ಮಂಗಳವಾರ, ಮೇ 11, 2021
22 °C

ಹೈಕೋರ್ಟ್ ಮೆಟ್ಟಲೇರಿದ ಪರೀಕ್ಷೆ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವಿ ತರಗತಿಗಳಿಗೆ 2011ರ ಆಗಸ್ಟ್‌ನಲ್ಲಿ ನಡೆದ ಪರೀಕ್ಷೆಯ ವೇಳೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದ ಹಿನ್ನೆಲೆಯಲ್ಲಿ ರದ್ದಾದ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲು ಉದ್ದೇಶಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ತಿಮ್ಮಪ್ಪ ಹಾಗೂ ಇತರರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ.ಬಿ.ಎ ಮತ್ತು ಬಿ.ಕಾಂ ಪರೀಕ್ಷೆಯ ಸಂದರ್ಭದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿಯ `ಬಳ್ಳಾರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ~ ಹಾಗೂ ದಾವಣಗೆರೆಯ `ನಾರ್ದನ್ ಎಜುಕೇಷನ್ ಸೊಸೈಟಿ~ಯಲ್ಲಿ ಸಾಮೂಹಿಕ ನಕಲು ನಡೆದಿತ್ತು ಎಂಬ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.

ಕಳೆದ ಮಾರ್ಚ್ 7ರಂದು ಬೆಂಗಳೂರು ವಿಶ್ವವಿದ್ಯಾಲಯವು ಸುತ್ತೋಲೆ ಹೊರಡಿಸಿ ಮರು ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸುವುದಾಗಿ ಹೇಳಿದೆ. ಇದನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.ತಾವೆಲ್ಲ ಬಡ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳು. ಕೆಲವು ವಿದ್ಯಾರ್ಥಿಗಳು ಉದ್ಯೋಗದಲ್ಲಿಯೂ ಇದ್ದಾರೆ. ಬಹು ದೂರದ ಬೆಂಗಳೂರಿಗೆ ಪ್ರಯಾಣ ಮಾಡಿ ಅಲ್ಲಿ ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ತಮಗೆ ಕಷ್ಟಸಾಧ್ಯ. ಆದುದರಿಂದ ಈ ಮೊದಲು ನಡೆದ ಸ್ಥಳಗಳಲ್ಲಿಯೇ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯಕ್ಕೆ ಆದೇಶಿಸಬೇಕು ಎನ್ನುವುದು ಅವರ ಕೋರಿಕೆ. ವಿಚಾರಣೆಯನ್ನು ಮುಂದೂಡಲಾಗಿದೆ.ವೀರಶೈವ ಮಹಾಸಭಾ ಚುನಾವಣೆಮೇ 20ರಂದು ನಡೆಯಲಿರುವ ವೀರಶೈವ ಮಹಾಸಭಾ ಚುನಾವಣೆಯಲ್ಲಿನ ಮತದಾನಕ್ಕೆ ಸಂಬಂಧಿಸಿದಂತೆ ಮಾಡಲಾದ ತಿದ್ದುಪಡಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.ಇಲ್ಲಿಯವರೆಗೆ ಮಹಾಸಭೆಯ ಪ್ರತಿ ಸದಸ್ಯರು 41 ಮತಗಳನ್ನು ಚಲಾಯಿಸಲು ಅಧಿಕಾರ ಇತ್ತು. ಆದರೆ ಕಳೆದ ಏ.16ರಂದು ಮಾಡಲಾದ ತಿದ್ದುಪಡಿಯಲ್ಲಿ ಆಯಾ ಜಿಲ್ಲೆಗಳಿಗೆ ಪ್ರತ್ಯೇಕ ಮತದಾನದ ಅಂಕಿ ಅಂಶ ನೀಡಲಾಗಿದೆ.ಇದರಿಂದ ತಾವು ಅತಿ ಕಡಿಮೆ ಮತವನ್ನು ಚಲಾಯಿಸಬೇಕಾಗುತ್ತದೆ. ಇದು ನಿಯಮಬಾಹಿರ ಎನ್ನುವುದು ಅರ್ಜಿದಾರರ ವಾದ. ಸರ್ಕಾರ, ಮಹಾಸಭೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಕೋರ್ಟ್, ವಿಚಾರಣೆ ಮುಂದೂಡಿದೆ.ಕೆಎಂಎಫ್: ಮರುಪರಿಶೀಲನೆಗೆ ಆದೇಶಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಐ.ಆರ್. ರಾಮಲಿಂಗೇಗೌಡ ಅವರನ್ನು ಬಿಡುಗಡೆಗೊಳಿಸಿರುವ ಕುರಿತಾದ ಆದೇಶದ ಬಗ್ಗೆ 15 ದಿನಗಳ ಒಳಗೆ ಮರುಪರಿಶೀಲಿಸುವಂತೆ ಮಹಾಮಂಡಳಕ್ಕೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.ತಮ್ಮ ವಿರುದ್ಧದ ಆದೇಶ ಪ್ರಶ್ನಿಸಿ ಗೌಡರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ಪೀಠ ನಡೆಸಿತು.`ರಾಮಲಿಂಗೇಗೌಡ ಅವರ ವಿರುದ್ಧ ಕೆಲವು ಆರೋಪಗಳು ಇರುವ ಹಿನ್ನೆಲೆಯಲ್ಲಿ ದೋಷಾರೋಪಣೆ ಪಟ್ಟಿ ತಯಾರು ಮಾಡಲಾಗಿದೆ.ಅದನ್ನು ಪ್ರಶ್ನಿಸಿ ಅವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ. ಈ ಮಧ್ಯೆಯೇ, ಅವರ ಬಿಡುಗಡೆ ಕುರಿತಾದ ಆದೇಶವನ್ನು ಪುನರ್‌ಪರಿಶೀಲಿಸುವ ಸಂಬಂಧ ಚರ್ಚೆಯೂ ನಡೆದಿದೆ~ ಎಂದು ಕೆಎಂಎಫ್ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮರುಪರಿಶೀಲನೆಗೆ ನ್ಯಾಯಮೂರ್ತಿಗಳು ಆದೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.