ಮಂಗಳವಾರ, ಏಪ್ರಿಲ್ 20, 2021
31 °C

ಹೈಸ್ಪೀಡ್ ರೈಲು:ಚಿತ್ರರಂಗದ ಗಣ್ಯರು ಮತ್ತು ವಾಣಿಜ್ಯೋದ್ಯಮಿಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಬಿ.ಆರ್.ವಿ ಪೊಲೀಸ್ ಮೈದಾನದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ತ್ವರಿತ ಸಂಪರ್ಕ ಕಲ್ಪಿಸುವ ಉದ್ದೇಶದ ಅತಿ ವೇಗದ ರೈಲು ಯೋಜನೆಯು ಅನಗತ್ಯವಾಗಿದೆ. ಈ ಯೋಜನೆ ಕೇವಲ ಒಂದು ಭಾಗದ ಜನರಿಗೆ ಮಾತ್ರ ಉಪಯೋಗವಾಗುವಂತಹದ್ದು. ಸುಮಾರು ರೂ 6,689 ಕೋಟಿ ವೆಚ್ಚದ ಈ ಯೋಜನೆ ಅನುಷ್ಠಾನಕ್ಕಿಂತ ಮೆಟ್ರೊ ರೈಲು ಸಂಪರ್ಕವನ್ನು ನಗರದೆಲ್ಲೆಡೆ ವಿಸ್ತರಿಸಿದರೆ ಹೆಚ್ಚು ಉಪಯುಕ್ತ ಎಂದು ಚಿತ್ರರಂಗದ ಗಣ್ಯರು ಮತ್ತು ವಾಣಿಜ್ಯೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.ವಿಮಾನ ನಿಲ್ದಾಣವನ್ನು ಬೆರಳಣಿಕೆಯಷ್ಟು ಜನರು ಬಳಸುತ್ತಾರೆ. ಅವರಿಗಾಗಿ ಅಷ್ಟೊಂದು ಹಣ ವ್ಯರ್ಥ ಮಾಡುವ ಬದಲು, ಒಟ್ಟು ಸಮಾಜಕ್ಕೆ ಉಪಯೋಗವಾಗಬಲ್ಲ ಯೋಜನೆಗಳನ್ನು ಹಾಕಿಕೊಳ್ಳುವುದು ಉತ್ತಮ. ಉದ್ಯೋಗ ಸೃಷ್ಟಿ, ಉತ್ತಮ ಶಿಕ್ಷಣ, ಬೆಲೆ ಏರಿಕೆ ನಿಯಂತ್ರಣ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.ಪ್ರಮುಖರ ಅನಿಸಿಕೆಗಳು
;

ರೈಲಿಗಿಂತ ಮುಖ್ಯವಾದ ಸಮಸ್ಯೆ

ಇಷ್ಟೊಂದು ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಈ ಸಮಯದಲ್ಲಿ ಸೂಕ್ತವೇ ಎನ್ನುವುದನ್ನು ಯೋಚಿಸಬೇಕಾದ ಅಗತ್ಯ ಇದೆ. ಅತಿವೇಗದ ರೈಲು ಯೋಜನೆಗಿಂತ ಮುಖ್ಯವಾದ ಬೇರೆ ಅವಶ್ಯಕತೆಗಳು ಜನರಿಗೆ ಇಲ್ಲವೇ? ಅವುಗಳನ್ನು ಪೂರೈಸಲು ಚಿಂತಿಸಬಾರದೇಕೆ?  ಸಮಾಜದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಜೀವನ ಸಾಗಿಸಲು ಬೇಕಾದ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಶಿಕ್ಷಣವನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಬೆಳೆಯುತ್ತಿದೆ. ತಲೆಮೇಲೊಂದು ಸೂರು ಕಾಣದ ಅದೆಷ್ಟೋ ಬಡಜನರು ಇದ್ದಾರೆ. ಇವರ ಕುರಿತು ಸರ್ಕಾರ ಗಂಭೀರವಾಗಿ ಏನನ್ನಾದರೂ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಪ್ರತಿದಿನ ಎಷ್ಟು ಜನ ಹೋಗುವರು? ಕೋಟ್ಯಾಂತರ ರೂಪಾಯಿ ವೆಚ್ಚದ ಈ ಯೋಜನೆಯಿಂದ ಎಷ್ಟು ಜನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ? ಇದನ್ನೆಲ್ಲ ಲೆಕ್ಕಹಾಕಿ ಯೋಜನೆ ಕೈಗೆತ್ತಿಕೊಳ್ಳಬೇಕು. ಈ ವಿಷಯದಲ್ಲಿ ವಿರೋಧ ಪಕ್ಷಗಳು ಏಕೆ ಸಮ್ಮನಾಗಿವೆ ಎನ್ನುವುದು ತಿಳಿಯುತ್ತಿಲ್ಲ.

-ಗಿರೀಶ್ ಕಾಸರವಳ್ಳಿ,

ಚಿತ್ರನಿರ್ದೇಶಕ

ಯಾರಿಗೆ ಲಾಭ?   

ಬದುಕಿಗೆ ಅತ್ಯಂತ ಅವಶ್ಯಕತೆ ಇರುವ ಕುಡಿಯುವ ನೀರು ಕೂಡ ಸಿಗದ ಹಲವು ಪ್ರದೇಶಗಳು ನಗರದಲ್ಲಿವೆ. ಒಂದು ಹೊತ್ತು ಅನ್ನಕ್ಕೂ ಗತಿಕಾಣದ ಸಾವಿರಾರು ಬಡವರು ಕೊಳಚೆ ಪ್ರದೇಶದಲ್ಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಹಾಳಾಗಿದ್ದು, ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳತ್ತ ಗಮನ ಹರಿಸದ ಸರ್ಕಾರ ಅತಿವೇಗದ ರೈಲು ಯೋಜನೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಕಾಳಜಿ ತೋರುತ್ತಿರುವುದು ಯಾರಿಗೆ ಲಾಭ?

-ಅಶೋಕ,

ಚಿತ್ರನಟ  

 

ಮೆಟ್ರೊ ವಿಸ್ತರಿಸಿ


ವಿಮಾನ ನಿಲ್ದಾಣಕ್ಕೆ ತೆರಳಲು ಈಗಾಗಲೇ ಸಾಕಷ್ಟು ಸಾರಿಗೆ ಸಂಪರ್ಕ ವ್ಯವಸ್ಥೆಗಳಿವೆ. ಮುಂದಿನ ದಿನಗಳಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿ, ಮೇಲುಸೇತುವೆ ಬಂದರೆ ಇನ್ನೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಅತಿವೇಗದ ರೈಲು ನಿರ್ಮಾಣ ಮಾಡುವುದು ನಿರರ್ಥಕ. ಹೊರವರ್ತುಲ ರಸ್ತೆ ಹಾಗೂ ಒಳವರ್ತುಲ ರಸ್ತೆಯನ್ನು ದೇವನಹಳ್ಳಿಗೆ ಹೋಗುವ ಹೆದ್ದಾರಿಗೆ ಸಂಪರ್ಕಿಸಿದರೆ ಬಹುತೇಕ ನಗರದ ಪ್ರದೇಶಗಳಿಗೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಇದಕ್ಕೆ ಕಡಿಮೆ ವೆಚ್ಚ ತಗಲುತ್ತದೆ. ಅಲ್ಲದೇ, ನಗರದ ಬಹುತೇಕ ಎಲ್ಲ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಆದರೆ, ಅತಿವೇಗದ ರೈಲು ಯೋಜನೆಯಿಂದ ಕೇವಲ ಎಂ.ಜಿ. ರಸ್ತೆ, ಹೆಬ್ಬಾಳ ಹಾಗೂ ಯಲಹಂಕದ ಸುತ್ತಮುತ್ತಲಿನ ಜನರಿಗೆ ಮಾತ್ರ ಪ್ರಯೋಜನವಾಗಬಹುದು.ವಿಮಾನ ನಿಲ್ದಾಣದ ಸುತ್ತಮುತ್ತವೇ ಕೈಗಾರಿಕೆಗಳನ್ನು ಸ್ಥಾಪಿಸಬಾರದು. ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದೇಶಿಸುವವರೆಗೆ ನಗರದ ಬೇರೆಡೆ ಭೂಮಿಯನ್ನು ನೀಡಿದರೆ, ಇಲ್ಲಿನ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ’.

-ರಾಕ್‌ಲೈನ್ ವೆಂಕಟೇಶ್, ಚಿತ್ರನಟ, ನಿರ್ಮಾಪಕಎಲ್ಲರಿಗೂ ಪ್ರಯೋಜನ ದಕ್ಕಲ್ಲ


ಈ ಯೋಜನೆ ಸಾಮಾನ್ಯ ಜನರಿಗೆ ದೂರದ ಬೆಟ್ಟವೇ ಸರಿ. ಎಂ.ಜಿ. ರಸ್ತೆ, ಹೆಬ್ಬಾಳ, ಯಲಹಂಕ ಸುತ್ತಮುತ್ತಲಿನ ಜನರು ಮಾತ್ರ ಈ ರೈಲನ್ನು ಉಪಯೋಗಿಸಬಹುದು. ಕೇವಲ ಒಂದು ಭಾಗದವರಿಗೆ ಅನುಕೂಲ ಕಲ್ಪಿಸಿಕೊಡುವ ಈ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡುತ್ತಿರುವುದು ಅನವಶ್ಯಕ. ಬನಶಂಕರಿ, ರಾಜಾಜಿನಗರ, ಮುಂತಾದ ಪ್ರದೇಶಗಳಲ್ಲಿರುವ ಜನರು ಅತಿವೇಗದ ರೈಲನ್ನು ಹತ್ತಬೇಕೆಂದರೆ ಹೇಗೆ ಸಾಧ್ಯ?ವಾಸ್ತವ ಸ್ಥಿತಿ ಅರಿಯದ ಐಎಎಸ್ ಅಧಿಕಾರಿಗಳು ಯೋಜನೆ ರೂಪಿಸಿದರೆ ಹೀಗೆಯೇ ಆಗುತ್ತದೆ. ಕಡಿಮೆ ವೆಚ್ಚದಲ್ಲಿ, ಹೆಚ್ಚು ಜನರಿಗೆ ಉಪಯೋಗವಾಗುವಂತಹ ಯೋಜನೆ ಹಮ್ಮಿಕೊಳ್ಳಬೇಕು. ದುಬಾರಿ ವೆಚ್ಚದ ಯೋಜನೆ ಹಮ್ಮಿಕೊಳ್ಳುವುದರಿಂದ ಕಾಂಟ್ರಾಕ್ಟರ್‌ಗಳಿಗೆ, ಮಧ್ಯವರ್ತಿಗಳಿಗೆ ಮಾತ್ರ ‘ಲಾಭ’.

-ಎಸ್. ಎ. ಚಿನ್ನೇಗೌಡ,

ನಿರ್ಮಾಪಕವಾಸ್ತವಕ್ಕೆ ಬಲುದೂರ


ಅತಿವೇಗದ ರೈಲು ಯೋಜನೆಯು ಕೇವಲ ನಗರದ ಒಂದು ಭಾಗವನ್ನು ಮಾತ್ರ ಸಂಪರ್ಕಿಸುತ್ತದೆ. ಇನ್ನುಳಿದ ಭಾಗದ ಜನ ಏನು ಮಾಡಬೇಕು? ಈಗ ನಾನಿರುವುದು ಬನಶಂಕರಿಯಲ್ಲಿ, ಈ ರೈಲನ್ನು ಹತ್ತಬೇಕಾದರೆ ಎಂ.ಜಿ.ರಸ್ತೆವರೆಗೆ ಹೋಗುವುದು ಹೇಗೆ? ವೈಟ್‌ಫೀಲ್ಡ್, ಮೈಸೂರು ರಸ್ತೆಯಲ್ಲಿರುವವರದ್ದು ಇದೇ ಸ್ಥಿತಿ. ವಸ್ತುಸ್ಥಿತಿ ಹೀಗಿದ್ದ ಮೇಲೆ ಈ ಯೋಜನೆ ಹೇಗೆ ಯಶಸ್ವಿಯಾಗುತ್ತದೆ?ಯೋಜನೆಗೆ ನೀಲನಕ್ಷೆ ರೂಪಿಸುವ ಹಿರಿಯ ಅಧಿಕಾರಿಗಳಿಗೆ ವಾಸ್ತವದ ಸ್ಥಿತಿ ಗೊತ್ತಿರುವುದಿಲ್ಲ. ಎಲ್ಲೊ ಕಚೇರಿಯಲ್ಲಿ ಕುಳಿತು ಯೋಜನೆ ಸಿದ್ಧಪಡಿಸಿದರೆ ಹೀಗೆಯೇ ಆಗುತ್ತದೆ.  ವಿದೇಶಗಳಲ್ಲಿ ನಾನು ನೋಡಿರುವಂತೆ ಸಂಪರ್ಕಜಾಲ (ನೆಟ್‌ವರ್ಕ್) ಅತ್ಯುತ್ತಮವಾಗಿರುತ್ತದೆ. ನಗರದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಲುಪಬೇಕಾದರೂ ಅಚ್ಚುಕಟ್ಟಾದ ವ್ಯವಸ್ಥೆ ಇರುತ್ತದೆ. ಇಂತಹ ವ್ಯವಸ್ಥೆ ಇಲ್ಲಿ ಆಗಬೇಕು. ಹೈಸ್ಪೀಡ್ ರೈಲ್ವೆಗಿಂತ ನಗರದ ತುಂಬ ಇಂಟರ್‌ಕನೆಕ್ಟ್ ರೈಲ್ವೆ ವ್ಯವಸ್ಥೆ ಜಾರಿಗೆ ಬಂದರೆ ಹೆಚ್ಚು ಉತ್ತಮ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂ.ಜಿ. ರಸ್ತೆಗೆ ಪ್ರಯಾಣಿಕರನ್ನು ತಂದಿಳಿಸಿದ ನಂತರ ನಿಮ್ಮ ದಾರಿಗಳನ್ನು ನೋಡಿಕೊಳ್ಳಿ ಎಂದರೆ ಹೇಗೆ? ವಿವಿಧ ಭಾಗಗಳಲ್ಲಿರುವ ಜನರು ಹೇಗೆ ಮನೆಗೆ ತಲುಪಬೇಕು?

-ರವಿಕಿರಣ್, ಕಿರುತೆರೆ ನಟ,

ನಿರ್ದೇಶಕಅನಗತ್ಯ ಹೊರೆ;

ದುಂದುವೆಚ್ಚಕ್ಕೆ ನಾಂದಿ

‘ಈಗಿರುವ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಿಸಿದರೆ ಅರ್ಧಗಂಟೆಯಲ್ಲಿ ಬಿಐಎಎಲ್ ತಲುಪಬಹುದು. ಹೈಸ್ಪೀಡ್ ರೈಲು ಯೋಜನೆಗೆ ಖರ್ಚಾಗುವಷ್ಟು ಹಣ ಇದಕ್ಕೆ ಖರ್ಚಾಗುವುದಿಲ್ಲ.ಎಚ್‌ಎಸ್‌ಆರ್‌ಎಲ್ ದುಂದುವೆಚ್ಚಕ್ಕೆ ನಾಂದಿ ಹಾಡಲಿದೆ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಬೆಂಗಳೂರು ನಾಗರಿಕರಿಗೆ ಅನಗತ್ಯ ಹೊರೆಯಾಗಲಿದೆ.’

- ಎನ್.ಎಸ್.ಶ್ರೀನಿವಾಸಮೂರ್ತಿ,  ಎಫ್‌ಕೆಸಿಸಿಐ ಅಧ್ಯಕ್ಷ.

ಯೋಚಿಸುವ ಅಗತ್ಯವಿದೆ

‘ನಗರದಲ್ಲಿ ಸಣ್ಣ ಸಣ್ಣ ರಸ್ತೆಗಳಿದ್ದು ಈಗಾಗಲೇ ಅನೇಕ ಕಾಮಗಾರಿಗಳು ನಡೆಯುತ್ತಿವೆ. ರೈತರು ವ್ಯಾಪಾರಿಗಳು ನಗರದಲ್ಲಿ ಸಂಚರಿಸುವುದು ದುಸ್ತರವಾಗಿದೆ. ಹೈಸ್ಪೀಡ್ ರೈಲು ಯೋಜನೆ ಜಾರಿಗೆ ತರುವುದರಿಂದ ಬಡವರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಸರ್ಕಾರ ಸಾರ್ವಜನಿಕರ ಹಣ ಪೋಲು ಮಾಡುವ ಮೊದಲು ಯೋಚಿಸುವ ಅಗತ್ಯವಿದೆ.’

- ಆರ್.ವಿ.ಗೋಪಾಲ್, ಹಣ್ಣು ಮತ್ತು ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ.ಮೇಲ್ಸೇತುವೆ ನಿರ್ಮಿಸಬೇಕು


‘ಕಾಮಗಾರಿ ಪೂರ್ಣಗೊಳ್ಳಲು ಸಾಕಷ್ಟು ಅವಧಿ ಬೇಕಾಗುತ್ತದೆ. ಅಲ್ಲದೇ ಯೋಜನೆ ಜಾರಿಯಿಂದಾಗಿ ಮುಖ್ಯವಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಯೋಜನೆಯ ಬದಲಿಗೆ ಬಿಐಎಎಲ್‌ನಿಂದ ನಗರದ ಹೃದಯ ಭಾಗದವರೆಗೆ ಮೇಲ್ಸೇತುವೆ ನಿರ್ಮಿಸಬೇಕು.’

- ಕೆ. ಶಿವಷಣ್ಮುಗಂ, ಶಿವಶಕ್ತಿ ಎಂಜಿನಿಯರಿಂಗ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ.ಗಾಯದ ಮೇಲೆ ಬರೆ


‘ಮೆಟ್ರೊ ರೈಲು ಮಾರ್ಗವನ್ನೇ ಬಿಐಎಎಲ್‌ವರೆಗೂ ವಿಸ್ತರಿಸಿದರೆ ಅನೇಕ ಸಮಸ್ಯೆಗಳು ತಪ್ಪುತ್ತವೆ. ಪ್ರಗತಿಯಲ್ಲಿರುವ ಮೆಟ್ರೊ ಕಾಮಗಾರಿಯಿಂದಾಗಿ ಜನತೆ ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಇನ್ನೊಂದು ಕಾಮಗಾರಿ ಆರಂಭವಾದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹೈಸ್ಪೀಡ್ ರೈಲು ಯೋಜನೆಗೆ ಪ್ರಸ್ತುತ ಸಂದರ್ಭ ಪೂರಕವಾಗಿಲ್ಲ.’

-ಜೆ.ಆರ್.ಬಂಗೇರ, ಕಾಸಿಯಾ ಮಾಜಿ ಅಧ್ಯಕ್ಷ.

ವಿಸ್ತರಣೆಯೇ ಉಪಯೋಗ

‘ಇಂತಹ ಯೋಜನೆಗಳನ್ನು ಹತ್ತು ವರ್ಷ ಮೊದಲೇ ರೂಪಿಸಬೇಕಿತ್ತು. ದೇವನಹಳ್ಳಿಯವರೆಗೆ ಇರುವ ರೈಲ್ವೆ ವ್ಯವಸ್ಥೆಯನ್ನು ಬಿಐಎಎಲ್‌ವರೆಗೂ ವಿಸ್ತರಿಸಿದರೆ ಹಣ ಉಳಿತಾಯವಾಗುತ್ತದೆ. ಹೈಸ್ಪೀಡ್ ರೈಲು ಕಾಮಗಾರಿಯಿಂದ ಉದ್ಭವಿಸುವ ವಾಹನ ದಟ್ಟಣೆ, ಹೊಸ ಮಾರ್ಗ ನಿರ್ಮಾಣ ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು.’

- ಮಾನಂದಿ ಎನ್. ಸುರೇಶ್,  ರೋಟರಿ ಜಿಲ್ಲೆ 3190 ಗವರ್ನರ್.

ಅಗತ್ಯವಿದೆ

‘ಪಾಶ್ಚಾತ್ಯ ದೇಶಗಳಲ್ಲಿ ನೆಲದಡಿಯಲ್ಲಿ ಹೈಸ್ಪೀಡ್ ರೈಲುಗಳು ಸಂಚರಿಸುತ್ತವೆ. ಆದರೆ ನಗರದಲ್ಲಿ ಈ ಪರಿಸ್ಥಿತಿ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ನೆಲದಡಿಯ ಹೈಸ್ಪೀಡ್ ರೈಲಿಗೆ ಚಾಲನೆ ನೀಡುವುದು ಅಗತ್ಯ’

- ಸುರೇಶ್ ಭಟ್,

ಮಾರ್ಕ್‌ಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ.

ಅರ್ಥವಿಲ್ಲ

‘ನಗರದಲ್ಲಿ ಅಸ್ತಿತ್ವದಲ್ಲಿರುವ ಸಾರಿಗೆ ಸಂಪರ್ಕ ಯೋಜನೆಗಳಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತದೆ. ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸದೇ ಹೊಸ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ಅರ್ಥವಿಲ್ಲ’

-ವಾಸನ್, ಗ್ರೀನ್‌ಹೌಸ್ ಹೋಟೆಲ್ ಮಾಲೀಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.