ಹೈಕೋರ್ಟ್‌ಗೆ ಹಾಜರಾಗದ ವಿಜಯ್‌ ಮಲ್ಯ

7
ದಾಖಲೆ ಸಲ್ಲಿಸಲು ವಾರದ ಕಾಲಾವಕಾಶ

ಹೈಕೋರ್ಟ್‌ಗೆ ಹಾಜರಾಗದ ವಿಜಯ್‌ ಮಲ್ಯ

Published:
Updated:

ಬೆಂಗಳೂರು: ‘ಪಾಸ್‌ಪೋರ್ಟ್‌ ಕೈಯಲ್ಲಿ ಹಿಡಿದುಕೊಂಡು, ನ್ಯಾಯಾಲ­ಯದಲ್ಲಿ ವಿಚಾರಣೆಗೆ ಹಾಜರಾಗಿ’ ಎಂದು ಉದ್ಯಮಿ ವಿಜಯ್‌ ಮಲ್ಯ ಅವರಿಗೆ  ಸೋಮವಾರ ತಾನು ನೀಡಿದ್ದ ಆದೇಶವನ್ನು ಹೈಕೋರ್ಟ್‌ ಒಂದು ವಾರದ ಮಟ್ಟಿಗೆ ತಡೆಹಿಡಿದಿದೆ.ಅಷ್ಟರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ತಾಕೀತು ಮಾಡಿದೆ.ರೋಲ್ಸ್‌ ರಾಯ್ಸ್‌ ಅಂಡ್‌ ಪಾರ್ಟ್ನರ್ಸ್‌ ಫೈನಾನ್ಸ್‌ ಲಿಮಿಟೆಡ್‌ ಮತ್ತು ಇತರ ಕಂಪೆನಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯ­ಮೂರ್ತಿ ರಾಮಮೋಹನ ರೆಡ್ಡಿ ಅವರು, ವಿಚಾರಣೆಗೆ ಖುದ್ದಾಗಿ ಹಾಜ­ರಾಗುವಂತೆ ಮಲ್ಯ ಅವರಿಗೆ ನಿರ್ದೇಶನ ನೀಡಿದ್ದರು. ಕೋರ್ಟ್‌ಗೆ ಬರುವಾಗ ಪಾಸ್‌ಪೋರ್ಟ್‌ ತರುವಂತೆ ಸೂಚಿ­ಸಿದ್ದರು.ಲಂಡನ್‌ ಮೂಲದ ಬಹುರಾ­ಷ್ಟ್ರೀಯ ಮದ್ಯ ತಯಾರಿಕಾ ಕಂಪೆನಿ ಡಿಯಾಜಿಯೊ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಮಲ್ಯ ಅವರು ಸರಿಯಾಗಿ ನೀಡದ ಕಾರಣ, ನ್ಯಾಯಮೂರ್ತಿಯವರು ಈ ಆದೇಶ ನೀಡಿದ್ದರು. ಮಂಗಳವಾರ ವಿಚಾರಣೆ ವೇಳೆ ಮಲ್ಯ ಪರ ಹಾಜರಾದ ವಕೀಲರು, ‘ಒಂದು ವಾರದ ಕಾಲಾವಕಾಶ ನೀಡಿ. ನೀವು ಕೋರಿದ ಎಲ್ಲ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೆ ಖುದ್ದು ಹಾಜರಾತಿ ಆದೇಶವನ್ನು ತಡೆ ಹಿಡಿಯಬೇಕು‘ ಎಂದು ಕೋರಿದರು.ಸಾಲದ ಸುಳಿಯಲ್ಲಿ ಸಿಲುಕಿರುವ ಮಲ್ಯ ಒಡೆತನದ ಕಿಂಗ್‌ಫಿಷರ್‌ ಏರ್‌­ಲೈನ್ಸ್‌ ಕಂಪೆನಿಯ ಸೇವೆಗಳನ್ನು ಪುನರಾ­ರಂಭಿಸುವ ಬಗ್ಗೆ ಯೋಜನೆಯ ವಿವರ­ಗಳನ್ನೂ ಒಂದು ವಾರದಲ್ಲಿ ನೀಡಬೇಕು ಎಂದು ನ್ಯಾಯಮೂ­ರ್ತಿ ಸೂಚಿ­ಸಿದರು. ವಿಚಾರಣೆ ಮುಂದೂಡಲಾಗಿದೆ.ತಮ್ಮಿಂದ ಮಲ್ಯ ಅವರು  ₨ 600 ಕೋಟಿ ಸಾಲ ಪಡೆದಿದ್ದಾರೆ. ಆಸ್ತಿ­ಯನ್ನು ಮಾರಿಯಾದರೂ ಇದನ್ನು ಮರುಪಾವತಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry