ಹೈ-ಕ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿ

7

ಹೈ-ಕ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿ

Published:
Updated:
ಹೈ-ಕ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿ

ಬೆಂಗಳೂರು: `ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನಕ್ಕಾಗಿ ಕಾಯುವುದಕ್ಕಿಂತ, ಅಲ್ಲಿಂದ ವಲಸೆ ಬಂದ ಮೂಲ ನಿವಾಸಿಗಳೇ ಆ ಪ್ರದೇಶದ ಅಭಿವೃದ್ಧಿಗಾಗಿ ಸಂಕಲ್ಪ ಮಾಡಬೇಕು~ ಎಂದು ಕಂದಾಯ ಇಲಾಖೆಯ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ವಿಭಾಗದ ನಿರ್ದೇಶಕ ಮನು ಬಳಿಗಾರ್ ಅಭಿಪ್ರಾಯಪಟ್ಟರು.ಹೈದರಾಬಾದ್ ಕರ್ನಾಟಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ನಗರದ ಸದಾಶಿವನಗರದ ವೀರೇಂದ್ರ ಪಾಟೀಲ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ `ಹೈದರಾಬಾದ್ ಕರ್ನಾಟಕ ಸಾಂಸ್ಕತಿಕ ಹಬ್ಬ - 2012~ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಹೈದರಾಬಾದ್ ಕರ್ನಾಟಕ ಪ್ರದೇಶವು ಸಾಕಷ್ಟು ಪ್ರಾಕೃತಿಕ ಸಂಪತ್ತಿನಿಂದ ತುಂಬಿದೆ. ತುಂಗಭದ್ರಾ ನದಿಯು ಹರಿಯುವ ಸಮೃದ್ಧ ಸ್ಥಳ ಹೈದರಾಬಾದ್ ಕರ್ನಾಟಕ ಪ್ರದೇಶ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಇಡೀ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಆ ಪ್ರದೇಶದಿಂದ ಬಂದ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳಬೇಕು~ ಎಂದು ಅವರು ಕರೆ ನೀಡಿದರು.`ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂ ಅನ್ವಯ ಸರ್ಕಾರದಿಂದ ಎಷ್ಟು ಅನುದಾನ ಬರಬೇಕೋ ಅದು ಬಂದೇ ಬರುತ್ತದೆ. ಆ ಅನುದಾನಕ್ಕಾಗಿ ಕಾಯದೇ ಸ್ಥಳೀಯರು ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪ್ರದೇಶವೊಂದರ ಅಭಿವೃದ್ಧಿಯೆಂದರೆ ಅದು ಕೇವಲ ಸರ್ಕಾರದಿಂದ ಮಾತ್ರ ಆಗಬೇಕಾದ ಕೆಲಸವಲ್ಲ, ಅದು ಅಲ್ಲಿನ ಸ್ಥಳೀಯರು ಹಾಗೂ ಅಲ್ಲಿಂದ ವಲಸೆ ಬಂದ ಮೂಲ ನಿವಾಸಿಗಳ ಜವಾಬ್ದಾರಿಯೂ ಹೌದು~ ಎಂದರು.ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, `ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅಂಟಿಸುವುದು ಬೇಡ. ಪ್ರಾಕೃತಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಆ ಪ್ರದೇಶವನ್ನು ಮುನ್ನೆಲೆಗೆ ತರಲು ಆ ಪ್ರದೇಶದಿಂದ ಬೆಳೆದು ಬಂದ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು~ ಎಂದರು.ಸಮಾರಂಭದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಶಿಕ್ಷಣ ತಜ್ಞ ಶಾಂತಯ್ಯ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಾರ ಜಿ.ಬಸವಣ್ಣ ಅವರನ್ನು ಸನ್ಮಾನಿಸಲಾಯಿತು. ಹೈ-ಕ  ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ ಸಿರಿ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry