ಹೊಗೆಸೊಪ್ಪು ಬೆಲೆ ಕುಸಿತ: ಬೆಳೆಗಾರ ಕಂಗಾಲು

7

ಹೊಗೆಸೊಪ್ಪು ಬೆಲೆ ಕುಸಿತ: ಬೆಳೆಗಾರ ಕಂಗಾಲು

Published:
Updated:

ವಿಶೇಷ ವರದಿ

ರಾಮನಾಥಪುರ:
ಇಲ್ಲಿನ ತಂಬಾಕು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಬೆಲೆ ದಿನೇ ದಿನೇ ಕುಸಿಯುತ್ತಿದ್ದು,  ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಪ್ರಾರಂಭದಿಂದಲೂ ಇಲ್ಲಿನ ಎರಡು ಪ್ಲಾಟ್ ಫಾರಂನ ಮಾರುಕಟ್ಟೆಗಳಲ್ಲಿ ಹೊಗೆಸೊಪ್ಪಿನ ಬೆಲೆ ಕುಸಿತ ಕಂಡಿದೆ. ಉತ್ಕೃಷ್ಟ ದರ್ಜೆಯ ತಂಬಾಕು ಒಂದು ಕೆ.ಜಿಗೆ ಕೇವಲ 100 ರೂಪಾಯಿ ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ. ಇನ್ನು ಮಧ್ಯಮ ಹಾಗೂ ಕಳಪೆ ದರ್ಜೆ ಹೊಗೆಸೊಪ್ಪಿನ ಬೆಲೆಯನ್ನು ಭಾರಿ ಕುಸಿತ ಕಂಡಿದೆ. ಎರಡು ವರ್ಷ ಹಿಂದೆ ಇದೇ ಮಾದರಿಯ ವರ್ಜಿನಿಯಾ ಹೊಗೆಸೊಪ್ಪು ಕೆ.ಜಿ.ಗೆ 150 ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು.ಹೊಗೆಸೊಪ್ಪು ಬೆಳೆದರೆ ಹೆಚ್ಚು ಆದಾಯ ನೋಡಬಹುದು ಎಂಬ ಆಶಾಭಾವನೆಯಿಂದ 6 ತಿಂಗಳಿನಿಂದ ಅಪಾರ ಹಣವನ್ನು ವ್ಯಯಿಸಿ, ಕಷ್ಟಪಟ್ಟು ತಂಬಾಕು ಬೆಳೆದರೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇಲ್ಲದೇ ನಿರಾಸೆ ಮೂಡಿಸಿ, ರೈತರು ಸಾಲದ ಶೂಲದಲ್ಲೇ ಉಳಿಯುವಂತಾಗಿದೆ.ಹೊಗೆಸೊಪ್ಪಿನ ಬೆಲೆ ಕುಸಿತ ಕಂಡಿರುವುದು ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ಬಂದರೂ ಸಮಸ್ಯೆ ಸರಿಪಡಿಸಲು ಮುಂದಾಗಿಲ್ಲ. ಹರಾಜು ಪ್ರಾರಂಭವಾದ ದಿನ ಶಾಸಕ ಎ. ಮಂಜು ಅವರ ಎದುರೇ ರೈತರು ಪ್ರತಿಭಟನೆ ನಡೆಸಿದ್ದರು. ಆಗ ಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು ಬೆಲೆ ಏರಿಕೆಗೆ ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಕೇವಲ ರೈತರ ಕಣ್ಣೊರೆಸುವ ತಂತ್ರ. ಬೆಲೆ ಏರಿಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂದರೆ ಮಾತ್ರ ಬೆಲೆ ಏರಿಕೆ ಆಗಬಹುದು ಎಂದು ಮಂಡಳಿಯ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ ವಾಸ್ತವ ಸಮಸ್ಯೆಯನ್ನು ಬಗೆಹರಿಸಲು ಯಾರೊಬ್ಬರೂ ಪ್ರಯತ್ನಿಸಲು. ಇದರಿಂದ ಕಷ್ಟಪಟ್ಟು ಹೊಗೆಸೊಪ್ಪು ಬೆಳೆದವರು ಸಾಲದ ಸುಳಿಗೆ ಸಿಲುಕಿ ನರಳಬೇಕಾಗಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಮೂರು ಎಕರೆಯಲ್ಲಿ ಹೊಗೆಸೊಪ್ಪು ನಾಟಿ ಮಾಡಿ ಕಟಾವಿನ ಹಂತಕ್ಕೆ ಬರುವವರೆಗೆ ರೂ. 2 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದೆ. ಬೇಲ್‌ಗಳನ್ನು ಸಿದ್ದಪಡಿಸಿಕೊಂಡು ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಸಾಕಾಗಿದೆ. ಆದರೆ, ಮಾರುಕಟ್ಟೆಯಲ್ಲಿ ವರ್ತಕರು ಬೇಕಾಬಿಟ್ಟಿ ಬೆಲೆಗೆ ಖರೀದಿಸುತ್ತಿದ್ದಾರೆ. ಹೊಗೆಸೊಪ್ಪು ಉತ್ಪಾದಿಸಿದ ರೈತರ ಸಂಕಷ್ಟವನ್ನು ಇಲ್ಲಿ ಕೇಳುವವರೇ ಇಲ್ಲ~ ಎಂದು ಬೇಲ್‌ಗಳನ್ನು ಮಾರಾಟಕ್ಕೆ ತಂದಿದ್ದ ರೈತರೊಬ್ಬರು ಅಳಲು ತೊಡಿಕೊಂಡರು. ಇಂದಲ್ಲ- ನಾಳೆ ಬೆಲೆ ಚೇತರಿಕೆ ಆಗಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry