ಮಂಗಳವಾರ, ಏಪ್ರಿಲ್ 20, 2021
32 °C

`ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್' ಶೀಘ್ರ

ಪ್ರಜಾವಾಣಿ ವಾರ್ತೆ/ ನಾಗರಾಜ ರಾ. ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ಬೈಕ್ ಸೇರಿದಂತೆ ಯಾವುದೇ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳುವುದು ಇನ್ನು ಸುಲಭದ ಮಾತಲ್ಲ. ಗುಲ್ಬರ್ಗದಲ್ಲಿ ಅತ್ಯಾಧುನಿಕ ವಾಹನಚಾಲನಾ ಪರೀಕ್ಷಾ ಪಥ (ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್) ಶೀಘ್ರದಲ್ಲೆ ನಿರ್ಮಾಣವಾಗಲಿದೆ. ಇನ್ಮುಂದೆ ಪರೀಕ್ಷಾರ್ಥ ವಾಹನ ಚಾಲನೆ ಮಾಡುವವರ ಮೇಲೆ ಕಂಪ್ಯೂಟರ್ ನಿಗಾ ವಹಿಸಲಿದೆ.ರಾಜ್ಯದಲ್ಲೆ ಪ್ರಪ್ರಥಮ ಹೈಟೆಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಬೆಂಗಳೂರಿನ ಮಲ್ಲತಹಳ್ಳಿಯಲ್ಲಿ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಇದೀಗ ಗುಲ್ಬರ್ಗ ನಗರಕ್ಕೆ ಈ ಅತ್ಯಾಧುನಿಕ ಸೌಲಭ್ಯ ವಿಸ್ತರಿಸಲು ರೂ. 4.15 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕೂಡಾ ಆಹ್ವಾನಿಸಲಾಗಿದೆ. ಯೋಜನೆ ಆರಂಭಗೊಂಡ ಮೊದಲವರ್ಷ ಮೂರು ಕೋಟಿ ವೆಚ್ಚ ಮಾಡುವುದಕ್ಕೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಲಾಗಿದೆ.ಬೆಂಗಳೂರಿನಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಲಘು ವಾಹನ ಹಾಗೂ ಬೈಕ್ ಚಾಲನಾ ಪಥಗಳನ್ನು ಮಾತ್ರ ಕಂಪ್ಯೂಟರೀಕರಣಗೊಳಿಸಲಾಗಿದೆ. ಆದರೆ ಗುಲ್ಬರ್ಗದಲ್ಲಿ ಮೂರುವರೆ ಎಕರೆ ಜಾಗದಲ್ಲಿ ಲಘುವಾಹನ, ಭಾರಿವಾಹನ ಹಾಗೂ ಬೈಕ್ ಪಥಗಳನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲು ಯೋಜನೆ ಸಿದ್ಧವಾಗಿದೆ. ಹೈಟೆಕ್ ಡ್ರೈವಿಂಗ್ ಟ್ರ್ಯಾಕ್‌ಗೆ ಸೆನ್ಸಾರ್‌ಗಳನ್ನು ಅಳವಡಿಸಲು ಗುಜರಾತ್ ರಾಜ್ಯದ `ಸಾಲ್ಟ್ ವಾಟರ್' ಎನ್ನುವ ಕಂಪೆನಿಗೆ ಮುಂದೆ ಬಂದಿದ್ದು, ಕಾಮಗಾರಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಾಮಗಾರಿ ವಿಭಾಗವು ವಹಿಸಿಕೊಂಡಿದೆ.`ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಎಲ್ಲ ರೀತಿಯ ನೀಲನಕ್ಷೆ ಸಿದ್ಧಪಡಿಸಿಕೊಂಡು ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಕಾಮಗಾರಿ ಕೈಗೊಳ್ಳುವುದಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಟ್ರ್ಯಾಕ್ ಅಭಿವೃದ್ಧಿ ಕಾರ್ಯ ಆರಂಭಗೊಳ್ಳಲಿದೆ. ಯೋಜನೆ ಆರಂಭಿಸಿದ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು' ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ'ಗೆ ವಿವರಿಸಿದರು.`ಬೆಂಗಳೂರಿನಲ್ಲಿ ಈ ಯೋಜನೆ ಯಶಸ್ವಿಯಾದ ನಂತರ ಧಾರವಾಡ, ಮೈಸೂರು ಹಾಗೂ ಗುಲ್ಬರ್ಗದಲ್ಲಿ ಹೈಟೆಕ್ ಡ್ರೈವಿಂಗ್ ಟ್ರ್ಯಾಕ್ ಯೋಜನೆ ಜಾರಿಯಾಗುತ್ತಿದೆ. ಗುಲ್ಬರ್ಗ ವಿಭಾಗದಲ್ಲಿ ಈಗಾಗಲೇ ಹುಮನಾಬಾದ್ ಸಾರಿಗೆ ಸಂಸ್ಥೆ ಅಡಿಯಲ್ಲಿ ಬಸ್ ಚಾಲಕರಿಗಾಗಿ ಮಾತ್ರ ಸೆನ್ಸಾರ್ ಒಳಗೊಂಡ ಸಂಪೂರ್ಣ ಕಂಪ್ಯೂಟರೀಕರಣ ಮಾಡಲಾದ ಟ್ರ್ಯಾಕ್ ಅಭಿವೃದ್ಧಿಗೊಳಿಸಲಾಗಿದೆ. ಇದರಿಂದಾಗಿ ಪಕ್ಕಾ ಚಾಲನೆ ತರಬೇತಿ ಪಡೆದುಕೊಂಡು ಚಾಲಕರನ್ನಷ್ಟೆ ಆಯ್ಕೆ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ನಗರದೊಳಗೆ ಮತ್ತು ಹೊರವಲಯದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಚಾಲಕರು ತುಂಬಾ ಜಾಗರೂಕತೆಯಿಂದ ವಾಹನ ಓಡಿಸುವ ಅಗತ್ಯವನ್ನು ಮನಗಂಡು, ಚಾಲನಾ ಪರವಾನಗಿ ನೀಡುವುದಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಲಾಗುತ್ತಿದೆ' ಎಂದರು.ಗುಲ್ಬರ್ಗದ ಕುಸನೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ರಿಂಗ್‌ರಸ್ತೆ ಹತ್ತಿರ ಇರುವ ಟ್ರ್ಯಾಕ್ ಇನ್ನು ಮುಂದೆ ಸಂಪೂರ್ಣ ಹಸಿರು ಉದ್ಯಾನದಿಂದ ಕಂಗೊಳಿಸಲಿದೆ. ಮೂರುವರೆ ಎಕರೆ ಜಾಗದಲ್ಲಿ ವಾಹನಗಳ ನಿಲ್ದಾಣ, ಕಂಪ್ಯೂಟರ್ ಕೋಣೆಗಳು, ವಿವಿಧ ಸಿಗ್ನಲ್‌ಗಳು ಹಾಗೂ ಒಟ್ಟು ಎಂಟು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಬೈಕ್ ಚಾಲನಾ ಪರೀಕ್ಷೆಗೆ `ಎಟ್' ಇಂಗ್ಲಿಷ್ ಅಂಕಿ ಮಾದರಿ ಪಥ, ಲಘು ವಾಹನ ಚಾಲನಾ ಪರೀಕ್ಷೆಗೆ `ಎಸ್' ಇಂಗ್ಲಿಷ್ ಅಕ್ಷರ ಮಾದರಿ ಪಥ ಹಾಗೂ ಭಾರಿ ವಾಹನ ಚಾಲನೆಯ ಪಥಗಳನ್ನು ನಿರ್ಮಿಸಲಾಗುತ್ತದೆ. ಹೈಟೆಕ್ ಚಾಲನಾ ಪರೀಕ್ಷೆ ಹೇಗೆ:ಪಥದ ಉದ್ದ ಹಾಗೂ ಅಗಲಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಿಸಲಾಗುವುದು. ಪ್ರತಿಯೊಂದು ಪಥದ ಬದಿಗೆ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಚಾಲನಾ ಪರೀಕ್ಷೆ ವೇಳೆ ಚಾಲಕರು ವಾಹನದೊಂದಿಗೆ ಚಲಿಸುವಾಗ ಪಥದ ಬದಿಗೆ ಹೊಡೆದರೆ ಅಥವಾ ವಾಹನ ಸ್ಥಗಿತಗೊಳಿಸಿದರೆ ಪರವಾನಗಿ ನೀಡುವುದಕ್ಕೆ ಕಂಪ್ಯೂಟರ್ ವ್ಯವಸ್ಥೆ ನಿರಾಕರಿಸುತ್ತದೆ. ಪಥದಲ್ಲಿ ವಾಹನ ಚಲಿಸುವ ಪೂರ್ವದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಸಿಗ್ನಲ್ ಹಾಗೂ ಕಂಪ್ಯೂಟರ್ ಪಥದ ಕುರಿತು ಪಾಠ ಮಾಡಲಾಗುತ್ತದೆ.`ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಭಾವ ಹಾಗೂ ಅರ್ಧಮರ್ಧ ಚಾಲನಾ ತರಬೇತಿ ಪಡೆದು ಚಾಲನಾ ಪರವಾನಗಿ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಇನ್ನು ಮುಂದೆ ಇದ್ಯಾವುದಕ್ಕೂ ಅವಕಾಶವಾಗದಿರುವುದು ಒಳ್ಳೆಯ ಬೆಳವಣಿಗೆ. ರಸ್ತೆ ಅಪಘಾತಗಳನ್ನು ಕಡಿಮೆಯಾಗುವುದಕ್ಕೆ ವಾಹನ ಸವಾರರು ಸಾಕಷ್ಟು ತರಬೇತಿ ಹೊಂದಿದರೆ ಮಾತ್ರ ಪರವಾನಗಿ ಪಡೆದುಕೊಳ್ಳುವುದಕ್ಕೆ ಕಂಪ್ಯೂಟರ್ ಸಾಫ್ಟ್‌ವೇರ್ ಅನುಮತಿ ನೀಡುತ್ತದೆ.ಪಥದಲ್ಲಿನ ಪ್ರತಿಯೊಂದು ಚಟುವಟಿಕೆಗಳ ಮೇಲೆ ಸಿಸಿಟಿವಿ ನಿಗಾ ಇರುವುದರಿಂದ ತಪ್ಪುಗಳು ಘಟಿಸುವುದಿಲ್ಲ' ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಅವಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.