ಹೈಕೋರ್ಟ್ ತೀರ್ಪಿನ ಮೇಲೆ ನಿಂತಿದೆ ಭವಿಷ್ಯ

7
ನಗರಸಭೆ ಅಧ್ಯಕ್ಷೆ ದೇವಿಕಾ ವಿರುದ್ಧ ಅವಿಶ್ವಾಸ, ಇಂದು ತೀರ್ಪು

ಹೈಕೋರ್ಟ್ ತೀರ್ಪಿನ ಮೇಲೆ ನಿಂತಿದೆ ಭವಿಷ್ಯ

Published:
Updated:

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತವರು ಜಿಲ್ಲೆಯಲ್ಲೇ ನಗರಸಭೆ ಅಧಿಕಾರ ಕಳೆದುಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಕಾಂಗ್ರೆಸ್‌ಗೆ ಗುರುವಾರ ಹೈಕೋರ್ಟ್ ನೀಡುವ ತೀರ್ಪು ಮಹತ್ವ ಪಡೆದುಕೊಂಡಿದೆ.ಕಾಂಗ್ರೆಸ್‌ನ ಸದಸ್ಯರೇ ಬಿಜೆಪಿ ಜೊತೆಗೂಡಿ ತಮ್ಮದೇ ಪಕ್ಷದ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ತಂದಿದ್ದಾರೆ. ಅಧ್ಯಕ್ಷೆ ದೇವಿಕಾ ಅವಿಶ್ವಾಸ ಸಭೆ ಕರೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಅಸ್ಲಾಂ ಪಾಷ ಡಿ. 7ರಂದು ಅವಿಶ್ವಾಸ ಸಭೆ ಕರೆದಿದ್ದಾರೆ. ಪಕ್ಷ ಕೈಬಿಟ್ಟರೂ ಅಧ್ಯಕ್ಷಗಾದಿ ಉಳಿಸಿಕೊಳ್ಳಲು ಎಣಗುತ್ತಿರುವ ಅಧ್ಯಕ್ಷೆ ದೇವಿಕಾ ಅವಿಶ್ವಾಸದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಸದಸ್ಯರು ಅವಿಶ್ವಾಸ ಸಭೆ ಕರೆಯುವ ಮನವಿಯನ್ನು ನೇರವಾಗಿ ತಮಗೆ ನೀಡಿಲ್ಲ. ತಮ್ಮ ಹೆಸರಿಗೂ ವಿಳಾಸ ನಮೂದಿಸಿಲ್ಲ. ನೇರವಾಗಿ ನಗರಸಭೆ ಆಯುಕ್ತರಿಗೆ ಸಲ್ಲಿಸಿದ್ದಾರೆ. ನಗರಸಭೆ ಆಯುಕ್ತರಿಂದ ತಮಗೆ ಅರ್ಜಿ ರವಾನೆಯಾಗಿದ್ದು, ಇದು ಕ್ರಮ ಬದ್ಧವಾಗಿಲ್ಲ. ಅಲ್ಲದೆ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ವಾರ್ಡ್ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದೆ.

ಒಂದೂವರೆ ತಿಂಗಳಲ್ಲಿ ಚುನವಣೆಯೂ ನಡೆಯಲಿದೆ. ಚುನಾವಣೆ ಸಮೀಪವೇ ಇರುವಾಗ ಅವಿಶ್ವಾಸ ಮಂಡನೆ ಅಗತ್ಯವಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿನಂತಿಸಿದ್ದಾರೆ.ಅರ್ಜಿಯ ವಾದ-ವಿವಾದ ಆಲಿಸಿದ ಹೈಕೋರ್ಟ್ ಗುರುವಾರಕ್ಕೆ ತೀರ್ಪು ಕಾಯ್ದಿರಿಸಿದೆ. ಶುಕ್ರವಾರ ಅವಿಶ್ವಾಸ ಸಭೆ ಕರೆಯಲಾಗಿದೆ. ಹೀಗಾಗಿ ನಾಳೆಯ ಹೈಕೋರ್ಟ್ ತೀರ್ಪಿನ ಮೇಲೆ ಅವಿಶ್ವಾಸ ಸಭೆ ನಿಂತಿದೆ.ಸದ್ಯಕ್ಕೆ ಜೆಡಿಎಸ್ ಸದಸ್ಯರು ದೇವಿಕಾ ಪರ ನಿಂತಿದ್ದಾರೆ. ಆದರೆ ತಮ್ಮದೇ ಪಕ್ಷ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಅವರು ಪಕ್ಷೇತರ ಸದಸ್ಯರ ಬೆಂಬಲ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಸದ್ಯದ ಮಾಹಿತಿಯಂತೆ ದೇವಿಕಾ ಪರ ಹನ್ನೊಂದು ಸದಸ್ಯರಿದ್ದಾರೆ. ಇನ್ನೂ ಇಬ್ಬರು ಸದಸ್ಯರ ಬೆಂಬಲಕ್ಕಾಗಿ ಇನ್ನಿಲ್ಲದ ಕಸರತ್ತು ನಡೆದಿದೆ. ಆದರೆ ಅವಿಶ್ವಾಸ ಸಭೆಯಲ್ಲಿ ಈಗಿರುವ ಹನ್ನೊಂದರ ಸಂಖ್ಯೆ ಹದಿಮೂರಕ್ಕೂ ಹೆಚ್ಚಬಹುದು, ಇಲ್ಲವೇ ಹನ್ನೊಂದರಿಂದ ಕೆಳಗೂ ಕುಸಿಯಬಹುದು ಎಂದು ಮೂಲಗಳು ತಿಳಿಸಿವೆ.ಈ ಹಿಂದೆ ಬಿಜೆಪಿ ನಗರಸಭೆ ಅಧಿಕಾರ ಹಿಡಿದಿತ್ತು. ಬಿಜೆಪಿಯ ಯಶೋಧಾ ಗಂಗಪ್ಪ ಅವರನ್ನು ಅವಿಶ್ವಾಸದಿಂದ ಕೆಳಗಿಳಿಸಿ ಜೆಡಿಎಸ್ ಬೆಂಬಲದೊಂದಿಗೆ ದೇವಿಕಾ ಅಧಿಕಾರಕ್ಕೇರಿದ್ದರು.ದೇವಿಕಾ ಅವರ ವಿರುದ್ಧ ಅವಿಶ್ವಾಸಕ್ಕೆ 26 ಸದಸ್ಯರು ಸಹಿ ಹಾಕಿದ್ದಾರೆ. ಅವಿಶ್ವಾಸಕ್ಕೆ ಜಯ ಸಿಗಬೇಕಾದರೆ ಒಟ್ಟು ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ಅವಿಶ್ವಾಸದ ಪರ ನಿಲ್ಲಬೇಕಾಗುತ್ತದೆ. ಮೂರನೇ ಎರಡರಷ್ಟು ಸದಸ್ಯರು ಸಭೆಯಲ್ಲಿ ಭಾಗವಹಿಸದಿದ್ದರೆ, ಇಲ್ಲವೆ ಅವಿಶ್ವಾಸದ ಪರ ನಿಲ್ಲದಿದ್ದರೆ ಅವಿಶ್ವಾಸ ಬಿದ್ದು ಹೋಗುತ್ತದೆ.ಒಟ್ಟು 35 ಸದಸ್ಯರ ಬಲ ಇರುವ ನಗರಸಭೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9 (ಸದ್ಯ, ನಾಲ್ವರು ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ), ಜೆಡಿಎಸ್ 9, ಸಿಪಿಎಂ 1 (ಸದ್ಯ, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ) ಹಾಗೂ ಮೂವರು ಪಕ್ಷೇತರರು ಇದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry