ಶನಿವಾರ, ಡಿಸೆಂಬರ್ 7, 2019
21 °C

ಹೈದರಾಬಾದ್‌ಗಾಗಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ಗಾಗಿ ಹೋರಾಟ

ಹೈದರಾಬಾದ್(ಪಿಟಿಐ): ತೆಲಂಗಾಣ ವಿವಾದ ಶನಿವಾರ ಮತ್ತಷ್ಟು ಭುಗಿಲೆದ್ದಿದ್ದು, ರಾಯಲಸೀಮಾ ಭಾಗದ ಉದ್ಯೋಗಿಗಳು ಮತ್ತು ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ನಡುವೆ ಸಂಘರ್ಷಕ್ಕೆ ಕಾರಣವಾಯಿತು.ಆಂಧ್ರಪ್ರದೇಶ ಕಿರಿಯ ನೌಕರರ ಸಂಘ ನಡೆಸುತ್ತಿದ್ದ ರಾಲಿಯ ಜನತೆ ಹಾಗೂ ಸ್ಥಳದಲ್ಲಿದ್ದ ಪೊಲೀಸರ ಮೇಲೆ ತೆಲಂಗಾಣ ಪರ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಈ ಎಲ್ಲ ಬೆಳವಣಿಗೆ ಹಾಗೂ ಜೆಎಸಿ ಕರೆ ನೀಡಿದ್ದ 24 ಗಂಟೆಗಳ ಬಂದ್‌ನಿಂದಾಗಿ ಹೈದರಾಬಾದ್‌ನಲ್ಲಿ ಜನಜೀವನಕ್ಕೆ ತೊಂದರೆಯಾಯಿತು.`ಆಂಧ್ರಪ್ರದೇಶ ಉಳಿಸಿ' ರಾಲಿ ನಡೆಸುತ್ತಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣ ಸಮೀಪದ ನಿಜಾಂ ಕಾಲೇಜು ಹಾಸ್ಟೆಲ್ ಕಟ್ಟಡದಲ್ಲಿ ತೆಲಂಗಾಣ ಪರ ಪ್ರತಿಭಟನಾಕಾರರು, ವಿದ್ಯಾರ್ಥಿಗಳು ರಹಸ್ಯವಾಗಿ ಸೇರಿದ್ದರು. ಕ್ರೀಡಾಂಗಣಕ್ಕೆ ತೆರಳುತ್ತಿದ್ದ  ಆಂಧ್ರ- ರಾಯಲಸೀಮಾ ಭಾಗದ ಉದ್ಯೋಗಿಗಳ ಮೇಲೆ ಕಲ್ಲು ತೂರಾಟ ನಡೆಸಿದರು.ಆಕ್ರೋಶಗೊಂಡಿದ್ದ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಹಾಸ್ಟೆಲ್ ಕಟ್ಟಡಕ್ಕೆ ಧಾವಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಯಿತು. ಈ ವೇಳೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು ಹಾಸ್ಟೆಲ್ ಕಟ್ಟಡದಿಂದ ವಿದ್ಯಾರ್ಥಿಗಳು ಬರದಂತೆ ತಡೆದರು. ಅಲ್ಲದೆ ಕಲ್ಲು ತೂರಾಟ ನಡೆಸಿದವರ ಮೇಲೆ ಅಶ್ರುವಾಯು ಸಿಡಿಸಿದರು.ನಗರದಲ್ಲಿ ನಡೆದ ಸಂಘರ್ಷದಿಂದ ಆಕ್ರೋಶಗೊಂಡ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕರು ವಿಧಾನಸಭೆಗೆ ತೆರಳಿ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ರಚನೆಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.ವಿಧಾನಸಭೆಯಲ್ಲಿ ಗದ್ದಲ: ತೆಲಂಗಾಣ ವಿವಾದ ಸಂಬಂಧ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಟಿಆರ್‌ಎಸ್ ಶಾಸಕರನ್ನು ಪೊಲೀಸರು ತಡೆದರು. ಸೀಮಾಂಧ್ರ ಭಾಗದ ನೌಕರರು ಸಭೆ ನಡೆಸಲು ಅವಕಾಶ ನೀಡುವ ಸರ್ಕಾರ ತೆಲಂಗಾಣ ವಿರೋಧಿ ನಿಲುವು ಪ್ರದರ್ಶಿಸುತ್ತಿದೆ ಎಂದು ಶಾಸಕರು ದೂರಿದರು.ಹರೀಶ್ ರಾವ್, ಪಿ.ಶ್ರೀನಿವಾಸ ರೆಡ್ಡಿ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಟಿಆರ್‌ಎಸ್ ಶಾಸಕರು ವಿಧಾನಸಭೆ ಆವರಣಕ್ಕೆ ಗಾಲಿಕುರ್ಚಿಯಲ್ಲಿ ಪ್ರವೇಶಿಸಲು  ಯತ್ನಿಸಿದರು. ಇವರನ್ನು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ತಡೆದರು.`ಇದು ನಮ್ಮ ಹಕ್ಕು ಮೊಟಕುಗೊಳಿಸುವ ಕ್ರಮ' ಎಂದು ಟಿಆರ್‌ಎಸ್ ಮುಖಂಡ ಇ.ರಾಜೇಂದರ್ ಹೇಳಿದರು.ಈ ನಡುವೆ ಮಾತನಾಡಿದ ತೆಲಂಗಾಣ ಗೆಜೆಟೆಡ್  ಅಧಿಕಾರಿಗಳ ಸಂಘದ ಮುಖಂಡ ದೇವಿ ಪ್ರಸಾದ್, ವಿಶಾಖಪಟ್ಟಣಂ ಇಲ್ಲವೇ ಕರಾವಳಿ ಆಂಧ್ರದ ವಿಜಯವಾಡದಲ್ಲಿ ರಾಲಿ ನಡೆಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ, ತೆಲಂಗಾಣ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತೆಲಂಗಾಣ ಭಾಗದ ನಾಯಕರು ಆರೋಪಿಸಿದ್ದಾರೆ.ಬಂದ್‌ನಿಂದಾಗಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಪೊಲೀಸರ ನೆರವು ಕೇಳಿದ್ದಾರೆ.ಹೈದರಾಬಾದ್‌ನಲ್ಲಿ ಕೇವಲ ಮೂರು ಮಾರ್ಗಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ರೈಲುಗಳ ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ದಕ್ಷಿಣ ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಾಂಬಶಿವ ರಾವ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)