ಮಂಗಳವಾರ, ನವೆಂಬರ್ 12, 2019
27 °C

`ಹೈ.ಕ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ'

Published:
Updated:

ಗುಲ್ಬರ್ಗ: ಕರ್ನಾಟಕ ಸರ್ಕಾರದೊಂದಿಗೆ ಈಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳು ಹೈದರಾಬಾದ್‌ನಲ್ಲಿರುವ ಡಾ. ನೀರ್ಣಿ ಕ್ಯಾನ್ಸರ್ ಫೌಂಡೇಷನ್ ಆಸ್ಪತ್ರೆಗೆ ಬಂದು ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಭಾನುವಾರ ಇಲ್ಲಿ ಡಾ. ಎಸ್.ಎಸ್. ನೀರ್ಣಿ ವಿವರಿಸಿದರು.ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಎರಡು ಲಕ್ಷ ರೂಪಾಯಿವರೆಗಿನ ಚಿಕಿತ್ಸೆ ಉಚಿತವಾಗಿದ್ದು, ಬಹುತೇಕ ಎಲ್ಲ ತರಹದ ಕ್ಯಾನ್ಸರ್ ರೋಗಗಳ ಚಿಕಿತ್ಸೆಗೆ ಈ ಮೊತ್ತ ಸಾಕಾಗುತ್ತದೆ. ಹೈದರಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಆಗಾಗ ಕ್ಯಾನ್ಸರ್ ವಾಜಪೇಯಿ ಆರೋಗ್ಯಶ್ರೀ ತಪಾಸಣೆ ನಡೆಯುತ್ತದೆ. ಆ ಮೂಲಕ ಅಥವಾ ನೇರವಾಗಿ ಬಂದರೂ ಅಗತ್ಯ ಚಿಕಿತ್ಸೆ ಒದಗಿಸಲಾಗುವುದು. ಈ ಯೋಜನೆ ಅಡಿಯಲ್ಲಿ ಸಾರಿಗೆ ಹಾಗೂ ವಸತಿ  ಉಚಿತವಾಗಿ ದೊರೆಯುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬಿಪಿಎಲ್ ಕುಟುಂಬದವರು ಇದರ ಲಾಭ ಪಡೆದುಕೊಳ್ಳಬೇಕು. ಈ ಯೋಜನೆಯ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಹೈ.ಕ. ಭಾಗದ ಕ್ಯಾನ್ಸರ್ ರೋಗಿಗಳಿಗೆ ವಿಶೇಷ ರಿಯಾಯಿತಿ ಒದಗಿಸಲಾಗುವುದು. ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಕಂಡು ಬರುತ್ತದೆ.ಭಾರತದಲ್ಲಿ ಪ್ರತಿ 10 ಮಹಿಳೆಯರಲ್ಲಿ ಒಬ್ಬರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗಿದೆ. ಪುರುಷರಲ್ಲಿ ದೂಮಪಾನ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಾಗಿ ಆವರಿಸಿಕೊಳ್ಳುತ್ತದೆ. ಕ್ಯಾನ್ಸರ್ ಆರಂಭದ ಹಾಗೂ ಎರಡನೇ ಹಂತದಲ್ಲಿದ್ದರೆ ಕಿಮೋ ಥೆರಪಿಯಿಲ್ಲದೆ ಗುಣಪಡಿಸಬಹುದು. ಯಾವುದಕ್ಕೂ ಮಹಿಳೆಯರು ಸಂಬಂಧಿಸಿದ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಭಾರತದಲ್ಲಿ ಶೇ. 40ರಷ್ಟು ದುರಭ್ಯಾಸದಿಂದಾಗಿಯೇ ಕ್ಯಾನ್ಸರ್ ರೋಗ ಬಂದಿದೆ. ಆಶಾ ಕಾರ್ಯಕರ್ತೆಯರ ಮೂಲಕ ಮಹಿಳೆಯರು ಸ್ವಯಂ ಸ್ತನ ತಪಾಸಣೆ ಮಾಡಿಕೊಳ್ಳುವುದನ್ನು ತಿಳಿದುಕೊಳ್ಳಬೇಕು ಎಂದರು.ಆಸ್ಪತ್ರೆ ವಿಳಾಸ: ಮ.ನಂ. ಎ-346, ಎಂಎಲ್‌ಎ ಕಾಲೋನಿ, ರಸ್ತೆ ಸಂಖ್ಯೆ 12, ಬಂಜಾರ್ ಹಿಲ್ಸ್, ಹೈದರಾಬಾದ್-34. ಮೊ.ನಂ. 098490 620063.

ಪ್ರತಿಕ್ರಿಯಿಸಿ (+)