ಹೈಟೆಕ್ ತಾಳ...ಟೆಕ್ಕಿ ಮೇಳ

7

ಹೈಟೆಕ್ ತಾಳ...ಟೆಕ್ಕಿ ಮೇಳ

Published:
Updated:
ಹೈಟೆಕ್ ತಾಳ...ಟೆಕ್ಕಿ ಮೇಳ

ತೋಳಲ್ಲಿ ತೂಗು ಹಾಕುವ ಚೆಂಡೆ ಮೇಲೆ ತಾಳಕ್ಕೆ ತಕ್ಕಂತೆ ಕೋಲಿನಿಂದ ಬಡಿಯುವುದು ಕಂಪ್ಯೂಟರ್ ಮುಂದೆ ಮೌಸ್ ಕ್ಲಿಕ್ಕಿಸಿದಷ್ಟು ಸುಲಭವಲ್ಲ ಎಂದರಿತೇ ಈ ಯುವಕರು ಚೆಂಡೆ ಕಲಿಯಲು ಮುಂದಾದರು. ಮಹಾನಗರಿಯ ಉದ್ಯೋಗದ ಜಂಜಾಟಗಳನ್ನೆಲ್ಲ ಬದಿಗಿಟ್ಟು ವಾರಾಂತ್ಯದ ಸಮಯವನ್ನು ತಮ್ಮಿಷ್ಟದ ಚೆಂಡೆ ಕಲಿಯಲೆಂದೇ ಮೀಸಲಿಟ್ಟರು. ಪಟ್ಟುಹಿಡಿದು ಚೆಂಡೆ ಕಲಿತರು. ಕೊನೆಗೆ ತಮ್ಮದೇ ಚೆಂಡೆ ಮೇಳ ತಂಡ ಕಟ್ಟಿಕೊಂಡರು. ಇದೀಗ ಈ ಚೆಂಡೆಯ ಧ್ವನಿ ಅಲ್ಲಲ್ಲಿ ಕೇಳಿಬರುತ್ತಿದೆ.ಇದು ಬೆಂಗಳೂರೆಂಬ ಹೈಟೆಕ್ ನಗರಿಯಲ್ಲಿ ಹೈಟೆಕ್ ಉದ್ಯೋಗಿಗಳು ಸೇರಿ ಕಟ್ಟಿಕೊಂಡ `ಮಂಜುತರ~ ಎಂಬ ಚೆಂಡೆ ಮೇಳ ತಂಡದ ಹುಟ್ಟಿನ ಹಿಂದಿನ ಕಥೆ.ಪಂಜಾರಿ ಮೇಳವೆಂಬ ಈ ಚೆಂಡೆ ಮೇಳ ಕೇರಳದ ಕಲೆ. ದೇವಸ್ಥಾನಕ್ಕೆ ಸಂಬಂಧಿಸಿದ ಕಲೆಯಾದರೂ ಅದು ಅಲ್ಲಿನ ಸಂಸ್ಕೃತಿಯ ಅವಿಭಾಜ್ಯ ಘಟಕ. ಪಂಜಾರಿ ಮೇಳವಿಲ್ಲದ ಉತ್ಸವಗಳೇ ಇಲ್ಲ, ಪೂಜಾಕಾರ್ಯಗಳೇ ಇಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲ.

ಕೇರಳದ ಸಾಂಸ್ಕೃತಿಕ ಕಲೆಯಾದರೂ ಕೂಡ ಈ ಯುವಕರು ತಾವಿರುವ ಬೆಂಗಳೂರಲ್ಲೇ ಅದರ ತಂಡವೊಂದನ್ನು ಕಟ್ಟಿಕೊಂಡು ನಗರದ ಜನರಿಗೆ ಅದರ ಸವಿಯನ್ನು ಉಣಿಸುತ್ತಿದ್ದಾರೆ. ಜೊತೆಗೆ ನಿಜವಾದ ಪಂಜಾರಿ ಮೇಳದ ತಾಳ ಕೇಳಬೇಕೆಂದರೆ ಕೇರಳಕ್ಕೇ ಹೋಗಬೇಕು ಎನ್ನುವ ಮಾತನ್ನೂ ಸುಳ್ಳಾಗಿಸಿದ್ದಾರೆ.ಈ ತಂಡದಲ್ಲಿರುವ ಒಬ್ಬೊಬ್ಬರದ್ದು ಒಂದೊಂದು ಕಥೆ. ರಜಾ ದಿನಗಳಲ್ಲಿ ಕೇರಳಕ್ಕೆ ತೆರಳುತ್ತಿದ್ದ ನಗರದಲ್ಲೇ ಹುಟ್ಟಿ ಬೆಳೆದ ಡೆಲ್ ಉದ್ಯೋಗಿ ಮನೋಜ್ ರಾಧಾಕೃಷ್ಣನ್, ತ್ರಿಶ್ಶೂರ್ ಪೂರಂನಲ್ಲಿ, ಅಲ್ಲಿನ ದೇವಸ್ಥಾನಗಳಲ್ಲಿ, ಉತ್ಸವಗಳಲ್ಲಿ  ಚೆಂಡೆ ಮೇಳವನ್ನು ಬೆರಗುಗಣ್ಣುಗಳಿಂದ ವೀಕ್ಷಿಸುತ್ತಿದ್ದರು. ಏಳೆಂಟು ಮಂದಿಯ ಗುಂಪು ಚೆಂಡೆಯ ಮೇಲೆ ತಾಳಕ್ಕೆ ತಕ್ಕತೆ ಕೋಲಿನಿಂದ ಬಡಿಯುವಾಗ ಹೊಮ್ಮುವ ಶಬ್ದ ಅವರಲ್ಲಿ ಚೆಂಡೆ ಕಲಿಯುವ ಆಸೆ ಮೂಡಿಸಿತ್ತು. ಆದರೆ ಇದು ಕಷ್ಟದ ಕೆಲಸ ಎಂಬುದೂ ಆಗಲೇ ಮನದಟ್ಟಾಗಿತ್ತು. ಆದರೂ ಉತ್ಸಾಹ ಮಾತ್ರ ಬತ್ತಿರಲಿಲ್ಲ. ರಜೆ ಮುಗಿಸಿ ಮಹಾನಗರಿಗೆ ಹಿಂತಿರುಗಿದಾಗಲೂ ಮನಸ್ಸು ಚೆಂಡೆ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಚೆಂಡೆ ಕಲಿಯಲೆಂದೇ ಕೇರಳಕ್ಕೆ ಹೋಗುವುದು ಅಸಾಧ್ಯದ ಮಾತು. ಆದರೆ ಅದನ್ನೇ ಇಲ್ಲಿ ಕಲಿಯಲು ಸಾಧ್ಯವಾದರೆ... ಸತತ ಹುಡುಕಾಟದ ಬಳಿಕ ಎಚ್‌ಎಎಲ್ ಅಯ್ಯಪ್ಪ ದೇವಸ್ಥಾನದಲ್ಲಿ ಗುರು ರಾಜೇಶ್ ಮಾರಾರ್ ಪರಿಚಯವಾದದ್ದೇ ತಮ್ಮ ಆಸೆಯನ್ನು ತೋಡಿಕೊಂಡರು. ಮಾರಾರ್ ಒಪ್ಪಿದರೂ ಇನ್ನೂ ಒಂದಷ್ಟು ಜನ ಶಿಷ್ಯರಾಗಿ ಸಿಕ್ಕಿದರೆ ಚೆನ್ನಾಗಿರುತ್ತಿತ್ತು ಎಂದಾಗ ಸಮಾನ ಮನಸ್ಕರಿಗಾಗಿ ಹುಡುಕಾಟ ಆರಂಭವಾಯಿತು. ಅನೇಕರು ಜೊತೆ ಸೇರಿದರು. ಕಲಿಕೆ ಆರಂಭವಾಯಿತು.`ಚೆಂಡೆ ಮೇಳದ ಕಲಿಕೆ ಅಷ್ಟೇನೂ ಸುಲಭವಲ್ಲ. ಆರಂಭದಲ್ಲಿ ಬಂಡೆಕಲ್ಲಿನ ಮೇಲೆ ಹುಣಸೆ ಮರದಿಂದ ತಯಾರಿಸಿದ ದಪ್ಪನೆಯ ಕೋಲಿನಿಂದ ಹೊಡೆಯಲು ಕಲಿಸಲಾಗುತ್ತಿತ್ತು. ಇದನ್ನು ನೋಡಿ ಅರ್ಧಕ್ಕರ್ಧ ಮಂದಿ ಬಿಟ್ಟು ಹೋದರು, ನಿಜವಾದ ತುಡಿತವಿದ್ದ ಎಂಟು ಮಂದಿ ಮಾತ್ರ ಕಲಿಕೆ ಮುಂದುವರಿಸಿದರು. ಹಲವು ತಿಂಗಳುಗಳ ಬಳಿಕ ಚೆಂಡೆ ಮೇಲೆ ಬಡಿಯಲು ಕಲಿಸಲಾಯಿತು. ಒಂದು ವರ್ಷದ ಸಂರ್ಪೂಣ ತರಬೇತಿಯ ಬಳಿಕ ಎಂಟು ಮಂದಿಯ ತಂಡ ಯಶಸ್ವಿಯಾಗಿ ಮೊದಲ ಪ್ರದರ್ಶನ ನೀಡಿತು. ಬಳಿಕ ನಮ್ಮಿಂದ ಸ್ಫೂರ್ತಿ ಪಡೆದು 19 ಮಂದಿಯ ಎರಡನೇ ತಂಡ ಕಲಿಕೆ ಮುಗಿಸಿ ಹೊರಬಂದಾಗ ತಮ್ಮದೇ ಸ್ವಂತ ತಂಡ ಏಕೆ ಕಟ್ಟಿಕೊಳ್ಳಬಾರದು ಎಂದನ್ನಿಸದ್ದೇ `ಮಂಜುತರ~ ಹುಟ್ಟಲು ಕಾರಣವಾಯಿತು~ ಎನ್ನುತ್ತಾರೆ ಮನೋಜ್ ರಾಧಾಕೃಷ್ಣನ್.ತಂಡದ ಇನ್ನೋರ್ವ ಸದಸ್ಯ ಜೆರಾಲ್ಡ್, ಶಾಲಾ ದಿನಗಳಲ್ಲಿ ನೆರವೇರದ ಆಸೆ ಈಗ ಕೈಗೂಡಿದ ಖುಷಿಯಲ್ಲಿದ್ದಾರೆ. ತಂಡದ ಹಲವರಿಗೂ ಈಗ ಅದೇ ಖುಷಿ. ಅದಕ್ಕೆಂದೇ ಹನ್ನೆರಡು ಸಾವಿರ ರೂಪಾಯಿ ತೆತ್ತು ಚೆಂಡೆ ಖರೀದಿಸಿದರು. ಬಡಿಯುತ್ತಾ ಹೋದಂತೆ ಚೆಂಡೆಯ ಚರ್ಮವನ್ನು ಎಳೆದು ಸರಿಪಡಿಸಲೆಂದೇ ಕೇರಳದಿಂದ ಜನರನ್ನು ಕರೆತಂದರು. ಖರ್ಚು ಹೆಚ್ಚಾದರೂ ತುಡಿತ ಮಾತ್ರ ಕಡಿಮೆಯಾಗಲಿಲ್ಲ.ಇವರಲ್ಲಿ ಹಲವರು ಐಟಿ ಉದ್ಯೋಗಿಗಳು. ಜೊತೆಗೆ ಮಾರ್ಕೆಟಿಂಗ್ ಉದ್ಯೋಗಿಗಳು, ವ್ಯವಹಾರ ಮಾಡುವವರೂ ಈ ತಂಡದಲ್ಲಿದ್ದಾರೆ. ಕಲಿಕೆಯಾಗಲಿ, ಕಾರ್ಯಕ್ರಮವಾಗಲಿ ಪ್ಯಾಂಟ್, ಶರ್ಟ್, ಟೈಗಳನ್ನು ಬದಿಗಿಟ್ಟು ಕೇರಳದ ಸಾಂಪ್ರದಾಯಿಕ ಜರಿ ಅಂಚಿನ ಮುಂಡು ಧರಿಸಿ ಚೆಂಡೆ ತೋಳಿಗೇರಿಸಿಕೊಂಡರೆ ಅದರ ತಾಳದಲ್ಲಿ ತಲ್ಲೆನರಾಗುವ ಈ ಯುವಕರಿಗೆ ಈಗ ಬಿಡುವಿಲ್ಲದಷ್ಟು ಕಾರ್ಯಕ್ರಮಗಳು. ದೇವಸ್ಥಾನಗಳು ಮಾತ್ರವಲ್ಲದೆ ಮಹಾನಗರಿಯ ಅನೇಕ ಕಾರ್ಯಕ್ರಮಗಳಿಗೆ ಈ ತಂಡಕ್ಕೆ ಆಹ್ವಾನ ದೊರೆಯುತ್ತಿದೆ.

ಆರಂಭದಲ್ಲಿ ಎಚ್‌ಎಎಲ್ ಅಯ್ಯಪ್ಪ ದೇವಸ್ಥಾನದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು.

 

ಚೆಂಡೆಯ ಶಬ್ದದಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದುಬಂದದ್ದೇ ಕಾಡುಬೀಸನಹಳ್ಳಿಯಲ್ಲಿನ ವೇದಿಕೆಯಲ್ಲಿ ಇವರ ಅಭ್ಯಾಸ ಸಾಗುತ್ತಿದೆ. ಶನಿವಾರ ಮತ್ತು ಭಾನುವಾರಗಳಂದು ತಮ್ಮ ಚೆಂಡೆಗಳನ್ನು ಹೊತ್ತುಕೊಂಡು ಅಲ್ಲಿಗೆ ತೆರಳಿ ಗಂಟೆಗಟ್ಟಲೆ ಅಭ್ಯಾಸ ಮಾಡುವ ಈ ಯುವಕರಿಗೆ ದಣಿವೇ ಆಗದು.ಕಥಕ್ಕಳಿಯ ಆರಂಭದಲ್ಲಿ ಕೇಳಿಬರುವ ನಾಂದಿ ಹಾಡು `ಮಂಜುತರ..... ಕುಂಜುತರ...~ ಎಂಬ ಹಾಡಿನಿಂದ ಪ್ರೇರಣೆಗೊಂಡು ತಮ್ಮ ತಂಡಕ್ಕೆ `ಮಂಜುತರ~ ಎಂಬ ಹೆಸರನ್ನಿಡಲಾಗಿದೆ ಎನ್ನುತ್ತಾರೆ ಮನೋಜ್.ಪಂಚಾರಿ ಮೇಳ ಕೇರಳೀಯರಿಗೆ ಚಿರಪರಿಚಿತವಾದರೂ ಕನ್ನಡಿಗರೂ ಈ ಮೇಳಕ್ಕೆ ಆಕರ್ಷಿತರಾಗುತ್ತಿದ್ದಾರೆ. ಚೆಂಡೆ ಕೇಳಿ ಆಕರ್ಷಿತರಾಗಿ ಓರ್ವ ಕನ್ನಡಿಗರು  ಹಾಗೂ ಆಂಧ್ರಪ್ರದೇಶದ ಇಬ್ಬರು ಮೂರನೇ ತಂಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿನ ದೇವಸ್ಥಾನಗಳ ಉತ್ಸವಕ್ಕೂ ನಮಗೆ ಆಹ್ವಾನ ದೊರೆಯುತ್ತಿದೆ. ಆದರೆ ಯಾವ ಸಂದರ್ಭದಲ್ಲಿ ಅದನ್ನು ಬಳಸಬೇಕೆನ್ನುವುದು ಅವರಿಗೆ ಇನ್ನೂ ಅರಿವಿಲ್ಲ. ಹಾಗಾಗಿ ಅದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಎನ್ನುತ್ತಾರೆ ಅವರು.`ಇದು ದೇವಸ್ಥಾನಕ್ಕೆ ಸಂಬಂಧಪಟ್ಟ ಕಲೆಯಾದ್ದರಿಂದ ಅದಕ್ಕೊಂದು ದೈವಿಕ ಭಾವವಿದೆ. ತಾಳಕ್ಕೆ ಕ್ರಮವಾಗಿ ಬಡಿಯುವುದು ಪಂಚಾರಿ ಮೇಳದ ವಿಶೇಷತೆ. ಅದಕ್ಕೆ ಅದರದ್ದೇ ಆದ ಕ್ರಮವಿದ್ದು ಹೊಸತನ ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಬಡಿಯುವ ಅವಧಿಯಲ್ಲಿ ವ್ಯತ್ಯಾಸ ತರಬಹುದಷ್ಟೆ~ ಎಂದು ಪಂಚಾರಿ ಮೇಳದ ಕುರಿತು ಮನೋಜ್ ವಿವರಿಸುತ್ತಾರೆ.ಕೇವಲ ಚೆಂಡೆ ಮಾತ್ರವಲ್ಲ, ಚೆಂಡೆಯ ಜೊತೆಗೆ ಇಲತ್ತಾಳ ಮತ್ತು ಕೊಂಬು ವಾದ್ಯದ ದನಿಯೂ ಸೇರಿದರೆ ಆ ತಾಳಮೇಳಕ್ಕೆ ಸರಿಸಾಟಿ ಬೇರೊಂದಿಲ್ಲ ಎನ್ನುವ ಈ ಯುವಕರು ಇದೀಗ ಚೆಂಡೆಯ ಹಾದಿಯಲ್ಲಿಯೇ ಅದನ್ನೂ ಕಲಿಯಲು ಮುಂದಾಗಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry