನನ್ನ ಕುಟುಂಬದವರು ಸಮಜಾಯಿಷಿ ನೀಡುತ್ತ್ದ್ದಿದೆವು. ಆದರೆ ನ್ಯಾ. ಹೆಗ್ಡೆ ಅವರು ಸ್ವಯಂಪ್ರೇರಿತವಾಗಿ ಹೆಸರು ಉಲ್ಲೇಖಿಸಿದ್ದಾರೆ. ಇದು ಸಹಜ ನ್ಯಾಯಕ್ಕೆ ವಿರುದ್ಧ.`ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವುದಕ್ಕೆ ಲೋಕಾಯುಕ್ತರಿಗೆ ಸೂಚಿಸಲಾಗಿತ್ತು.  ತಮ್ಮ ವ್ಯಾಪ್ತಿಯನ್ನು ಮೀರಿ ನನ್ನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಶಿಫಾರಸು ಮಾಡ್ದ್ದಿದ್ದಾರೆ. ಗಣಿಗಾರಿಕೆಯಲ್ಲಿ ತೊಡಗಿಸಿಕೊಳ್ಳದೇ ಇರುವ ಖಾಸಗಿ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಹೆಸರುಗಳನ್ನೂ ವರದಿಯಲ್ಲಿ ಉಲ್ಲೇಖಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.  ವ್ಯಕ್ತಿಯ ಹಕ್ಕಿಗೆ ಚ್ಯುತಿಯಾಗಿದೆ.ಮುಜುಗರ: `ವರದಿ ಸರ್ಕಾರದ ಕೈಸೇರುವ ಮೊದಲೇ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ವರದಿ ಅಧಿಕೃತವಾಗಿ ಸಲ್ಲಿಕೆಯಾಗಿಲ್ಲ ಎಂದು ತಿಳಿದಿದ್ದರೂ ಅದರಲ್ಲಿ ನನ್ನ ಹೆಸರು ಇರುವುದನ್ನು ಹೆಗ್ಡೆ ಅವರು ಮಾಧ್ಯಮಗಳ ಮುಂದೆ ಖಚಿತಪಡಿಸಿದ್ದರು. ಇದು ನನ್ನನ್ನು ಹಾಗೂ ನನ್ನ ಪಕ್ಷವನ್ನು ಬಹಳ ಮುಜುಗರಕ್ಕೆ ಸಿಲುಕಿಸಿತು. ವರದಿಯಲ್ಲಿನ ಅಂಶಗಳು ತಿಳಿಯದೆ ನಾನು, ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಒದ್ದಾಡಬೇಕಾದ ಸನ್ನಿವೇಶ ಎದುರಾಯಿತು.`ರಾಚೇನಹಳ್ಳಿ ಬಳಿಯ ಜಮೀನನ್ನು ಮಾರುಕಟ್ಟೆ ದರಕ್ಕಿಂತ ಹಲವು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಗಂಭೀರ ಆರೋಪ ನನ್ನ ಕುಟುಂಬದ ವಿರುದ್ಧ ಹೊರಿಸಲಾಗಿದೆ. ಆದರೆ ಈ ರೀತಿ ವರದಿ ಮಾಡುವ ಮುಂಚೆ ನನ್ನನ್ನಾಗಲೀ, ನನ್ನ ಪುತ್ರರನ್ನಾಗಲೀ ಅಥವಾ ಪ್ರೇರಣಾ ಟ್ರಸ್ಟ್‌ನ್ನಾಗಲಿ ಅವರು ಕೇಳಲಿಲ್ಲ. ಜಿಂದಾಲ್ ಕಂಪೆನಿಯನ್ನೂ ಅನಗತ್ಯವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ.ಇವೆಲ್ಲವುಗಳಿಂದ ನಾನು ನನ್ನ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು.  ಇದು ನನ್ನ ರಾಜಕೀಯ ಭವಿಷ್ಯಕ್ಕೂ ಧಕ್ಕೆ ಉಂಟು ಮಾಡುವಂತಾಗಿದೆ. ಈ ಎಲ್ಲ ಕಾರಣಗಳಿಂದ ವರದಿಯ ರದ್ದತಿಗೆ ಆದೇಶಿಸಬೇಕು, ವಿಚಾರಣೆ ಮುಗಿಯುವವರೆಗೆ ಮಧ್ಯಂತರ ತಡೆ ನೀಡಬೇಕು~ ಎಂದು  ಕೋರಿದ್ದಾರೆ.ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠದ ಮುಂದೆ ಯಡಿಯೂರಪ್ಪನವರ ಪರ ವಕೀಲರು ಕೋರಿಕೊಂಡರು. ಅದಕ್ಕೆ ಪೀಠ ಸಮ್ಮತಿ ನೀಡಿದ್ದು, ವಿಚಾರಣೆಗೆ ಇದೇ ವಾರ ಬರುವ ನಿರೀಕ್ಷೆ ಇದೆ.ಈ ಆಂಶಗಳನ್ನು ಒಳಗೊಂಡ ಮನವಿಯನ್ನು ಯಡಿಯೂರಪ್ಪ ಮಂಗಳವಾರ ತಮ್ಮ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಮೂಲಕ ಲೋಕಾಯುಕ್ತರಿಗೆ ಸಲ್ಲಿಸಿದರು.ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಪುಟ್ಟಸ್ವಾಮಿ, `ಮನವಿಯನ್ನು ನ್ಯಾ. ಸಂತೋಷ ಹೆಗ್ಡೆ ಅವರು ಸ್ವೀಕರಿಸಿದ್ದಾರೆ. ತಾವು ಮಂಗಳವಾರ ಅಧಿಕಾರದಿಂದ ನಿರ್ಗಮಿಸುತ್ತಿರುವ ಕಾರಣ ಮನವಿಯನ್ನು ಪರಿಶೀಲಿಸಲು ಮುಂದಿನ ಲೋಕಾಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ~ ಎಂದರು.`ನನ್ನ ಪುತ್ರ, ಅಳಿಯ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯ ನಡುವಿನ ರಾಚೇನಹಳ್ಳಿಯ ಭೂವ್ಯವಹಾರದ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯ, ನ್ಯಾಯಮೂರ್ತಿ ಪದ್ಮರಾಜ ಆಯೋಗ ಈಗಾಗಲೇ ತನಿಖೆ ನಡೆಸುತ್ತಿವೆ. ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ನೀಡಿರುವ ದೂರಿನ ಆಧಾರದ ಮೇಲೆಯೂ ಇದೇ ವಿಷಯದ ಕುರಿತು ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಲೋಕಾಯುಕ್ತರು ತಮ್ಮ ವರದಿಯಲ್ಲಿ ಪ್ರಸ್ತಾಪ ಮಾಡಿರುವುದು ಸರಿಯಲ್ಲ~ ಎಂದು ತಿಳಿಸಲಾಗಿದೆ.`ನಾನು ಪ್ರೇರಣಾ ಟ್ರಸ್ಟ್ ಸದಸ್ಯನಲ್ಲ, ಟ್ರಸ್ಟ್‌ನ ವ್ಯವಹಾರಗಳಲ್ಲಿ ತೊಡಗಿಸಿಕೊಂಡವನೂ ಅಲ್ಲ~ ಎಂದು ಪ್ರೇರಣಾ ಟ್ರಸ್ಟ್‌ಗೆ ಸಂದಾಯವಾಗಿರುವ ಹಣದ ಕುರಿತು ಸ್ಪಷ್ಟನೆ ನೀಡಿದ್ದು, `ನನ್ನ ಆಡಳಿತಾವಧಿಯಲ್ಲಿ ಜಿಂದಾಲ್ ಸಮೂಹದ ಪರ ಯಾವುದೇ ಆದೇಶ ಹೊರಡಿಸಿಲ್ಲ. ಅಂಥ ಉದ್ದೇಶವೂ ನನ್ನಲ್ಲಿರಲಿಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry