ಹೈನುಗಾರಿಕೆ ಯಶೋಗಾಥೆ

7

ಹೈನುಗಾರಿಕೆ ಯಶೋಗಾಥೆ

Published:
Updated:

ಮಾಗಡಿ ತಾಲ್ಲೂಕಿನ ಕಲ್ಯ ಗ್ರಾಮದ ಮಲ್ಲಿಕಾರ್ಜುನ ಆರಾಧ್ಯ ಎಂಬ ರೈತರು ಐವತ್ತು ಸೀಮೆ ಹಸುಗಳನ್ನು ಸಾಕಿ  ವ್ಯವಸ್ಥಿತ ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ.ಆರಾಧ್ಯರಿಗೆ ಈಗ 58 ವರ್ಷ. ಅವರು ಮೂಲತಃ ರೈತರು. ಅವರಿಗೆ 10 ಎಕರೆ ಜಮೀನಿದೆ. ಭತ್ತ, ರಾಗಿ, ತರಕಾರಿ ಬೆಳೆಯುತ್ತಿದ್ದರು. ಬೇಸಾಯದಿಂದ ಹೆಚ್ಚು ಆದಾಯ ಇಲ್ಲ ಎನ್ನುವುದು ಖಚಿತವಾದ ನಂತರ ಅವರು ಹಸುಗಳನ್ನು ಸಾಕಲು ಮುಂದಾದರು.

 

ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ ಎನ್ನುವುದನ್ನು ಗಮನಿಸಿ ಬೇಸಾಯದ ಜತೆಗೆ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆಗೆ ಕೈಹಾಕಿದರು.

ಅವರು ಹಂತ ಹಂತವಾಗಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿದರು. ಪ್ರಸ್ತುತ ಅವರ ಡೇರಿಯಲ್ಲಿ ಎಚ್‌ಎಫ್ ತಳಿಯ 45 ಹಾಗೂ ಜರ್ಸಿ ತಳಿಯ 5 ಹಸು ಮತ್ತು ಕರುಗಳಿವೆ.ಆರಾಧ್ಯರದು ವ್ಯವಸ್ಥಿತ ಹೈನುಗಾರಿಕೆ. ಪ್ರತಿಯೊಂದು ಹಸುವಿಗೆ ನಂಬರ್ ನೀಡಿದ್ದಾರೆ. ಅವುಗಳ ಬಗ್ಗೆ ಎಲ್ಲ ಮಾಹಿತಿಗಳನ್ನೂ ಬರೆದು ಇಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಗರ್ಭಧಾರಣೆ ಮಾಡಿಸಿದ ದಿನಾಂಕ, ಲಸಿಕೆ,ಕಾಯಿಲೆಗೆ ನೀಡಿದ ಔಷಧಿ ವಿವರಗಳು, ಕರು ಹುಟ್ಟಿದ ದಿನ, ಅವುಗಳ ತೂಕ, ಹಸುಗಳು ಕೊಡುವ ಹಾಲಿನ ಪ್ರಮಾಣ ಇತ್ಯಾದಿ.ಹಾಲು ಕಡಿಮೆಯಾದರೆ ಅದಕ್ಕೆ ಏನು ಕಾರಣ ಎಂಬುದನ್ನು ಪರಿಶೀಲಿಸುತ್ತಾರೆ. ಹಸುಗಳ ವಾಸಕ್ಕೆ ಸಾಕಷ್ಟು ಗಾಳಿ, ಬೆಳಕು ಇರುವ ಎರಡು ಕೊಟ್ಟಿಗೆಗಳನ್ನು ನಿರ್ಮಿಸಿದ್ದಾರೆ. ದಿನಕ್ಕೆ ಎರಡುಸಲ ಕೊಟ್ಟಿಗೆ ತೊಳೆದು ಶುಚಿಗೊಳಿಸುತ್ತಾರೆ. ಹಸುಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ.ಹಸುಗಳಿಗೆ ದಿನಕ್ಕೆ ಎರಡು ಸಲ ಇಂಡಿ, ಬೂಸಾ, ಖನಿಜಗಳ ಮಿಶ್ರಣ ಇತ್ಯಾದಿಗಳು ಸೇರಿ ತಲಾ 5 ಕೆ.ಜಿ.ಯಷ್ಟು ಮೇವು ಹಾಕುತ್ತಾರೆ. ಹಸುಗಳಿಗೆ ಒಣ ಹಾಗೂ ಹಸಿ ಹುಲ್ಲು ನೀಡುತ್ತಾರೆ. ಹಸುಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಇದೆ.ಹರಿಯುವ ನೀರು ಕುಡಿಸುವುದರಿಂದ ಹಸುಗಳಿಗೆ ಹಲವಾರು ರೋಗಗಳು ಬರುತ್ತವೆ ಎಂಬ ಅನುಭವದ ಹಿನ್ನೆಲಯಲ್ಲಿ ಶುದ್ದ ಮೇವು, ನೀರು ಪೂರೈಕೆಗೆ ಹೆಚ್ಚು ಗಮನ ನೀಡಿದ್ದಾರೆ.

