ಶನಿವಾರ, ಮೇ 28, 2022
30 °C

ಹೈಸ್ಪೀಡ್ ರೈಲು ಎನ್ನುವ ಬಿಳಿಯಾನೆ ಯಾಕೆ ಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2005ರಲ್ಲಿ ಮೆಟ್ರೊ ಯೋಜನೆ ಕೂಡ ಅದರ ಅಗತ್ಯತೆ ಹಾಗೂ ಮಾರ್ಗಗಳ ಕುರಿತು ಯಾವುದೇ ಚರ್ಚೆಗೂ ಆಸ್ಪದವಿಲ್ಲದೆ ಆಕಾಶದಿಂದ ಧುತ್ತೆಂದು ಉದುರಿತು. ಈಗ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಯೋಜನೆ (ಎಚ್‌ಎಸ್‌ಆರ್‌ಎಲ್) ಎಂಬ ಬಿಳಿಯಾನೆ ಸೃಷ್ಟಿಯಾಗಿದೆ.ವಿಷ್ಣುವಿನ ಅವತಾರವಾದ ವಾಮನ ಬೃಹತ್ತಾಗಿ ಬೆಳೆದು ಮೂರು ಪಾದಗಳಲ್ಲಿ ಇಡೀ ವಿಶ್ವವನ್ನು ಆವರಿಸಿದ. ಅದೇ ರೀತಿ ಎಚ್‌ಎಸ್‌ಆರ್‌ಎಲ್ ಏಕೆ ಬೇಡ ಎಂಬುದಕ್ಕೆ 3 ಕಾರಣಗಳಿವೆ.ಮೊದಲನೆಯದಾಗಿ ಸರ್ಕಾರ ರೂಪಿಸುವ ಯೋಜನೆಯೊಂದು ಬಹು ಉಪಯೋಗಿಯಾಗಿದ್ದು ಗ್ರಾಮೀಣ ಪ್ರದೇಶದ ಅಥವಾ ಕಡಿಮೆ ಸವಲತ್ತುಗಳನ್ನು ಹೊಂದಿರುವ ನಗರವಾಸಿಗಳಿಗೆ ಅನುಕೂಲವಾಗುವ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಕ್ಷೇತ್ರಗಳಿಗಾಗಿ ಸರ್ಕಾರದ ಯೋಜನೆ ರೂಪುಗೊಳ್ಳಬೇಕು ಎಂಬುದು ಸಾರ್ವಕಾಲಿಕವಾಗಿ ಚರ್ಚೆಯಲ್ಲಿರುವ ಒಂದು ವಾದ. ಆದರೆ ಎಚ್‌ಎಸ್‌ಆರ್‌ಎಲ್ ಯೋಜನೆ ಈ ಆಶಯಗಳಿಗೆ ಅನುಗುಣವಾಗಿ ಇಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಉತ್ತಮವಾಗಿ ಈಗಾಗಲೇ ರೂಪುಗೊಂಡಿರುವ ವಿಮಾನ ಯೋಜನೆಗೆ ಸಂಪನ್ಮೂಲಗಳ ಕೊರತೆ ಇದ್ದರೂ ಸರ್ಕಾರ ಏಕೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ? ವ್ಯಕ್ತಿಯೊಬ್ಬ ತನ್ನ ಮಕ್ಕಳ ಶಿಕ್ಷಣಕ್ಕಾಗಿ ಹಣ ವಿನಿಯೋಗಿಸದೇ ಚಿಕ್ಕ ಟಿವಿ ಬದಲಿಗೆ ದೊಡ್ಡ ಪರದೆಯ ಟಿವಿ ಖರೀದಿಸಲು ಹೊರಟಂತೆ ಅನುಪಯುಕ್ತವಾಗಿದೆ ಈ ಯೋಜನೆ.ವಿಮಾನ ನಿಲ್ದಾಣಕ್ಕೆ ನೀಡಬೇಕಾದ ಮೂಲ ರಸ್ತೆ ಸೌಕರ್ಯವನ್ನು ಈಗಾಗಲೇ ಒದಗಿಸಲಾಗಿದ್ದು ಹೆಬ್ಬಾಳ ಬಳಿ ಮೇಲ್ಸೇತುವೆ ನಿರ್ಮಾಣ ಆಗುವುದರಿಂದ ಒಂದು ದಶಕಗಳ ಕಾಲ ಈ ರಸ್ತೆಯಲ್ಲಿ ಆರಾಮದಾಯಕವಾಗಿ ಸಂಚರಿಸಬಹುದು. ಒಂದು ವೇಳೆ ಎಚ್‌ಎಸ್‌ಆರ್‌ಎಲ್ ಯೋಜನೆ ಕಾರ್ಯಸಾಧುವಾಗಿದೆ ಎಂದುಕೊಂಡರೂ ಸರ್ಕಾರ ಮೌಲ್ಯಯುತ ಭೂಮಿಯನ್ನು ಕಡಿಮೆ ಬೆಲೆಗೆ ನೀಡುವಂತೆ ಖಾಸಗಿ ಡೆವಲಪರ್ ಒತ್ತಾಯಿಸಬಹುದು. ಇದರಿಂದ ಆ ಪ್ರದೇಶದಲ್ಲಿ ರೂಪುಗೊಳ್ಳಬೇಕಾದ ಸರ್ಕಾರದ ಇನ್ನಿತರ ಯೋಜನೆಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಬದಲಿಗೆ ಮೆಟ್ರೊ ರೈಲಿಗೆ ಪೂರಕವಾಗಿ ಮೋನೊ ರೈಲು ಯೋಜನೆ ಈ ಭಾಗದಲ್ಲಿ ಜಾರಿಯಾದರೆ ಸಾರಿಗೆ ವಲಯದಲ್ಲಿ ಸರ್ಕಾರದ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಂತಾಗುತ್ತದೆ.  ಎರಡನೆಯದಾಗಿ ಎಚ್‌ಎಸ್‌ಆರ್‌ಎಲ್ ನಿಲ್ದಾಣ ಎಂ.ಜಿ.ರಸ್ತೆಯಲ್ಲಿ ರೂಪುಗೊಂಡರೆ ನಗರದ ಹೃದಯ ಭಾಗದಲ್ಲಿ ಸಹಜವಾಗಿಯೇ ಸಂಚಾರ ದಟ್ಟಣೆ ಹೆಚ್ಚುತ್ತದೆ. ದೂರ ದೇಶಗಳಿಗೆ ತೆರಳುವ ಪ್ರಯಾಣಿಕರು ದೊಡ್ಡದೊಡ್ಡ ಲಗೇಜ್ ಹೊತ್ತು ಖಾಸಗಿ ವಾಹನದಲ್ಲಿ ಸಂಚರಿಸುತ್ತಾರೆಯೇ ವಿನಃ ಸಮೂಹ ಸಾರಿಗೆಯನ್ನು ಇಷ್ಟ ಪಡುವುದಿಲ್ಲ ಎಂಬುದು ಗಮನಾರ್ಹ ಸಂಗತಿ.  ನಗರ ಯೋಜಕರು ದಟ್ಟಣೆ ಮುಕ್ತಗೊಳಿಸುವತ್ತ ಗಮನ ಹರಿಸಬೇಕಿದ್ದು ಖಾಸಗಿ ವಾಹನಗಳ ಬದಲಿಗೆ ಸಮೂಹ ಸಾರಿಗೆಯನ್ನು ಬಳಸುವಂತೆ ನಿಟ್ಟಿನಲ್ಲಿ ನಗರವನ್ನು ಅಭಿವೃದ್ಧಿಪಡಿಸಬೇಕಿದೆ.  ಇನ್ನೊಂದೆಡೆ ಯೋಜನೆಯಿಂದ ಮ್ಯಾಜಿಕ್ ಬಾಕ್ಸ್ ನಿರ್ಮಾಣ ಯೋಜನೆಯಲ್ಲಿ ಬದುಕುಳಿದಿರುವ ಎಂ.ಜಿ.ರಸ್ತೆಯಿಂದ ಹೆಬ್ಬಾಳದವರೆಗಿನ ಅಲ್ಪಸ್ವಲ್ಪ ಮರಗಿಡಗಳು ಕೂಡ ಧರೆಗೆ ಉರುಳಲಿವೆ.ಮೂರನೇಯದಾಗಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಾಧ್ಯವಾದ ಕಡೆಗಳಲ್ಲೆಲ್ಲಾ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ವ್ಯವಸ್ಥೆಯನ್ನೇ ಸಮಗ್ರವಾಗಿ ಬಳಸಿಕೊಳ್ಳಬೇಕೆ ವಿನಃ ಹಸಿರು ಭೂಮಿಯನ್ನು ಕಬಳಿಸುವ ಯೋಜನೆಗಳು ಅಗತ್ಯವಿಲ್ಲ. ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನೇ ಸಮರ್ಪಕವಾಗಿ ಬಳಸುವುದರಿಂದಾಗಿ ಹೊಸದಾಗಿ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಗತ್ಯ ಇರುವುದಿಲ್ಲ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ರದ್ದು ಪಡಿಸಿದ್ದು ಅನೇಕರಿಗೆ ಬೇಸರ ತಂದಿತ್ತು. ಎರಡು ವಿಮಾನ ನಿಲ್ದಾಣಗಳಿದ್ದರೆ ರಾಜ್ಯ ಹಾಗೂ ನಗರಕ್ಕೆ ಹಲವು ಬಗೆಯಲ್ಲಿ ಅನುಕೂಲವಾಗುತ್ತಿತ್ತು. ಎಚ್‌ಎಎಲ್ ವಿಮಾನ ನಿಲ್ದಾಣ ಮುಖ್ಯವೋ ಅಥವಾ ಹೈಸ್ಪೀಡ್ ರೈಲು ಯೋಜನೆ ಬರಲಿರುವ ಬಿಐಎಎಲ್ ಮುಖ್ಯವೋ ಎಂದು ಜನರನ್ನು ಪ್ರಶ್ನಿಸಿದರೆ ಅವರು ನಿಸ್ಸಂಶಯವಾಗಿ ಮೊದಲನೆಯದನ್ನೇ ಆಯ್ದುಕೊಳ್ಳುತ್ತಾರೆ. ಎರಡೂ ವಿಮಾನ ನಿಲ್ದಾಣಗಳನ್ನು ಬಿಐಎಎಲ್ ನಿರ್ವಹಿಸಬಹುದಿತ್ತು. ಈ ಕುರಿತು ಕಾರ್ಯೋನ್ಮುಖವಾಗಲು ಬಿಐಎಎಲ್‌ಗೆ ಇನ್ನೂ ಕಾಲ ಮಿಂಚಿಲ್ಲ. ಹೈಸ್ಪೀಡ್ ಅಗತ್ಯವಿದೆ ಎಂದರೆ ನಗರದ ವಿವಿಧ ಭಾಗಗಳಿಂದ ಬಿಐಎಎಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸೇವೆಯನ್ನೇ ಒದಗಿಸಬಹುದು.ಈಗಿರುವ ರೈಲ್ವೆ ಮಾರ್ಗವನ್ನೇ ಹಂತಹಂತವಾಗಿ ಬಿಐಎಎಲ್‌ವರೆಗೂ ವಿಸ್ತರಿಸಿದರೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡಂತಾಗುತ್ತದೆ. 100 ಕೋಟಿ ರೂಪಾಯಿ ಬಂಡವಾಳ ಹೂಡಿದರೆ ಈಗಿರುವ ರೈಲ್ವೆ ಜಾಲವನ್ನು ಬಿಐಎಎಲ್‌ವರೆಗೂ ವಿಸ್ತರಿಸಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಲ್ಲದೇ ಮೆಟ್ರೊ ರೈಲು ಮಾರ್ಗವನ್ನು  ವಿಸ್ತರಿಸಿ ಬೈಯಪ್ಪನಹಳ್ಳಿಯಿಂದ ಬಿಐಎಎಲ್‌ವರೆಗೂ ಚಲಿಸುವ ಮೆಟ್ರೊ ರೈಲಿಗೆ ಸುಧಾರಿತ ವೇಗದ ವ್ಯವಸ್ಥೆ ಒದಗಿಸಬಹುದು. ಇದರಿಂದ ಕೇವಲ ಶ್ರೀಮಂತ ವರ್ಗದವರ ಮಾತ್ರವಲ್ಲದೆ ಬಿಐಎಎಲ್ ಸುತ್ತಮುತ್ತ ವಾಸಿಸುವ ಸ್ಥಳೀಯರು ಕಡಿಮೆ ಬೆಲೆಯಲ್ಲಿ ನಿತ್ಯ ನಗರಕ್ಕೆ ಸಂಚರಿಸುವುದು ಸಾಧ್ಯವಾಗುತ್ತದೆ ಎಂದು ಹೇಳಿದರು.ಒಂದು ಯೋಜನೆ ಯಶಸ್ವಿಯಾದರೆ ಅದಕ್ಕೆ ಅನೇಕ ‘ಅಪ್ಪಂದಿರು’ ಹುಟ್ಟಿಕೊಳ್ಳುತ್ತಾರೆ ಆದರೆ ಅದೇ ಯೋಜನೆ ವಿಫಲವಾದರೆ ಅದು ಅನಾಥವಾಗಿ ಉಳಿದು ಬಿಡುತ್ತದೆ. ಎಚ್‌ಎಸ್‌ಆರ್‌ಎಲ್ ವಿಷಯದಲ್ಲಿ ಯಾರು ಮುಖ್ಯ ಚಾಂಪಿಯನ್‌ಗಳು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗೆ ಯೋಜನೆಯನ್ನು ಬೆಂಬಲಿಸುತ್ತಿರುವವರಿಗೆ ಅದು ಯಶಸ್ವಿಯಾಗುವ ನಂಬಿಕೆ ಇದೆಯೇ ಎಂಬ ಬಗ್ಗೆ ಅನುಮಾನ ಉಂಟಾಗುತ್ತಿದೆ. ಆದರೆ ಸರ್ಕಾರದ ನಿರ್ಧಾರಕ್ಕೆ ಅದರದೇ ಆದ ತರ್ಕಗಳಿರುತ್ತವೆ. ಏನೇ ಆಗಲಿ ಯಾರೂ ಬಯಸದ ಎಚ್‌ಎಸ್‌ಆರ್‌ಎಲ್ ಒಂದು ವೇಳೆ ಅಸ್ತಿತ್ವಕ್ಕೆ ಬಂದರೆ ವಾಣಿಜ್ಯ ಹಾಗೂ ನಿರ್ವಹಣೆಯ ಹೊಣೆ ಹೊತ್ತಿರುವ ಖಾಸಗಿ ಡೆವಲಪರ್‌ಗಳಿಗೆ ಸರ್ಕಾರ ಯಾವುದೇ ಸಹಾಯ ಅಥವಾ ಬೆಂಬಲಕ್ಕೆ ನಿಲ್ಲದಂತೆ ಅದು ಅಸ್ತಿತ್ವಕ್ಕೆ ಬರಬೇಕು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.