ಗುರುವಾರ , ನವೆಂಬರ್ 21, 2019
26 °C
ಬೀಗರ ಔತಣಕ್ಕೆ ಅನುಮತಿ ನಕಾರ

ಹೈಕೋರ್ಟ್‌ಗೆ ವಕೀಲರ ದೂರು

Published:
Updated:

ಬೆಂಗಳೂರು: ವಿವಾಹ ಕಾರ್ಯಕ್ರಮದ ನಂತರ ನಡೆಯುವ `ಬೀಗರ ಔತಣ' ಆಯೋಜಿಸಲು ಅನುಮತಿ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ಬೀಗರ ಔತಣ ಆಯೋಜಿಸಲು ಅನುಮತಿ ನೀಡದ ತಹಶೀಲ್ದಾರ್ ಕ್ರಮವನ್ನು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡ ಮಗ್ಗೆ ಗ್ರಾಮದ ರಂಗನಾಥ ಅವರ ವಿವಾಹವು ರೇಖಾ ಎಂಬುವರ ಜೊತೆ ನಡೆಯಲಿದೆ. ರಂಗನಾಥ ಅವರು ವೃತ್ತಿಯಿಂದ ವಕೀಲರು. ಬೀಗರ ಔತಣ ಕಾರ್ಯಕ್ರಮ ಇದೇ 21ರಂದು ನಡೆಯಬೇಕಿದೆ. ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿ ರಂಗನಾಥ ಅವರ ತಂದೆ ಎಂ.ಜಿ. ರಾಜೇಗೌಡ ಅವರು ಅರಕಲಗೂಡು ತಾಲ್ಲೂಕು ಚುನಾವಣಾ ಅಧಿಕಾರಿಗೆ (ತಹಶೀಲ್ದಾರ್) ಇದೇ 8ರಂದು ಮನವಿ ಸಲ್ಲಿಸಿದ್ದಾರೆ. ಆದರೆ ಕಾರ್ಯಕ್ರಮ ಆಯೋಜಿಸಲು ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ.

`ಇದು ಶುದ್ಧ ವೈಯಕ್ತಿಕ ಕಾರ್ಯಕ್ರಮ, ಇದರಲ್ಲಿ ರಾಜಕೀಯ ಇಲ್ಲ. ನಮ್ಮ ಕುಟುಂಬದಲ್ಲಿ ಮದುವೆಯ ನಂತರ ಬೀಗರ ಔತಣ ಕಾರ್ಯಕ್ರಮ ಆಯೋಜಿಸುವುದು ಸಂಪ್ರದಾಯ. ಇದಕ್ಕೂ ಚುನಾವಣಾ ನೀತಿ ಸಂಹಿತೆಗೂ ಸಂಬಂಧ ಇಲ್ಲ. ಔತಣ ಆಯೋಜಿಸಲು ಅನುಮತಿ ನೀಡಬೇಕು' ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ರಾಜ್ಯ ಚುನಾವಣಾ ಆಯೋಕ್ತರು ಮತ್ತು ಹಾಸನ ಜಿಲ್ಲಾಧಿಕಾರಿಯವರಿಗೆ ನೋಟಿಸ್ ಜಾರಿಗೆ ಬುಧವಾರ ಆದೇಶ ನೀಡಿದ್ದಾರೆ. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)