ಹೊಗೆಸೊಪ್ಪು ಬೆಳೆಗಾರರ ಸಭೆಯಲ್ಲಿ ಗದ್ದಲ

7

ಹೊಗೆಸೊಪ್ಪು ಬೆಳೆಗಾರರ ಸಭೆಯಲ್ಲಿ ಗದ್ದಲ

Published:
Updated:

ರಾಮನಾಥಪುರ: ಹೊಗೆಸೊಪ್ಪು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸುವ ಸಂಬಂಧ ತಾಲ್ಲೂಕು ರೈತ ಸಂಘ ಹಾಗೂ ಬೆಳೆಗಾರರ ಒಕ್ಕೂಟ ವತಿಯಿಂದ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಕೆಲ ರೈತರ ನಡುವೆ ಪರ ಮತ್ತು ವಿರೋಧ ವ್ಯಕ್ತವಾಗಿ ಗದ್ದಲ ಉಂಟಾದ ಕಾರಣ ಸಭೆ ವಿಫಲಗೊಂಡಿತು.ತಂಬಾಕು ಮಂಡಳಿ ಕಚೇರಿ ಆವರಣ ದಲ್ಲಿ ನಡೆದ ಸಭೆಯಲ್ಲಿ ಪ್ರಾರಂಭದಲ್ಲಿ ತಾಲ್ಲೂಕು ರೈತ ಸಂಘದ ಮುಖಂಡ ಹೊ.ತಿ. ಹುಚ್ಚಪ್ಪ ಅವರು ಶಾಸಕರು ಹಾಗೂ ರಾಜಕಾರಣಿಗಳ ಪರವಾಗಿ ಯಾರಾದರೂ ಸಭೆಗೆ ಬಂದಿದ್ದರೆ ಎದ್ದು ನಿಂತು ಸಲಹೆ ನೀಡಬಹುದು ಎಂದು ಕೋರಿದರು. ಇದರಿಂದ ಕೆರಳಿದ ಕೆಲ ರೈತರು ತಂಬಾಕು ಉತ್ಪಾದಿಸಿ ಸಂಕಷ್ಟಕ್ಕೆ ಒಳಗಾಗಿರುವ ಬೆಳೆಗಾರರ ಸಮಸ್ಯೆಗೆ ಇದುವರೆಗೂ ಸ್ಪಂದಿಸದ ಜನಪ್ರತಿನಿಧಿ ಗಳು ಹಾಗೂ ರಾಜಕಾರಣಿಗಳ ಹೆಸರನ್ನು ಇಲ್ಲಿ ಪ್ರಸ್ತಾಪಿಸಕೂಡದು ಎಂದು ಆಕ್ಷೇಪಿಸಿ ಸಭೆಗೆ ಆಗಮಿಸಿದ್ದ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡರ ವಿರುದ್ದ ಹರಿ ಹಾಯ್ದದರು. ತಕ್ಷಣ ಎದ್ದು ನಿಂತು ನಾನು ಇಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ. ಹೊಗೆಸೊಪ್ಪು ಬೆಳೆಗಾರನಾಗಿ ಆಗಮಿಸಿದ್ದೇನೆ ಎಂದು ಭೈರೇಗೌಡರು ಸಮಜಾಯಿಷಿ ನೀಡಿದರು.ನಂತರ ಮತ್ತೆ ಮಾತು ಮುಂದು ವರಿಸಿದ ಹೊ.ತಿ. ಹುಚ್ಚಪ್ಪ ಅವರು ತಂಬಾಕು ಉತ್ಪಾದನೆಗೆ ತಗಲುವ ವೆಚ್ಚದ ವಿವರವನ್ನು ನೀಡುವಂತೆ ರೈತರಲ್ಲಿ ಕೇಳಿದರು. ಇದರಿಂದ ಮತ್ತೆ ಕೋಪಗೊಂಡ ಕೆಲ ರೈತರು ಈಗ ಬೆಲೆ ಕುಸಿತದ ಬಗ್ಗೆ ಚರ್ಚಿಸಿ ಎಂದು ಪಟ್ಟಹಿಡಿದರು. ಇದಕ್ಕೆ ಕೆಲವು ರೈತರು ಮಾರುಕಟ್ಟೆಯಲ್ಲಿ ಇದೀಗ ಉತ್ತಮ ಬೆಲೆ ಸಿಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿ, ಹುಚ್ಚಪ್ಪ ಅವರ ಕೈಯಲ್ಲಿದ್ದ ಮೈಕ್ ಕಿತ್ತುಕೊಳ್ಳಲು ಮುಂದಾದರು. ಹೀಗಾಗಿ ಸಭೆಯಲ್ಲಿ ಗೊಂದಲ ವಾತಾವರಣ ಸೃಷ್ಟಿ ಯಾಯಿತು.ಇತ್ತ ರೈತರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇನ್ನೊಂದೆಡೆ ಹರಾಜು ಅಧೀಕ್ಷಕರಾದ ಉಮಾ ಮಹೇಶ್ವರ ರಾವ್, ಕೆ.ವಿ.ಎಸ್.         ತಲ್ಫ್‌ಶಾಹಿ ಅವರು ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಣಕೀಕೃತ ಹರಾಜು ವ್ಯವಸ್ಥೆಯಿಂದಾಗಿ ತಂಬಾಕಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಿದೆ. ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಸಮಾಧಾನ ಪಡಿಸಲು ಯತ್ನಿಸಿದರು.ಕಡೆಗೂ ರೈತರ ನಡುವೆ ಒಮ್ಮತದ ಅಭಿಪ್ರಾಯಗಳು ಮೂಡದೇ ಗೊಂದಲ ಶಮನಗೊಳ್ಳದ ಕಾರಣ ಕೆಲವೇ ನಿಮಿಷಗಳಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.ಭೇಟಿ: ರಾಮನಾಥಪುರ ತಂಬಾಕು ಮಾರುಕಟ್ಟೆಗೆ ಗುರುವಾರ ಕೇಂದ್ರ ತಂಬಾಕು ಮಂಡಳಿ ಅಧ್ಯಕ್ಷ ಸಿ.ವಿ. ಸುಬ್ಬಾರಾವ್, ಹರಾಜು ವ್ಯವಸ್ಥಾಪಕ ವಿ. ಕನ್ನಯ್ಯ, ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ವೇಣುಗೋಪಾಲ್ ಭೇಟಿ ನೀಡಿ ಗಣಕೀಕೃತ ಹರಾಜು ವ್ಯವಸ್ಥೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಆಗಮಿಸಿದ ತಾಲ್ಲೂಕು ರೈತ ಸಂಘ ಮುಖಂಡ ಹೊ.ತಿ. ಹುಚ್ಚಪ್ಪ, ಕಾರ್ಯಾಧ್ಯಕ್ಷ ಜಗದೀಶ್ ಮತ್ತಿತರರು ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕೇಂದ್ರ ತಂಬಾಕು ಮಂಡಳಿ ಅಧ್ಯಕ್ಷ ಸಿ.ವಿ. ಸುಬ್ಬಾರಾವ್ ಅವರಿಗೆ ಮನವಿ ಅರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry