ಹೊಂಬೆಳಕಿನಲ್ಲಿ ಅರಳಿದ ಮಕ್ಕಳ `ಚಿತ್ರ'ಕಲೆ

5

ಹೊಂಬೆಳಕಿನಲ್ಲಿ ಅರಳಿದ ಮಕ್ಕಳ `ಚಿತ್ರ'ಕಲೆ

Published:
Updated:

ಬೆಳಗಾವಿ: ಮುಂಜಾನೆಯ ಹೊಂಬೆಳಕಿನಲ್ಲಿ ಒಂದೆಡೆ ಜಿಂಕೆ ಮರಿಗಳು ಅತ್ತಿಂದಿತ್ತ ಜಿಗಿದಾಡುತ್ತಿದ್ದರೆ, ಇನ್ನೊಂದೆಡೆ ಚೋಟಾ ಭೀಮ ತನ್ನ ಸ್ನೇಹಿತರೊಂದಿಗೆ ಚೇಷ್ಠೆಯಲ್ಲಿ ತೊಡಗಿದ್ದನು. ಮತ್ತೊಂದೆಡೆ ಆನೆಯ ಮೋಜಿನಾಟ, ಪೈಲ್ವಾನರ ನಡುವೆ ಕುಸ್ತಿಯಾಟ!



ಹೌದು, ನಗರದ `ವ್ಯಾಕ್ಸಿನ್ ಡಿಪೋ'ದಲ್ಲಿ ಭಾನುವಾರ ಮುಂಜಾನೆ ಹೀಗೆ ಬಗೆ ಬಗೆಯ ಆಕರ್ಷಕ ದೃಶ್ಯಗಳ ಜೊತೆಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಭವ್ಯ ಮೆರವಣಿಗೆಯ ದೃಶ್ಯವೂ ಅಲ್ಲೇ ಕಾಣಿಸಿಕೊಂಡಿತು!



ಬೆಳಗಾವಿ ನಗರದ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ ಶಾಸಕ ಅಭಯ ಪಾಟೀಲ ಭಾನುವಾರ ಏರ್ಪಡಿಸಿದ್ದ ಬೃಹತ್ ಚಿತ್ರಕಲಾ ಸ್ಪರ್ಧೆಯಲ್ಲಿ ಇಂಥ ಹಲವು ದೃಶ್ಯಗಳು ಒಂದೇ ಕಡೆ ನೋಡಲು ಸಿಕ್ಕವು. ವ್ಯಾಕ್ಸಿನ್ ಡಿಪೋದ ಮರಗಳ ನೆರಳಿನಲ್ಲಿ ಕುಳಿತಿದ್ದ ಮಕ್ಕಳ ಮನದೊಳಗೆ ಮೂಡುತ್ತಿದ್ದ ಕಲ್ಪನೆಗಳು, ಬಿಳಿ ಹಾಳೆಯ ಮೇಲೆ ಮೂರ್ತ ರೂಪ ಪಡೆದುಕೊಳ್ಳುತ್ತಿದ್ದವು.



ನಗರದ ಸುಮಾರು 160 ಶಾಲೆಗಳ ಸುಮಾರು 16,700 ಮಕ್ಕಳು ತಮ್ಮ ಚಿತ್ರಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕ್ರಯೊನ್, ಜಲ ವರ್ಣ, ಸ್ಕೆಚ್ ಪೆನ್, ಪೆನ್ಸಿಲ್‌ಗಳನ್ನು ಬಳಸಿ ಮಕ್ಕಳು ವೈವಿಧ್ಯಮಯ, ಸುಂದರ ಚಿತ್ರಗಳನ್ನು ಬಿಡಿಸಿದರು. ತಮ್ಮಳಗಿದ್ದ ಚಿತ್ರಕಲೆ ಪ್ರತಿಭೆಯನ್ನು ಅರಳಿಸಿ, ಅದರ ಸುಗಂಧವನ್ನು ವ್ಯಾಕ್ಸಿನ್ ಡಿಪೋದ ಸುತ್ತಲೂ ಪಸರಿಸಿದರು.



ಒಂದನೇ ತರಗತಿಯವರಿಗೆ ಚೋಟಾ ಭೀಮ ಸ್ನೇಹಿತರೊಂದಿಗೆ ಇರುವ ದೃಶ್ಯ, 2ನೇ ತರಗತಿಯವರಿಗೆ ಹುಲ್ಲುಗಾವಲಿನಲ್ಲಿ ಜಿಂಕೆ ವಿಹರಿಸುತ್ತಿರುವ ದೃಶ್ಯ, 3ನೇ ತರಗತಿಗೆ ಪೊಲೀಸರು ಟ್ರಾಫಿಕ್ ನಿಯಂತ್ರಿಸುತ್ತಿರುವುದು ಹಾಗೂ 4ನೇ ತರಗತಿಗೆ ಹಾವಾಡಿಗನ ವಿಷಯದ ಮೇಲೆ ಚಿತ್ರ ಬಿಡಿಸಲು ನೀಡಲಾಗಿತ್ತು.



ಐದನೇ ತರಗತಿಗೆ ಕಾಡಿನಲ್ಲಿ ಆನೆಯ ವಿಹರಿಸುತ್ತಿರುವುದು, 6ನೇ ತರಗತಿಗೆ ಕುಸ್ತಿಯನ್ನು ಜನರು ವೀಕ್ಷಿಸುತ್ತಿರುವುದು, 7ನೇ ತರಗತಿಗೆ ಗೊಂಬೆಯಾಟವನ್ನು ಜನ ವೀಕ್ಷಿಸುವುದು, 8ನೇ ತರಗತಿಗೆ ಹುತಾತ್ಮರಾದ ಭಗತ್‌ಸಿಂಗ್, ಸುಖದೇವ ಹಾಗೂ ರಾಜಗುರು ಜೊತೆಯಲ್ಲಿರುವುದು, 9ನೇ ತರಗತಿಗೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ ಅಥವಾ ಯಕ್ಷಗಾನ ನೃತ್ಯದ ದೃಶ್ಯ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ದಾಂಡಿಯಾ ನೃತ್ಯ ಅಥವಾ ಎತ್ತಿನಗಾಡಿ ಸ್ಪರ್ಧೆಯ ದೃಶ್ಯ ವಿಷಯದ ಮೇಲೆ ಚಿತ್ರ ಬಿಡಿಸಲು ನೀಡಲಾಗಿತ್ತು.



`ಮಕ್ಕಳಲ್ಲಿರುವ ಚಿತ್ರಕಲಾ ಪ್ರತಿಭೆಯನ್ನು ಹೊರಹಾಕಲು ಶಾಸಕ ಅಭಯ ಪಾಟೀಲರು ಪ್ರತಿ ವರ್ಷ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಳೆದ ವರ್ಷ 14 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವರ್ಷ 16,700 ವಿದ್ಯಾರ್ಥಿಗಳು ಪಾಲ್ಗೊಂಡು ಚಿತ್ರವನ್ನು ಬಿಡಿಸಿದರು. ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ' ಎಂದು ಸ್ಪರ್ಧೆಯ ಸಂಯೋಜಕರಾಗಿದ್ದ ಸಂಜಯ ಸವ್ವಾಶೇರಿ ತಿಳಿಸಿದರು.



`ಸ್ಪರ್ಧೆಯಲ್ಲಿ ಒಟ್ಟು 12 ಚಿತ್ರಗಳಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಮಕ್ಕಳ ಭಾವಚಿತ್ರದೊಂದಿಗೆ 2013ರ ಕ್ಯಾಲೇಂಡರ್ ನಿರ್ಮಿಸಲಾಗುತ್ತದೆ.  ಸುಮಾರು 12   ಸಾವಿರ ಪ್ರತಿಗಳನ್ನು ಮುದ್ರಿಸಿ, ರಾಜ್ಯದ ವಿವಿಧ ಶಾಲೆ, ಸಂಸ್ಥೆಗಳಿಗೆ ವಿತರಿಸಲಾಗುತ್ತದೆ' ಎಂದು ಅವರು ಮಾಹಿತಿ ನೀಡಿದರು.



ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಗೂ ಶಾಸಕ ಅಭಯ ಪಾಟೀಲ ಉದ್ಘಾಟಿಸಿದರು. ಬಿಜೆಪಿ ಯುವ ಘಟಕದ ಅಧ್ಯಕ್ಷ ದೀಪಕ್ ಜಮಖಂಡಿ, ಮಾಜಿ ಉಪಮೇಯರ್ ಧನರಾಜ ಗವಳಿ, ಸ್ಪರ್ಧೆಯ ಸಂಯೋಜಕ ಅಜಯ ಹೆಡಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry