ಗುರುವಾರ , ಮೇ 26, 2022
31 °C

ಹೈದರಾಬಾದ್ ಪ್ರಿಶಾ ಕಂಪೆನಿಯಿಂದ ಮೋಸ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ಸಮೀಪದ ಗುದ್ನೆಪ್ಪನಮಠದ ಸಿದ್ಲಿಂಗಯ್ಯ ವೀರಯ್ಯ ವಿರುಪಣ್ಣವರ ಅವರು ಹೈದರಾಬಾದ್ ಮೂಲದ ಪ್ರಿಶಾ ಪಿಯರಲ್ ಕಂಪೆನಿಯಿಂದ ಮೋಸಕ್ಕೆ ಒಳಗಾದ ಸಂಗತಿ ಈಚೆಗೆ ಬೆಳಕಿಗೆ ಬಂದಿದೆ.ವಿವಿಧ ಕಂಪೆನಿಗಳು ತಯಾರಿಸಲಾದ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲು ಮೊಬೈಲ್ ಮೂಲಕ ಕರೆ ಮಾಡುವುದು ಹಾಗೂ ಮೆಸೇಜ್ ಮಾಡಿ ವ್ಯಾಪಾರ ವಹಿವಾಟುಗಳನ್ನು ವೃದ್ಧಿಸಿಕೊಳ್ಳುವುದರಲ್ಲಿ ನಿರತವಾಗಿವೆ.ಇಂತಹದೇ ಒಂದು ಕಂಪೆನಿಯಿಂದ ಗುದ್ನೆಪ್ಪನಮಠ ಗ್ರಾಮದ ಸಿದ್ಲಿಂಗಯ್ಯ ಅವರಿಗೆ ಸುಮಾರು ಹದಿನೈದು ದಿನಗಳ ಹಿಂದೆ ಒಂದು ಕರೆ ಬಂದಿದೆ. ಕನ್ನಡದಲ್ಲಿಯೇ ಅವರ ಪೂರ್ಣ ವಿವರವನ್ನು ಪಡೆದ ವ್ಯಕ್ತಿಯೊಬ್ಬರು `ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದೆ, ಸಾವಿರಾರು ರೂಪಾಯಿಗಳ ಬೆಲೆ ಬಾಳುವ ವಸ್ತುವನ್ನು ನಿಮಗೆ 300 ರೂಪಾಯಿಗಳಲ್ಲಿ ಸಿಗುತ್ತದೆ. ಪೋಸ್ಟ್ ಮೂಲಕ ನಿಮಗೆ ಕಳಿಸುತ್ತೇವೆ' ಎಂದು ಹೇಳಿದ್ದರು.ಮೊಬೈಲ್‌ನಲ್ಲಿ ಹೇಳಿದ್ದಂತೆ ಕುಕನೂರು ಅಂಚೆ ಕಚೇರಿಗೆ ಹೈದರಾಬಾದ್ ಮೂಲದ ಪ್ರಿಶಾ ಗ್ರುಪ್, ಪ್ರಿಶಾ ಪಿಯರಲ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಪೋಸ್ಟ್ ಬಾಕ್ಸ್ ಸಂಖ್ಯೆ 1413, ಹುಮಾಯಾನಗರ ಪೋಸ್ಟ್ ನಿಂದ ವಿ.ಪಿ.ಎಲ್ ರೂ. 500 ಒಂದು ಕವರ್ ಬಂದಿದೆ. ಕುತೂಹಲಗೊಂಡ ಸಿದ್ಲಿಂಗಯ್ಯ ಅವರು ರೂ. 25 ಸೇವಾ ಶುಲ್ಕ ಸಹಿತವಾಗಿ ರೂ. 525/- ಹಣ ಪಾವತಿಸಿ ಪಡೆದಿದ್ದಾರೆ. ಆದರೆ ಅದನ್ನು ಒಡೆದು ನೋಡಿದಾಗ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಕೇವಲ ಸುಮಾರು ಇಪ್ಪತ್ತು ರೂಪಾಯಿ ಬೆಲೆಯ ಸಣ್ಣ ಮುತ್ತಿನ ಸರ ಹಾಗೂ ಕಿವಿಗೆ ಹಾಕಿಕೊಳ್ಳುವ ಎರಡು ಮುತ್ತುಗಳು ಇದ್ದುದು ಬಂದಿದೆ.`ಹೀಗೆ ಮೋಸ ಮಾಡ್ತಾರಂತ ಅಂತಾ ಗೊತ್ತಿರಲಿಲ್ಲ, ಎರಡ್ಮೂರು ದಿನ ಕೂಲಿ ನೀರಾಗ ಹಾಕಿದಂಗ ಆತು' ಎಂದು ಮುತ್ತಿನ ಕಂಪೆಯಿನಿಂದ ಟೋಪಿ ಹಾಕಿಸಿಕೊಂಡ ಸಿದ್ಲಿಂಗಯ್ಯ `ಪ್ರಜಾವಾಣಿ' ಗೆ ನೋವು ಹೇಳಿಕೊಂಡು, ಜನಸಾಮಾನ್ಯರಿಗೆ ಮೋಸ ಮಾಡುತ್ತಿರುವ ಇಂತಹ ಕಂಪೆನಿ ಹಾಗೂ ಸಹಕರಿಸಿದ ಮೊಬೈಲ್ ಕಂಪೆನಿಗಳ ಮೇಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.