 ಆರಾಧ್ಯರ ಡೇರಿಯಲ್ಲಿ ನಿತ್ಯ 300 ಲೀ ಹಾಲು ಉತ್ಪಾದನೆಯಾಗುತ್ತದೆ. ಅದರಲ್ಲಿ ದೊಡ್ಡ ಪ್ರಮಾಣದ ಹಾಲನ್ನು ಬೆಣ್ಣೆ ತಯಾರಿಸಲು ಬಳಸುತ್ತಾರೆ.

 

ಸ್ವಲ್ಪ ಪ್ರಮಾಣದ ಹಾಲನ್ನು ಲೀಟರ್‌ಗೆ 25 ರೂ ದರದಲ್ಲಿ ಅವರೇ ಮಾರಾಟ ಮಾಡುತ್ತಾರೆ. ಅವರ ಡೇರಿಯಲ್ಲಿ ಹುಟ್ಟಿದ ಕರುಗಳನ್ನು ಅವರು ಮಾರಾಟ ಮಾಡುವುದಿಲ್ಲ. ಅವನ್ನು ಬೆಳೆಸಿ ಹಸುಗಳ ಸಂಖ್ಯೆಯನ್ನು ವೃದ್ಧಿಸುವ ಯೋಚನೆ  ಅವರದು.ಹೈನುಗಾರಿಕೆಯಲ್ಲಿ ಶೇ. 40 ರಷ್ಟು ಲಾಭವಿದೆಯಂತೆ. ಅವರ ಡೇರಿಯಲ್ಲಿ ತಯಾರಿಸಿದ ಬೆಣ್ಣೆಗೆ ಭಾರಿ ಬೇಡಿಕೆ ಇದೆ.  ದೇವರ ಮೂರ್ತಿಗಳ ಅಲಂಕಾರಕ್ಕೆ ಆರಾಧ್ಯರ ಡೇರಿಯ ಬೆಣ್ಣೆಯನ್ನೇ ಖರೀದಿಸುವವರಿದ್ದಾರೆ.

 

ಅನೇಕರು ಮುಂಗಡವಾಗಿ ಹಣ ನೀಡಿ ಬೆಣ್ಣೆ ಖರೀದಿಸ್ತುತಾರೆ. ಒಂದು ಕೇಜಿ ಬೆಣ್ಣೆಗೆ 250 ರಿಂದ 270 ರೂ. ಮಾರಾಟ ಮಾಡುತ್ತಾರೆ. ಆರಾಧ್ಯರು  ಹಾಲನ್ನು ತಮ್ಮದೇ ಮಾರಾಟ ಕೇಂದ್ರದ ಮೂಲಕ 60 ಮಂದಿ ಗ್ರಾಹಕರಿಗೆ  ಮಾರಾಟ ಮಾಡುತ್ತಾರೆ.ತಮ್ಮದೇ ಆದ ಹಾಲು ಪ್ಯಾಕಿಂಗ್ ಘಟಕ, ಕೋವಾ, ಪನ್ನೀರ್ ತಯಾರಿಕೆ ಹಾಗೂ ಬೆಣ್ಣೆ ಮಾರಾಟ ಕೇಂದ್ರ ಆರಂಭಿಸುವ ಗುರಿ ಹೊಂದಿದ್ದಾರೆ. ಆರಾಧ್ಯರ ಮಗ ಶಿವಪ್ರಸಾದ್ ಬಿ.ಎಸ್‌ಸಿ. ಪದವೀಧರ.

 

ಗುಜರಾತಿನಲ್ಲಿ  ಉದ್ಯೋಗದಲ್ಲಿದ್ದರು. ತಂದೆ ಕೈಗೊಂಡಿರುವ ಹೈನುಗಾರಿಕೆಯ ಸೆಳೆತಕ್ಕೆ ಒಳಗಾಗಿ ಉದ್ಯೋಗ ಬಿಟ್ಟು ಮರಳಿ ಹಳ್ಳಿಗೆ ಬಂದು ನೆಲೆಸಿದ್ದಾರೆ. ಹೈನುಗಾರಿಕೆ, ಡೇರಿ ನಿರ್ವಹಣೆಯಲ್ಲಿ ಮತ್ತಷ್ಟು ತಾಂತ್ರಿಕತೆ ಅಳವಡಿಸಿಸುವ ತುಡಿತವನ್ನು ಹೊಂದಿದ್ದಾರೆ.

ಮಲ್ಲಿಕಾರ್ಜುನ ಆರಾಧ್ಯ ಅವರ ದೂರವಾಣಿ ಸಂಖ್ಯೆ: 97396 76809.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry