ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ

7

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ

Published:
Updated:

ನವದೆಹಲಿ: ಕರ್ನಾಟಕ ವಿಧಾನಸಭೆಯಿಂದ ಅನರ್ಹಗೊಂಡಿರುವ ಐವರು ಪಕ್ಷೇತರ ಶಾಸಕರು ಸ್ಪೀಕರ್ ಆದೇಶ ಊರ್ಜಿತಗೊಳಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅವಿಶ್ವಾಸ ವ್ಯಕ್ತಪಡಿಸಿದ ಈ ಶಾಸಕರನ್ನು ವಿಧಾನಸಭೆ ಸ್ಪೀಕರ್ ಅನರ್ಹಗೊಳಿಸಿ ರೂಲಿಂಗ್ ನೀಡಿದ್ದರು. ಇದನ್ನು ರಾಜ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಹೈ ಕೋರ್ಟ್‌ನ ಪೂರ್ಣ ಪೀಠವು ಸ್ಪೀಕರ್ ಅವರ ರೂಲಿಂಗ್‌ನ್ನು ಎತ್ತಿ ಹಿಡಿದ ಕಾರಣ ಅನರ್ಹ ಶಾಸಕರು ಈಗ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಕಳೆದ ಅಕ್ಟೋಬರ್ 10ರಂದು ಪಕ್ಷಾಂತರ ನಿಷೇಧ ಕಾಯ್ದೆಯಡಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಇದು ಅಕ್ರಮ ಮತ್ತು ಪಕ್ಷೇತರ ಸದಸ್ಯರಾದ ತಾವು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಪಕ್ಷೇತರರಾದ ನಾವು ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಚಿವ ಸಂಪುಟದಲ್ಲಿ ಸದಸ್ಯರಾಗಿದ್ದೆವು. ಆದರೆ ನಾವು ಬಿಜೆಪಿಯ ಸದಸ್ಯರಲ್ಲ’ ಎಂದು ಅರ್ಜಿಯಲ್ಲಿ ದೂರಿದ್ದಾರೆ.‘ಹೈಕೋರ್ಟ್ ನೀಡಿರುವ ತೀರ್ಪನ್ನು ನಂಬುವುದಾದರೆ ಪಕ್ಷೇತರ ಸದಸ್ಯರ ನೆರವಿನಿಂದ ಸಮ್ಮಿಶ್ರ  ಸರ್ಕಾರ ರಚಿಸಲು ಅವಕಾಶವೇ ಇರುವುದಿಲ್ಲ. ಅದ್ದರಿಂದ ಸ್ಪೀಕರ್ ಅವರ ಅದೇಶವನ್ನು ರದ್ದುಗೊಳಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.‘ಸ್ಪೀಕರ್ ಸ್ಥಾನಕ್ಕೆ ಬೋಪಯ್ಯನವರ ಆಯ್ಕೆಯಾದ ಮೇಲೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಆದ್ದರಿಂದ ಬೋಪಯ್ಯನವರು ನೀಡಿರುವ ಈ ಆದೇಶ ಪೂರ್ವಗ್ರಹ ಪೀಡಿತವಾದುದು ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು’ ಎಂದು ದೂರಿದ್ದಾರೆ.‘ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಕ್ರಮಬದ್ಧವಾಗಿಲ್ಲ. ಸಂವಿಧಾನದ 10ನೇ ಪರಿಚ್ಛೇಧವನ್ನು ಹೈಕೋರ್ಟ್ ತಪ್ಪಾಗಿ ಅರ್ಥೈಸಿದ್ದು, ಸರ್ಕಾರದಲ್ಲಿ ಸಚಿವರಾಗಿದ್ದ ಮಾತ್ರಕ್ಕೆ ಪಕ್ಷೇತರ ಶಾಸಕರು ಬಿಜೆಪಿಗೆ ಸೇರಿದ್ದಾರೆ ಎಂದು ಹೇಳುವುದು ಸರಿಯಲ್ಲ’ ಎಂದು ಅರ್ಜಿದಾರರ ಪರ  ವಕೀಲ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.ಪಕ್ಷೇತರ ಶಾಸಕರಾಗಿದ್ದ ಎಂ.ಪಿ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಡಿ.ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್ ಅವರು 2008ರಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರೂ ಆಗಿದ್ದರು. ಆದರೆ ಕಳೆದ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಸ್ಪೀಕರ್ ಬೋಪಯ್ಯ ಈ ಐವರ ವಿರುದ್ಧ ಕ್ರಮ ಜರುಗಿಸಿದ್ದರು.ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡೆದಿದ್ದ 11 ಬಿಜೆಪಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಇದನ್ನು ಸಹ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಹೈಕೋರ್ಟ್ ಸ್ಪೀಕರ್ ಅವರ ಅದೇಶವನ್ನು ಊರ್ಜಿತ ಮಾಡಿದ್ದು, ಇದನ್ನೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದೆ. ತೀರ್ಪನ್ನು ಕಾಯ್ದಿರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry