ಹೈ.ಕ. ಪ್ರವಾಸೋದ್ಯಮ ಅಭಿವೃದ್ಧಿಗೆ ಮನವಿ

7

ಹೈ.ಕ. ಪ್ರವಾಸೋದ್ಯಮ ಅಭಿವೃದ್ಧಿಗೆ ಮನವಿ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮಗಳ ಒಕ್ಕೂಟ (ಎಚ್‌ಕೆಸಿಸಿಐ) ಹಾಗೂ ಕರ್ನಾಟಕ ವಾಣಿಜ್ಯೋದ್ಯಮಗಳ ಒಕ್ಕೂಟ (ಎಫ್‌ಕೆಸಿಸಿಐ) ಸಂಯುಕ್ತವಾಗಿ ಗುಲ್ಬರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ `ಹೈ.ಕ. ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ~ ಕುರಿತಾದ ಸಂವಾದ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರಿಗೆ ಮನವಿಯೊಂದನ್ನು ಸಲ್ಲಿಸಲಾಗಿದೆ. ಮನವಿಯ ಸಾರಾಂಶ ಇಲ್ಲಿದೆ.ಹೈದರಾಬಾದ್ ಕರ್ನಾಟಕ ಪ್ರದೇಶವು ಹಿಂದುಳಿದ ಪ್ರದೇಶವಾಗಿದ್ದರೂ ಐತಿಹಾಸಿಕ ಭವ್ಯ ಕಟ್ಟಡಗಳು, ಸ್ಮಾರಕಗಳು, ಶಿಲ್ಪಕಲೆ, ಶಿಲಾಶಾಸನಗಳು ನೋಡುಗರನ್ನು ಸೆಳೆಯುವುದರೊಂದಿಗೆ ಇತಿಹಾಸದ ಪುರಾವೆಗಳಾಗಿ ಈ ಭಾಗವನ್ನು ಶ್ರೀಮಂತ ಮಾಡಿವೆ.ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ನಗರ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳುದ್ದಕ್ಕೂ ಹರಡಿಕೊಂಡಿರುವ ಗತಕಾಲದ ವೈಭವ ಸಾರುವ ಸ್ಮಾರಕ, ಕಟ್ಟಡಗಳನ್ನು ಪ್ರೇಕ್ಷಣಿಯ ಸ್ಥಳಗಳಾಗಿ ಪೋಷಿಸುವ ಕಾರ್ಯ ಭರದಿಂದ ಸಾಗಬೇಕಾದ ಅಗತ್ಯವಿದೆ. ಅಲ್ಲದೆ, ಈ ಭಾಗವನ್ನು ರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವೆಂದು ಘೋಷಿಸಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.ಗುಲ್ಬರ್ಗದಲ್ಲಿ ಶರಣ ಬಸವೇಶ್ವರ ದೇವಸ್ಥಾನ, ಶರಣ ಬಸವೇಶ್ವರ ಕೆರೆ ಮತ್ತು ಉದ್ಯಾನ, ಖಾಜಾ ಬಂದೇನವಾಜ ದರ್ಗಾ, ಬುದ್ಧ ವಿಹಾರ, ಬಹಮನಿ ಸಾಮ್ರಾಜ್ಯದ ಕೋಟೆ, ವಿಶ್ವವಿಖ್ಯಾತ ಜಾಮೀಯಾ ಮಸೀದಿ, ದೇವಲ ಘಾಣಗಾಪುರದ ದತ್ತಾತ್ರೇಯಸ್ವಾಮಿ ದೇವಸ್ಥಾನ, ಸನ್ನತಿಯ ಬೌದ್ಧ ಧಾರ್ಮಿಕ ಕೇಂದ್ರ, ರಾಷ್ಟ್ರಕೂಟರ ರಾಜಧಾನಿ ಮಳಖೇಡ.ಬೀದರ್‌ನಲ್ಲಿ ಬೀದರ್ ಕೋಟೆ, ನರಸಿಂಹ ಝರಾ, ಗುರುನಾನಕ ಝರಾ, ಪಾಪನಾಶಿ ದೇವಸ್ಥಾನ, ಬಸವಕಲ್ಯಾಣದ ಅನುಭವ ಮಂಟಪ, ಅಕ್ಕಮಹಾದೇವಿ ಗುಹೆ ಹಾಗೂ ಬೀದರ್‌ನಲ್ಲಿ ಇನ್ನೂ ಐತಿಹಾಸಿಕ ಕುರುಹುಗಳ ಸಂಶೋಧನೆ ನಿರಂತರವಾಗಿ ನಡೆದಿದೆ.ರಾಯಚೂರು ಕೋಟೆಯನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಕೊಪ್ಪಳ ಕೋಟೆ ಹಾಗೂ ಪ್ರಸಿದ್ಧ ಪೌರಾಣಿಕ ಸ್ಥಳ ಕಿಷ್ಕಿಂದಾ, ಬಳ್ಳಾರಿ ಜಿಲ್ಲೆಯಂತೂ ಐತಿಹಾಸಿಕವಾಗಿ ಶ್ರೀಮಂತವಾದ ನಾಡಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವೆಂದು ಘೋಷಿಸಬೇಕು ಎಂದು ಈ ಮೂಲಕ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮಗಳ ಮಂಡಳಿ ಹಾಗೂ ಕರ್ನಾಟಕ ವಾಣಿಜ್ಯೋದ್ಯಮಗಳ ಮಂಡಳಿಗಳ ಪದಾಧಿಕಾರಿಗಳು ಕೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry