ಮಂಗಳವಾರ, ಮೇ 18, 2021
30 °C

ಹೊಂಗಡಹಳ್ಳ ಗ್ರಾಮಕ್ಕೆ ಗುಂಡ್ಯಾ ಕರಿನೆರಳು

ಜಾನೇಕೆರೆ.ಆರ್.ಪರಮೇಶ್ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಸುತ್ತಲೂ ಹಸಿರು ಸೆರಗು ಚಾಚಿಕೊಂಡಿರುವ ಪಶ್ವಿಮಘಟ್ಟದ ನಿಸರ್ಗದ ಸೆರಗಿನಲ್ಲಿ ತಣ್ಣಗಿರುವ ಅಪ್ಪಟ ಮಲೆನಾಡಿನ ಹೊಂಗಡಹಳ್ಳ ಗ್ರಾಮಕ್ಕೆ, ಗುಂಡ್ಯಾ ಜಲ ವಿದ್ಯುತ್ ಯೋಜನೆಯ ವಿದ್ಯುತ್ ಶಾಕ್ ಹೊಡೆದಿದೆ.ಇದೇನಪ್ಪಾ ವಿದ್ಯುತ್ ಶಾಕ್ ಎಂದಿರಾ..? ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕೃತಿ ಸೌಂದರ್ಯ ಹೊಂದಿರುವ ಹೊಂಗಡಹಳ್ಳ ತಾಲ್ಲೂಕು ಕೇಂದ್ರದಿಂದ 45ಕಿ.ಮೀ. ದೂರದಲ್ಲಿದೆ. ಶತ ಶತಮಾನಗಳಿಂದ ಸರ್ಕಾರದ ಸೌಲಭ್ಯಗಳ ಕಡೆಗೆ ಹೆಚ್ಚು ಗಮನ ನೀಡದೆ, ಕೃಷಿ ಆಧಾರಿತ ಬದುಕು ಸಾಗಿಸುತ್ತಾ ಬಂದಿರುವ ಇವರ ಬದುಕನ್ನು, ಕಳೆದ 22 ವರ್ಷಗಳಿಂದ ಸರ್ಕಾರದ ಉದ್ದೇಶಿತ ಗುಂಡ್ಯಾ ಜಲ ವಿದ್ಯುತ್ ಯೋಜನೆ ಮೂರಾಬಟ್ಟೆಯನ್ನಾಗಿಸಿದೆ.ಗ್ರಾಮದ ಬಹುತೇಕ ಭೂಮಿ ಸ್ವಾಧೀನಪಡಿಸಿಕೊಂಡು ಯೋಜನೆಗೆ ಡ್ಯಾಂ ನಿರ್ಮಾಣ ಮಾಡುವ ಪ್ರಕ್ರಿಯೆ ಎರಡು ದಶಕಗಳಿಂದಲೂ ಮುಂದುವರೆದುಕೊಂಡೇ ಬಂದಿದೆ. ಆದರೆ, ಇದುವರೆಗೂ ಕೂಡ ಸರ್ವೆ ನಡೆಸಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯನ್ನು ನಿಗದಿಗೊಳಿಸಿಲ್ಲ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಯೋಜನೆಗೆ ಸಂಬಂಧಿಸಿ ಮೂರು ಸಾರ್ವಜನಿಕ ಸಭೆ ನಡೆದಿವೆ. ಯೋಜನೆ ವಿರೋಧಿಸಿ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ ದಂಪತಿಗಳು ಸಹ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮೇಲಿನ ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಗ್ರಾಮಸ್ಥರು ಗೊಂದಲಗೊಂಡಿದ್ದಾರೆ.ವಿರೋಧದ ನಡುವೆಯೂ ಸರ್ಕಾರ ಯೋಜನೆ ಮಾಡಿದರೆ ಎಲ್ಲಿಗೆ ಹೋಗುವುದು, ಮುಂದಿನ ಬದುಕು ಹೇಗೆ, ಹಲವು ದಶಕಗಳಿಂದ ನಿರ್ವಹಣೆ ಮಾಡಿಕೊಂಡು ಬಂದಿರುವ ಕಾಫಿ, ಏಲಕ್ಕಿ ತೋಟಗಳು, ಭತ್ತದ ಗದ್ದೆಗಳು, ಅಜ್ಜ ಮುತ್ತಜನ ಕಾಲದಲ್ಲಿ ಕಟ್ಟಲಾಗಿರುವ ಮಲೆನಾಡು ಶೈಲಿಯ ಮನೆಗಳನ್ನು ಬಿಟ್ಟು ಎಲ್ಲಿಗೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವುದು ಎಂಬ ಚಿಂತೆ ಕಳೆದ ಎರಡು ದಶಕಗಳಿಂದ ಗ್ರಾಮಸ್ಥರನ್ನು ಕಾಡುತ್ತಿದೆ.ಈ ಒಂದು ಚಿಂತೆಯಿಂದಾಗಿ ಗ್ರಾಮದ ರೈತರು ಹೊಸ ತೋಟಗಳನ್ನು ಮಾಡುತ್ತಿಲ್ಲ, ಇರುವ ತೋಟಗಳನ್ನು ನಿರ್ವಹಣೆ ಮಾಡದೆ ಹಾಳು ಬಿಡಲಾಗಿದೆ. ಈಗಲೋ ಆಗಲೋ ಬೀಳುವ ಹಂತದಲ್ಲಿ ಇರುವ ಮನೆಗಳಿಗೆ ಹಣ ವೆಚ್ಚ ಮಾಡಿ ದುರಸ್ಥಿಗೊಳಿಸುತ್ತಿಲ್ಲ. ಹೊಸ ಮನೆ ಕಟ್ಟುವ ಯೋಜನೆಯ ಕನಸ್ಸೂ ಕೂಡ ಅವರಲ್ಲಿ ಕರಗಿಹೋಗಿದೆ.ಸರ್ಕಾರ ಗುಂಡ್ಯಾ ಜಲ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆಯೋ ಬಿಡುತ್ತದೆಯೋ ಪ್ರಶ್ನೆ ಬೇರೆ ಆದರೆ, ಅಧಿಕಾರಿಗಳ ನಿರ್ಲಕ್ಷೆಯಿಂದಾಗಿ, 2 ದಶಕಗಳಿಂದ ಯೋಜನೆಯ ಸರ್ವೆಯನ್ನೇ ಪೂರ್ಣಗೊಳಿಸದೆ, ಯೋಜನೆಯ ರೂಪು ರೇಶೆಗಳ ಬಗ್ಗೆ ಒಂದು ಸ್ಪಷ್ಟ ಚಿತ್ರಣವನ್ನು ಗ್ರಾಮಸ್ಥರಿಗೆ ನೀಡದೆ ರೈತರ ಬದುಕಿನ ಜೊತೆಯಲ್ಲಿ ಚೆಲ್ಲಾಟ ಆಡಲಾಗುತ್ತಿದೆ ಎಂದು ಗ್ರಾಮದ ದುದ್ದುವಳ್ಳಿ ಪರಮೇಶ್ `ಪ್ರಜಾವಾಣಿ~ಗೆ ಹೇಳುತ್ತಾರೆ.ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ, ತಾಲ್ಲೂಕು ಕೇಂದ್ರದಿಂದ ಸಮಯಕ್ಕೆ ಸರಿಯಾದ ಬಸ್ಸು ಸಂಚಾರದ ವ್ಯವಸ್ಥೆ ಇಲ್ಲ, ಬಸ್ಸುಗಳ ಸಂಚಾರವಿದ್ದರೂ ವಾರದಲ್ಲಿ ನಾಲ್ಕು ದಿನ ಮಾರ್ಗದ ಮಧ್ಯದಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳು ಸಂಚಾರ ಮಾಡುತ್ತವೆ.ಸರ್ಕಾರದ ಯೋಜನೆ ಹಾಗೂ ಪ್ರಕೃತಿಯ ವೈಪರಿತ್ಯ ಇವುಗಳಿಂದಾಗಿ ಈ ಗ್ರಾಮಸ್ಥರ ಬದುಕು ಶೋಚನೀಯ ಸ್ಥಿತಿ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.