ಹೈ.ಕ. ಭಾಗಕ್ಕೂ ಆದ್ಯತೆ ಇರಲಿ

7

ಹೈ.ಕ. ಭಾಗಕ್ಕೂ ಆದ್ಯತೆ ಇರಲಿ

Published:
Updated:

ಗುಲ್ಬರ್ಗ: ಸುದ್ದಿ ಪತ್ರಿಕೆಗಳು ಕೇವಲ ಸುದ್ದಿ ಪತ್ರಿಕೆಗಳಾಗಿ ಉಳಿಯದೇ ಶುದ್ಧ ಸಾಹಿತ್ಯ, ಸಂಸ್ಕೃತಿ ಕಲೆಗಳಿಗೆ ಅವಕಾಶ ಮಾಡಿಕೊಡುತ್ತವೆ ಎನ್ನುವುದಕ್ಕೆ ‘ಪ್ರಜಾವಾಣಿ-ದೇಶಕಾಲ’ ಪತ್ರಿಕೆಯ ಸಹಯೋಗದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ ಬರುತ್ತಿರುವ ಸಾಹಿತ್ಯ ಪುರವಣಿಯೇ ಸಾಕ್ಷಿ ಎಂದು ಯುವ ಬರಹಗಾರ್ತಿ ಕಾವ್ಯಶ್ರೀ ಮಹಾಗಾಂವಕರ ಅಭಿಪ್ರಾಯಪಟ್ಟರು.ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಕಾಯಕ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಬುಧವಾರ ಇಲ್ಲಿನ ಕಾಯಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾವಾಣಿ-ದೇಶಕಾಲ’ ಕಾರ್ಯಕ್ರಮ ಕುರಿತ ಒಂದಿಷ್ಟು ಮಾತುಕತೆ-ಚರ್ಚೆ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಓರ್ವ ಗೌರವಾನ್ವಿತ ಮಹಿಳೆ ನೋಡಿದಾಗ ನಮಗೆ ಯಾವ ರೀತಿಯ ಮನೋಭಾವ ಉಂಟಾಗುತ್ತದೋ ಅದೇ ರೀತಿ ‘ಪ್ರಜಾವಾಣಿ’ ಪತ್ರಿಕೆ ನೋಡಿದಾಗ ಕೂಡ ಆಗುತ್ತದೆ ಎಂದು ತಮ್ಮ ಅವ್ವ ಹೇಳುತ್ತಿದ್ದುದನ್ನು ಸ್ಮರಿಸಿಕೊಂಡ ಅವರು, ಪ್ರಾಚೀನ ಸಾಹಿತ್ಯದ ಬಗ್ಗೆ ಆಧುನಿಕ ಕಾಲದ ಯುವ ಲೇಖಕರಿಗೆ ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಬಣ್ಣಿಸಿದರು.ನಾಡಿನ ಹೆಮ್ಮೆಯ ಪತ್ರಿಕೆಯಾದ ‘ಪ್ರಜಾವಾಣಿ’ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ರಾಜ್ಯದ ವಿವಿಧ ಪ್ರದೇಶಗಳಲ್ಲಾಗುತ್ತಿದ್ದ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದ ಕಲಬುರಗಿ ಕಲರವ, ಚಹಾದ ಜೋಡಿ ಚೂಡಾದಾಂಗ’ ಮುಂತಾದ ಅಂಕಣಗಳನ್ನು ಮತ್ತೆ ಆರಂಭಿಸುವಂತೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಸಲಹೆ ನೀಡಿದರು.ಈ ಪುರವಣಿ ಮತ್ತೆ ಕೇವಲ ಬೆಂಗಳೂರು, ಮೈಸೂರು ಬಹಳವಾದರೆ ಧಾರವಾಡ ಪ್ರದೇಶದ ಸಾಹಿತಿ ಬರಹಗಾರರಿಗೆ ಮೀಸಲಾಗದೆ ಸಮಗ್ರ ಕರ್ನಾಟಕ ಪ್ರತಿನಿಧಿಸುವಂತಿರಲಿ. ಹೊಸದಾಗಿ ಪ್ರಕಟಗೊಂಡ ಪುಸ್ತಕಗಳ ಪಟ್ಟಿ ಪ್ರಕಟಿಸುವುದರ ಜೊತೆಗೆ ‘ತಕ್ಕಡಿ’ ರೀತಿಯ ವಿಮರ್ಶಾ ಲೇಖನಗಳು ಮೂಡಿ ಬರಲಿ ಎಂದು ಅವರು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಕನ್ನಡಿಗರ ಜನಮಾನಸವನ್ನು ಗೆದ್ದ ‘ಪ್ರಜಾವಾಣಿ’ ಪತ್ರಿಕೆಯ ಈ ಪ್ರಯೋಗ ಸ್ವಾಗತಾರ್ಹ. ಆದರೆ ದೇಶಕಾಲದ ಜೊತೆ ಸೇರಿ ಪುರವಣಿ ರೂಪಿಸುವ ಅಗತ್ಯ ಇರಲಿಲ್ಲ. ಗಾತ್ರದಲ್ಲೂ ಇನ್ನಷ್ಟು ಹಿಗ್ಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯವನ್ನು ಸಮಕಾಲೀನ ಸಂದರ್ಭದಲ್ಲಿ ನಿಂತು ನೋಡುವುದರ ಜೊತೆಗೆ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾದ ಸಾಹಿತ್ಯಕ ಅಂಶಗಳ ಕಡೆಗೂ ಗಮನಹರಿಸಬೇಕು ಎಂದರು.ವರ್ಷದಲ್ಲಿ ಒಂದು ಬಾರಿ ಇಡೀ ಪುರವಣಿಯನ್ನು ಸಮಸ್ತ ಭಾರತೀಯ ಸಾಹಿತ್ಯ ಮತ್ತು ಇನ್ನೊಂದು ಪುರವಣಿಯನ್ನು ಜಾಗತಿಕ ಸಾಹಿತ್ಯದ ಬಗ್ಗೆ ಮೀಸಲಿಡಬೇಕು ಎಂಬ ಸಲಹೆ ನೀಡಿದ ಅವರು, ಈ ಭಾಗದ ವಿಮರ್ಶಕರನ್ನು ವಿಮರ್ಶಕರ ಪಟ್ಟಿಯಲ್ಲಿ ಸೇರಿಸಿಕೊಂಡಾಗ ಮಾತ್ರ ಪರಿಪೂರ್ಣ ಪುರವಣಿ ಆಗಲು ಸಾಧ್ಯ. ಈ ದಿಶೆಯಲ್ಲಿ ಪತ್ರಿಕೆಯವರು ಯೋಚಿಸುವುದು ಒಳಿತು ಎಂದು ತಿಳಿಸಿದರು.ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿ ಕುಲ್ಕರ್ಣಿ, ಸಿದ್ಧರಾಮ ಪೊಲೀಸ್ ಪಾಟೀಲ, ಕಲ್ಯಾಣರಾವ ಭಕ್ಷಿ, ಭೀಮಣ್ಣ ಬೋನಾಳ, ರಾವೂಫ್ ಖಾದ್ರಿ, ಸೂಗಯ್ಯ ಹಿರೇಮಠ, ಶಾಂತಪ್ಪ ಪಾಟೀಲ ನರಿಬೋಳ, ಪ್ರೊ. ಚನ್ನಾರೆಡ್ಡಿ ಪಾಟೀಲ, ಲಕ್ಷ್ಮಣರಾವ ಗೋಗಿ ಇತರರು, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೂ ಪುರವಣಿಯಲ್ಲಿ ಆದ್ಯತೆ ನೀಡುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಬಸವರಾಜ ಮದ್ರಿಕಿ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ ತೇಗಲತಿಪ್ಪಿ ಸ್ವಾಗತಿಸಿದರು. ಗುಲ್ಬರ್ಗ ಆವೃತ್ತಿಯ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ಉದಯಶಂಕರಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಪಾಟೀಲ ವಂದಿಸಿದರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಸಮಾಜವಾದಿ ರಾಜಕಾರಣಿ ಎಂ.ಪಿ. ಪ್ರಕಾಶ ನಿಧನಕ್ಕೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry