ಭಾನುವಾರ, ಆಗಸ್ಟ್ 25, 2019
28 °C

ಹೊಂಡಗಳ ರಸ್ತೆಯಲ್ಲಿ ಸಂಚಾರ ನರಕಯಾತನೆ

Published:
Updated:

ಬೆಳಗಾವಿ: ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ಜಲಾವೃತವಾದಂತೆ ಕಂಡುಬರುತ್ತಿವೆ. ಈ ರಸ್ತೆಗಳಲ್ಲಿ ವಾಹನ ಹಾಗೂ ಜನಸಂಚಾರ ಮಾಡುವುದೆಂದರೆ ನರಕಯಾತನೆ ಎಂಬಂತಾಗಿದೆ.ನಗರದ ಹಳೆಯ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ತಲೆ ಎತ್ತಿವೆ. ಅಷ್ಟೇನು ಹೇಳಿಕೊಳ್ಳುವಂಥ ಪ್ರಮಾಣದಲ್ಲಿ ಮಳೆ ಸುರಿಯದಿದ್ದರೂ, ನಿರಂತರವಾಗಿ ಆಗುತ್ತಿರುವುದರಿಂದ ನಗರದ ಬಹುತೇಕ ರಸ್ತೆಗಳೆಲ್ಲವೂ ಹಾನಿಗೀಡಾಗಿವೆ. ಕೆಲವು ಪ್ರದೇಶಗಳಲ್ಲಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಂತೆ ಕಂಡುಬರುತ್ತಿವೆ. ತೆರೆದ ಚರಂಡಿ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ನೀರು ರಸ್ತೆ ಮೇಲೆ ಹರಿಯುತ್ತಿದೆ.ಹಳೆಯ ಪಿಬಿ ರಸ್ತೆಯಲ್ಲಿ ಹೆಚ್ಚಿನ ಹೊಂಡಗಳು ತಲೆ ಎತ್ತಿವೆ. ವಡಗಾವಿ, ಶಹಾಪುರ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದರಿಂದ ಹೊಲಗದ್ದೆಯಂತೆ ಮಾರ್ಪಾಡಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಈ ರಸ್ತೆಯಲ್ಲಿ ನಿತ್ಯ ಸರ್ಕಸ್ ಮಾಡಲೇಬೇಕಾದ ಪರಿಸ್ಥಿತಿ ಇದೆ.ಹೊಂಡಗಳು ಉದ್ಭವಿಸಿದ್ದರಿಂದ ರಸ್ತೆಗೆ ಬಳಸಿದ್ದ ಜೆಲ್ಲಿ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿವೆ. ತಗ್ಗು ತುಂಬಲು ಬಳಸಿದ್ದ ಮಣ್ಣು ನೀರಿನಲ್ಲಿ ತೇಲಿ ಹೋಗಿದೆ. ದ್ವಿಚಕ್ರ ವಾಹನಗಳು ಮೇಲಿಂದ ಮೇಲೆ ಸ್ಕಿಡ್ ಆಗುತ್ತಿವೆ. ಅನೇಕ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳನ್ನು ಸಹ ಅನುಭವಿಸಿದ್ದಾರೆ.ನಗರದ ಶಹಾಪುರ, ವಡಗಾವಿ, ಮಾಧ್ವ ರಸ್ತೆ, ಖಾಸಬಾಗ್, ಗೋವಾವೇಸ್, ಮಾರುಕಟ್ಟೆ ಪ್ರದೇಶ ಸೇರಿದಂತೆ ನಗರದ ಬಹುತೇಕ ಪ್ರದೇಶಗಳ ರಸ್ತೆಗಳು ಹದಗೆಟ್ಟಿವೆ.ನಗರದ ರಸ್ತೆಗಳ ಪರಿಸ್ಥಿತಿ ಒಂದಡೆಯಾದರೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ರಸ್ತೆಗಳ ಸ್ಥಿತಿ ಹೇಳತೀರದು. ಕಾಕತಿ ವೇಸ್‌ದಿಂದ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಚವಾಟ್ ಗಲ್ಲಿ ರಸ್ತೆಯಲ್ಲೂ ಹೊಂಡಗಳದ್ದೇ ಕಾರುಬಾರು. ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ಅವುಗಳಿಗೆ ಶಾಶ್ವತ ಮುಕ್ತಿ ಸಿಕ್ಕಿಲ್ಲ.`ಸಂಬಂಧಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲವಿದ್ದಿದ್ದರಿಂದ ರಸ್ತೆಯಲ್ಲಿ ಉದ್ಭವಿಸಿರುವ ತಗ್ಗುಗಳು ಎದ್ದು ಕಾಣುತ್ತಿವೆ. ಈ ರಸ್ತೆ ಡಾಂಬರು ಕಂಡು ವರ್ಷಗಳೇ ಆಗಿವೆ. ಆದರೂ ಯಾರೂ ಈ ಕಡೆಗೆ ಗಮನ ಹರಿಸಿಲ್ಲ' ಎನ್ನುತ್ತಾರೆ ಹಳೆ ಪಿಬಿ ರಸ್ತೆ ಬದಿಯ ವ್ಯಾಪಾರಿ ತೌಫಿಕ್.`ನಗರದ ಬಹೇತಕ ರಸ್ತೆಗಳಲ್ಲಿ ಹೊಂಡಗಳದ್ದೇ ಕಾರುಬಾರು. ಮಳೆ ಬಾರದ ಸಂದರ್ಭದಲ್ಲೂ ತಗ್ಗುಗಳನ್ನು ಸರಿಯಾಗಿ ಮುಚ್ಚದ ಕಾರಣ ಈ ಸಮಸ್ಯೆ ಮೇಲಿಂದ ಮೇಲೆ ಉದ್ಭವಿಸುತ್ತಿದೆ. ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ನಿತ್ಯ  ಸರ್ಕಸ್ ಮಾಡಲೇಬೇಕು. ನಿಯಂತ್ರಣ ತಪ್ಪಿದರೆ ಅನಾಹುತ ಗ್ಯಾರಂಟಿ' ಎಂದು ಆಟೊರಿಕ್ಷಾ ಚಾಲಕರೊಬ್ಬರು ಹೇಳುತ್ತಾರೆ.

Post Comments (+)