ಹೈ-ಕ ರಣಜಿ ತಂಡದ ಬೇಡಿಕೆ

7
ಕ್ರಿಕೆಟ್‌ಗೂ ಅಂಗಣದಲ್ಲಿ `371'ನೇ ಮಸೂದೆ

ಹೈ-ಕ ರಣಜಿ ತಂಡದ ಬೇಡಿಕೆ

Published:
Updated:

 


ಗುಲ್ಬರ್ಗ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 118ನೇ ತಿದ್ದುಪಡಿ ಮಸೂದೆ 371 (ಜೆ)ಗೆ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕಿರುವುದು ಈ ಭಾಗದ ಕ್ರಿಕೆಟ್ ಅಂಗಣದಲ್ಲೂ ಹೊಸ ಸಂಚಲನ ಮೂಡಿಸಿದೆ. ಹೈ-ಕ ಪ್ರತ್ಯೇಕ ರಣಜಿ ತಂಡ ಹಾಗೂ ರಾಯಚೂರು ವಿಭಾಗ ಮರುವಿಂಗಡಣೆಯ ಬೇಡಿಕೆಯು ಚಿಗುರೊಡೆದಿದೆ.  

 

ಈ ಹಿಂದೆ 371 ತಿದ್ದುಪಡಿ ಮಸೂದೆ ಜಾರಿಗೊಂಡ ಮಹಾರಾಷ್ಟ್ರದಲ್ಲಿ ಪ್ರತ್ಯೇಕ ವಿದರ್ಭ, ಆಂಧ್ರಪ್ರದೇಶದಲ್ಲಿ ಹೈದರಾಬಾದ್ (ತೆಲಂಗಾಣ ವ್ಯಾಪ್ತಿಗೆ ಒಳಪಟ್ಟಿದೆ) ಹಾಗೂ ಗುಜರಾತ್‌ನಲ್ಲಿ ಸೌರಾಷ್ಟ್ರ ತಂಡಗಳಿಗೆ ಬಿಸಿಸಿಐ ಮಾನ್ಯತೆ ನೀಡಿದೆ. ಇದರಿಂದ ಹಿಂದುಳಿದ ಭಾಗದಲ್ಲಿ ಕ್ರಿಕೆಟ್ ಅಭಿವೃದ್ಧಿ ಮತ್ತು ಆಟಗಾರರಿಗೆ ಅವಕಾಶ ದೊರೆತಿದೆ. 

 

ಕೇವಲ ಅಭಿವೃದ್ಧಿ ಮಾತ್ರವಲ್ಲ, ಕ್ರೀಡೆಯಲ್ಲೂ ಹೈ-ಕ ನಿರಂತರ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಸುಸಜ್ಜಿತ ಕ್ರೀಡಾಂಗಣ ಈಗಷ್ಟೇ ಸಿದ್ಧಗೊಳ್ಳುತ್ತಿದೆ. ಟರ್ಫ್ ಅಂಗಣಗಳಿಲ್ಲ (ಖಾಸಗಿ ಇದೆ). ಲೀಗ್ ಪಂದ್ಯಕ್ಕೆ ಆಟಗಾರರು ನೂರಾರು ಮೈಲಿ ಪ್ರಯಾಣಿಸುವ ಸಂಕಷ್ಟವಿದೆ. ಇನ್ನು ಇಲ್ಲಿ ನಡೆಯುವ ಪಂದ್ಯಗಳನ್ನು ನೋಡಲು ಆಯ್ಕೆದಾರರು, ವೀಕ್ಷಕರು ಬರುವುದೇ ತೀರಾ ವಿರಳ. ಹೀಗಾಗಿ ಆಟಗಾರರಿಗೂ ಪ್ರಾತಿನಿಧ್ಯ ಕಡಿಮೆ. ಇದರಿಂದ ಆರ್ಥಿಕವಾಗಿ ಬಲವುಳ್ಳ ಆಟಗಾರರು ನೆರೆಯ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಉಳಿದ ಪ್ರತಿಭೆಗಳು ಬಿಸಿಲ ನೆಲದಲ್ಲೇ ಒಣಗಿ ಹೋಗಿವೆ. ಪ್ರತಿಭೆಯಿಂದಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಯರೇಗೌಡ ಆರಂಭಿಕ ದಿನಗಳಲ್ಲಿ ಸತತ ಏಳು ಬಾರಿ ಬೆಂಚ್‌ಗೆ ಸೀಮಿತಗೊಂಡ ನಿದರ್ಶನ, ಆಯ್ಕೆದಾರರ ಕದದಿಂದಲೇ ಮರಳಿದವರ ದೊಡ್ಡ ಪಟ್ಟಿಯೇ ಇಲ್ಲಿದೆ. 

 

ವಿಭಾಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಭೌಗೋಳಿಕವಾಗಿ ರಾಯಚೂರು ಅತಿದೊಡ್ಡ ವಿಭಾಗವಾಗಿದೆ. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಿದೆ. ತುಮಕೂರು, ಬೆಂಗಳೂರು ಮತ್ತು ಮೈಸೂರು ಮೂರು ವಿಭಾಗಗಳ ಒಟ್ಟು ಅಂತರ ಇನ್ನೂರು ಕಿ.ಮೀ.

ಒಳಗೆ.ಆದರೆ ರಾಯಚೂರು ವಿಭಾಗದ ಬೀದರ್‌ನಿಂದ ಬಳ್ಳಾರಿಗೆ 410 ಕಿ.ಮೀ., ಬಾಗಲಕೋಟೆಯಿಂದ ಬೀದರ್‌ಗೆ 365 ಕಿ.ಮೀ. ಅಂತರವಿದೆ. ಹೀಗಾಗಿ ಇಲ್ಲಿ ಆಟಕ್ಕಿಂತ ಪ್ರಯಾಣಕ್ಕೆ ಹೆಚ್ಚಿನ ಪ್ರಯಾಸ. ಹೈ-ಕದಲ್ಲಿ ಗುಲ್ಬರ್ಗ, ಗುಲ್ಬರ್ಗ ಕೇಂದ್ರೀಯ, ಬೀದರ್ ಪಶು ವೈದ್ಯಕೀಯ, ಬಳ್ಳಾರಿ ಕೃಷ್ಣದೇವರಾಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳಿವೆ. ವಿಜಾಪುರದಲ್ಲಿ ಮಹಿಳಾ ವಿವಿಯೂ ಇದೆ. ಆದರೆ ಎಲ್ಲ ಜಿಲ್ಲೆಗಳ ಕನಿಷ್ಠ ಎರಡು ಆಟಗಾರರಿಗೂ ವಿಭಾಗಕ್ಕೆ ಆಡಲು ಅವಕಾಶವಿಲ್ಲ. ಇನ್ನು ರಾಜ್ಯ ತಂಡಕ್ಕೆ ಆಯ್ಕೆಯನ್ನು ಇತಿಹಾಸವೇ ಹೇಳುತ್ತದೆ.  

 

`ಹೈ-ಕದಲ್ಲಿ 80ಕ್ಕೂ ಹೆಚ್ಚು  ಕ್ಲಬ್‌ಗಳಿವೆ. ಪಕ್ಕದ ಹೈದರಾಬಾದ್, ಪುಣೆ, ಮುಂಬಯಿ ಕ್ಲಬ್‌ಗಳೂ ಇಲ್ಲಿಗೆ ಆಡಲು ಬರಬಹುದು. ಆಗ ಪಂದ್ಯಗಳ ಸಂಖ್ಯೆ ಹೆಚ್ಚುತ್ತವೆ. `ಭವಿಷ್ಯ ಇಲ್ಲ' ಎಂದು ಕ್ರಿಕೆಟ್ ಕೈ ಬಿಡುವ ಹುಡುಗರ ಸಂಖ್ಯೆ ಇಳಿಕೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಉತ್ತೇಜನ ಸಿಗುತ್ತದೆ. ಕ್ರಿಕೆಟ್ ಅಭಿವೃದ್ಧಿ ಸಾಧ್ಯ. ಅದಕ್ಕೆ ಪ್ರತ್ಯೇಕ ರಣಜಿ ತಂಡ ಬೇಕು' ಎನ್ನುತ್ತಾರೆ ಗುಲ್ಬರ್ಗ ಕಾಸ್ಮೋ  ಕ್ರಿಕೆಟ್ ಕ್ಲಬ್ ಅಧ್ಯಕ್ಷ ಡಾ.ರಾಜು ಕುಳಗೇರಿ. 

 

`ಇಲ್ಲಿ ಈ ತನಕ ಹಲವು ಪಂದ್ಯಗಳು ಕೈ ತಪ್ಪಿವೆ. ವಾಕ್‌ಓವರ್ ಆದ ನಿದರ್ಶನಗಳೂ ಇದೆ. `ರಾಜಧಾನಿ' ರಾಜಕೀಯಕ್ಕೆ ಆಟಗಾರರು ಬಲಿಯಾದ ಉದಾಹರಣೆಗಳೂ ಇವೆ. ವಿಭಾಗ ಮರುವಿಂಗಡಣೆ ಅಹವಾಲು ಹೋಗಿದೆ. ಪ್ರತ್ಯೇಕ ರಣಜಿ ತಂಡದ ಬೇಡಿಕೆಯನ್ನು ವಿಭಾಗದ ಮೂಲಕ ಕೆಎಸ್‌ಸಿಎಗೆ ಸಲ್ಲಿಸುತ್ತೇವೆ. ಬಿಸಿಸಿಐ ಮಾನ್ಯತೆಗೆ ಯತ್ನಿಸುತ್ತೇವೆ. ನಿರಾಕರಿಸಿದರೆ ಹೈ-ಕದಲ್ಲಿ ` ಕ್ರೀಡೆಗಾಗಿ ಹೋರಾಟ' ಶುರು ಮಾಡಲಿದ್ದೇವೆ' ಎಂದು ಮಾಜಿ ಆಟಗಾರರಾದ ಕುಳಗೇರಿ ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry