ಹೊಂದಾಣಿಕೆ ಮೂಲಕ ರಾಷ್ಟ್ರಪತಿ ಆಯ್ಕೆ: ಡಿ.ರಾಜಾ ಸಲಹೆ

6

ಹೊಂದಾಣಿಕೆ ಮೂಲಕ ರಾಷ್ಟ್ರಪತಿ ಆಯ್ಕೆ: ಡಿ.ರಾಜಾ ಸಲಹೆ

Published:
Updated:

ಬೆಂಗಳೂರು: ರಾಜಕೀಯ ಪಕ್ಷಗಳು ಹೊಂದಾಣಿಕೆ ಮೂಲಕ ಹೆಚ್ಚು ಜನರಿಗೆ ಒಪ್ಪಿಗೆಯಾಗುವಂತಹ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆಯ ಕಣಕ್ಕೆ ಇಳಿಸುವುದನ್ನು ಎಡ ಪಕ್ಷಗಳು ಬೆಂಬಲಿಸುತ್ತವೆ ಎಂದು ಭಾರತ್ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಕಾರ್ಯದರ್ಶಿ ಡಿ.ರಾಜಾ ತಿಳಿಸಿದರು.ನಗರದ ಮಲ್ಲೇಶ್ವರದಲ್ಲಿರುವ ಸಿಪಿಐ ರಾಜ್ಯ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಷ್ಟ್ರಪತಿ ಹುದ್ದೆಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಸಹಮತಕ್ಕೆ ಬರಬೇಕು. ಈ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯಾಗುವವರು ಹೆಚ್ಚು ಜನರಿಗೆ ಒಪ್ಪಿಗೆ ಆಗುವಂತಿದ್ದರೆ ಒಳಿತು. ಇಂತಹ ಪ್ರಯತ್ನವನ್ನೇ ಸಿಪಿಐ ನಿರೀಕ್ಷಿಸುತ್ತದೆ~ ಎಂದರು.ರಾಜಕೀಯೇತರ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕೆಂಬ ಕೆಲವರ ಬೇಡಿಕೆಯನ್ನು ಸ್ಪಷ್ಟವಾಗಿ ವಿರೋಧಿಸಿದ ಅವರು, `ರಾಷ್ಟ್ರಪತಿ ಹುದ್ದೆಯೇ ರಾಜಕೀಯ ಸ್ಥಾನ. ಹೀಗಿರುವಾಗ ರಾಜಕೀಯೇತರ ವ್ಯಕ್ತಿಯನ್ನು ಈ ಹುದ್ದೆಗೆ ಆಯ್ಕೆ ಮಾಡುವುದರಲ್ಲಿ ಏನು ಅರ್ಥವಿದೆ? ರಾಷ್ಟ್ರಪತಿ ದೇಶದ ಸಂವಿಧಾನದ ರಕ್ಷಕ. ಈ ಹುದ್ದೆಗೆ ಆಯ್ಕೆಯಾಗುವವರು ರಾಜಕೀಯ ಅನುಭವ ಹೊಂದಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ. ಅಷ್ಟಕ್ಕೂ ಭಾರತದಲ್ಲಿ ಯಾರನ್ನೂ `ರಾಜಕೀಯೇತರ~ ಎಂದು ಗುರುತಿಸಲು ಸಾಧ್ಯವೇ ಇಲ್ಲ~ ಎಂದರು.ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, `ಈಗ ಚಾಲ್ತಿಯಲ್ಲಿರುವ ಎಲ್ಲ ಹೆಸರುಗಳ ಬಗ್ಗೆಯೂ ನಾವು ಪರಿಶೀಲಿಸುತ್ತಿದ್ದೇವೆ. ಹೊಂದಾಣಿಕೆಯ ಮೂಲಕ ಆಯ್ಕೆಯಾಗಲಿ ಎಂಬುದು ನಮ್ಮ ಆಶಯ. ವಿರೋಧ ಪಕ್ಷದ ಸಾಲಿನಲ್ಲಿರುವ ಜಾತ್ಯತೀತ ಪಕ್ಷಗಳ ಜೊತೆ ಈ ಸಂಬಂಧ ಸಿಪಿಐ ನಿರಂತರ ಸಂಪರ್ಕದಲ್ಲಿದೆ. ಯುಪಿಎ ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಹೊಂದಾಣಿಕೆ ಮೂಲಕ ರಾಷ್ಟ್ರಪತಿ ಹುದ್ದೆ ಭರ್ತಿಮಾಡುವ ಪ್ರಯತ್ನ ನಡೆಸಬೇಕು~ ಎಂದರು.ರಾಷ್ಟ್ರವ್ಯಾಪಿ ಚಳವಳಿ: `ಆಹಾರ ಹಕ್ಕು ಮಸೂದೆ ಮಂಡನೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಚಳವಳಿ ನಡೆಸಲು ಎಡಪಕ್ಷಗಳು ನಿರ್ಧರಿಸಿವೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲೇ ಮಸೂದೆ ಮಂಡಿಸಬೇಕು ಎಂಬುದು ನಮ್ಮ ಬೇಡಿಕೆ. ಆಂದೋಲನದ ರೂಪುರೇಷೆ ಸಿದ್ಧಪಡಿಸಲು ಮೇ ಮೂರನೇ ವಾರ ಎಡಪಕ್ಷಗಳ ಮುಖಂಡರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚಳವಳಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು~ ಎಂದರು.ಬಡತನ ರೇಖೆ: ಯುಪಿಎ ಸರ್ಕಾರ ಪಡಿತರ ವಿತರಣೆಯಲ್ಲಿ ನೇರ ಸಹಾಯಧನ ನೀಡುವ ನೆಪದಲ್ಲಿ ಜನಸಾಮಾನ್ಯರ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಕೇಂದ್ರ ಯೋಜನಾ ಆಯೋಗ ಮಂಡಿಸುತ್ತಿರುವ ಬಡತನ ರೇಖೆಯ ಪರಿಕಲ್ಪನೆಯೇ ಅವಾಸ್ತವಿಕವಾದುದು. ದೇಶದಲ್ಲಿ ಎಲ್ಲರಿಗೂ ಪಡಿತರ ದೊರೆಯಬೇಕು. ಅದನ್ನು ಸಾಧ್ಯವಾಗಿಸುವಂತಹ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದರು.ಎಲ್ಲರಿಗೂ ಪಡಿತರ ನೀಡಿದರೆ ದುರ್ಬಳಕೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ, `ಶ್ರೀಮಂತರು ಪಡಿತರ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬ ನಂಬಿಕೆ ನಮ್ಮದು. ಟಾಟಾ, ಬಿರ್ಲಾರಂತಹವರು ಸರದಿಯಲ್ಲಿ ನಿಂತು ಪಡಿತರ ಪಡೆಯುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ~ ಎಂದರು.ಭರವಸೆಗಳನ್ನು ಈಡೇರಿಸಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಕಾರ ಸ್ವೀಕರಿಸಿ ವರ್ಷ ಪೂರೈಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ರಾಜಾ, `ಅವರು ಒಂದು ವರ್ಷದ ಅವಧಿಯಲ್ಲಿ ನೀಡಿದ ಕೆಲ ಹೇಳಿಕೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಂತಹ ನಡವಳಿಕೆಗಳ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಮಮತಾ ಅವರು ಮೊದಲು ಆಡಳಿತದ ಕಡೆ ಗಮನ ಹರಿಸಬೇಕು~ ಎಂದರು. ಪಶ್ಚಿಮ ಬಂಗಾಳಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಮಮತಾ ಬೇಡಿಕೆ ಬಗ್ಗೆ ಗಮನ ಸೆಳೆದಾಗ, `ರಾಜ್ಯಗಳಿಂದ ಸಂದಾಯವಾಗುವ ತೆರಿಗೆ ಮೊತ್ತದಲ್ಲಿ ಹೆಚ್ಚಿನ ಪಾಲು ನೀಡುವಂತೆ ರಾಜ್ಯ ಸರ್ಕಾರಗಳು ಒತ್ತಾುಸುವುದು ಸಹಜ. ಪಶ್ಚಿಮ ಬಂಗಾಳ ಮಾತ್ರವಲ್ಲ, ಬಿಹಾರ, ತಮಿಳುನಾಡು ಕೂಡ ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಿವೆ~ ಎಂದರು.ಪರ್ಯಾಯ ಅಗತ್ಯ: ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಈಗ ಹಿಂದಿಗಿಂತಲೂ ಹೆಚ್ಚಿದೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ವಿರೋಧ ಪಕ್ಷವಾದ ಬಿಜೆಪಿ ಆಂತರಿಕ ಬೇಗುದಿಗಳಿಂದಲೇ ಅಸ್ಥಿರತೆ ಎದುರಿಸುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry