ಶುಕ್ರವಾರ, ಮೇ 14, 2021
31 °C

ಹೊಟ್ಟು-ಮೇವು ಕೊರತೆ: ಜಾನುವಾರು ಮಾರಾಟ

ಪ್ರಜಾವಾಣಿ ವಾರ್ತೆ /ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಜಾನುವಾರು ಸಂತೆಯಲ್ಲಿ ದನಕರುಗಳ ವ್ಯಾಪಾರ ಬಲು ಜೋರು..!ಹಾಗೆಂದು ಜಾನುವಾರು ಮಾರಾಟ ಮಾಡುವವರು ಕಾಯಂ ವ್ಯಾಪಾರಿಗಳಲ್ಲ. ಹಾಗಂತ ಆಕಳು, ಎಮ್ಮೆ, ಎತ್ತು, ಕುರಿ ಕೋಣಗಳನ್ನು ಕೊಳ್ಳುವುದೂ ಇಲ್ಲ. ತಾವು ತಂದ ಜಾನುವಾರುಗಳನ್ನು ಸಂತೆಯಲ್ಲಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಭಾರವಾದ ಮನಸ್ಸಿನಿಂದ ಮನೆಗೆ ಹೋಗುವ ರೈತರು. ಈ ವಾರ ಅಂಥ ನೋವಿನ ವಾತಾವರಣ ಜಾನುವಾರು ಸಂತೆಯಲ್ಲಿ ಸಾಮಾನ್ಯವಾಗಿತ್ತು.ಕಳೆದ ಎರಡು ವರ್ಷಗಳಿಂದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆ ಬಾರದೆ ರೈತರು ಬರಗಾಲದ ಪರಿಸ್ಥಿತಿ ಎದುರಿಸಿದರು. ಅದರ ಪರಿಣಾಮವಾಗಿ ಹೊಟ್ಟು- ಮೇವಿಗೆ ತತ್ವಾರ ಶುರುವಾಯಿತು. ದನ ಕರುಗಳ ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.ತಾಲ್ಲೂಕಿನಲ್ಲಿ 72,480 ಜಾನುವಾರು ಹಾಗೂ ಸುಮಾರು 1.35 ಲಕ್ಷ ಕುರಿ ಮತ್ತು ಮೇಕೆಗಳಿವೆ. ರೈತನ ಕೃಷಿ ಕಾರ್ಯಗಳಲ್ಲಿ ಜಾನುವಾರುಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ಹೀಗಾಗಿ ಜಾನುವಾರುಗಳ ಸಂರಕ್ಷಣೆಯೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆದರೆ ತಾಲ್ಲೂಕಿನಲ್ಲಿ ಎರಡು ವರ್ಷದಿಂದ ಮೇವಿನ ಉತ್ಪಾದನೆ ಗಣನೀಯವಾಗಿ ಕಡಿಮೆ ಆಗಿದ್ದರಿಂದ ಸಮಸ್ಯೆ ಉಲ್ಬಣಗೊಂಡಿದೆ.ಜಾನುವಾರುಗಳ ನಿರ್ವಹಣೆ ಅನ್ನದಾತನಿಗೆ ಕಷ್ಟವಾಗಿದೆ. ಹೀಗಾಗಿ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಜಾನುವಾರು ಮಾರಾಟ ಮಾಡುವಂತಾಗಿದೆ ಎನ್ನುತ್ತಾರೆ ರೈತರಾದ ಹನಮಪ್ಪ ಮಾರಳ್ಳಿ, ಮುದಕಪ್ಪ ಕರಡಿಗುಡ್ಡ.ಮೇವು ಉತ್ಪಾದನೆ ಕ್ಷೀಣ: ಸದ್ಯ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಸುಮಾರು 2.25 ಲಕ್ಷ ಟನ್ ಮೇವು ಬೇಕು. ಮಳೆಯ ಅಭಾವದಿಂದಾಗಿ ಕಳೆದ ವರ್ಷ ಕೇವಲ 1.25 ಲಕ್ಷ ಟನ್ ಮೇವು ಉತ್ಪಾದನೆಯಾಗಿದೆ. ಇದರಿಂದಾಗಿ ರೈತರು ರೂ 60 ಸಾವಿರ ಮೌಲ್ಯದ ಎತ್ತುಗಳನ್ನು ರೂ 15ರಿಂದ 20 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.ತಾಲ್ಲೂಕಿನ ಬರ ಸ್ಥಿತಿ ಸಂದರ್ಭದಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮೇವು ಬ್ಯಾಂಕ್ ಸ್ಥಾಪಿಸಬೇಕು. ಕನಿಷ್ಠ 2.25 ಲಕ್ಷ ಟನ್ ಮೇವು ಒದಗಿಸಬೇಕು ಎಂದು ತಾಲ್ಲೂಕು ಪಶು ಸಂಗೋಪನಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಸರ್ಕಾರಿ ಮೇವು ಬ್ಯಾಂಕ್ ತೆರೆಯದ ಕಾರಣ ಜಾನುವಾರುಗಳ ನಿರ್ವಹಣೆ ಕಷ್ಟವಾಗಿದೆ.ಹೊಟ್ಟು- ಮೇವಿನ ಕೊರತೆ ಒಂದೆಡೆಯಾದರೆ ಮೇವಿನ ದರದಲ್ಲಿನ ದಿಢೀರ್ ಹೆಚ್ಚಳ ಆಗಿರುವುದು ರೈತರಿಗೆ ಜಾನುವಾರುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಿದೆ. ಮಾರಾಟ ಮಾಡುವವರಲ್ಲಿ ಈ ಮೊದಲು ಇದ್ದ ಜಾನುವಾರುಗಳನ್ನು ಮಾರಾಟ ಮಾಡಿ ಮತ್ತೆ ಖರೀದಿಸುವವರ ಸಂಖ್ಯೆ ಜಾಸ್ತಿ ಇತ್ತು. ಆದರೆ ಈ ಬಾರಿ ಮಾರಾಟ ಮಾಡಿದ ನಂತರ ಮತ್ತೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ದಲ್ಲಾಳಿಗಳು.ದುಬಾರಿ: ಸದ್ಯ ಹೊಟ್ಟು- ಮೇವು ಬೆಲೆ ದುಬಾರಿಯಾದರೂ ರೈತರಿಗೆ ದೊರಕುತ್ತಿಲ್ಲ. ಅದರಲ್ಲೂ ಗುಣಮಟ್ಟದ ಮೇವು ಸಿಗುತ್ತಿಲ್ಲ. ನೀರಾವರಿ ಪ್ರದೇಶದಿಂದ ಅವರು ಕೇಳಿದಷ್ಟು ಹಣ ನೀಡಿ ಹೊಟ್ಟು- ಮೇವು ಖರೀದಿಸಬೇಕು. ಒಂದು ಟ್ರ್ಯಾಕ್ಟರ್ ಮೇವಿಗೆ ರೂ 13 ಸಾವಿರದಿಂದ ರೂ 15 ಸಾವಿರದ ವರೆಗೆ ದರವಿದೆ. ಅದು ಒಂದು ತಿಂಗಳಿಗೂ ಸಾಕಾಗುವುದಿಲ್ಲ. ಒಮ್ಮೆಗೆ ಮೂರರಿಂದ ನಾಲ್ಕು ಟ್ರ್ಯಾಕ್ಟರ್ ಖರೀದಿ ಮಾಡಲು ಹಣವಿಲ್ಲ. ಹಾಗಾಗಿ ದನಕರುಗಳು ಹಾಗೂ ಎತ್ತುಗಳನ್ನು ಸಂತೆಗೆ ಮಾರಾಟಕ್ಕೆ ತರುವವರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ.`ಮಳೆ ಆಶ್ರಿತ ಬೇಸಾಯದ ಪ್ರದೇಶಗಳಲ್ಲಿ ವಿಶೇಷವಾಗಿ ಮೇವಿನ ಕೊರತೆಯಾಗಿದೆ. ಒಂದು ಜೋಳದಮೇವಿನ ಸೂಡು (ಪೆಂಡಿ) ಗೆ 15 ರಿಂದ 20 ರೂ.ಇದೆ. ಎಲ್ಲವೂ ದುಪ್ಪಟ್ಟಾಗಿದೆ. ಖರೀದಿಗೆ ಕಳೆದ ವರ್ಷದ ಎರಡು ಪಟ್ಟು ಹಣ ನೀಡಬೇಕು. ಒಂದೆಡೆ ಬೆಳೆ ಉತ್ಪಾದನೆ ಪ್ರಮಾಣ ಕುಸಿದಿದ್ದರೆ, ಇನ್ನೊಂದೆಡೆ ಮೇವಿಗೆ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಹಣ ಹೊಂದಿಸೋದು ಕಷ್ಟವಾಗುತ್ತಿದೆ' ಎಂದು ರೈತರು ಹೇಳುವರು.`ದನಕರುಗಳನ್ನು ಉಪವಾಸ ಸಾಯಿಸುವುದರ ಬದಲು ಕೊಳ್ಳುವ ಕೃಷಿಕರಿಗೆ ಮಾರಾಟಕ್ಕೆ ಮುಂದಾಗಿದ್ದೇವೆ. ಆದಷ್ಟೂ ಕೃಷಿಕರಿಗೇ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನೆರೆಯ ಕೊಪ್ಪಳ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಿಂದ ಬಂದ ರೈತರಿಗೆ ಜಾನುವಾರು ಮಾರಾಟ ಮಾಡುತ್ತಿದ್ದೇವೆ' ಎನ್ನುತ್ತಾರೆ ಎತ್ತು ಮಾರಾಟಕ್ಕೆ ತಂದಿದ್ದ ರೈತ ಯಮನಪ್ಪ ಬದಾಮಿ.

ರೈತರ ಅಳಲು...

`ಎಲ್ಲೆಡೆ ನೀರು, ಮೇವಿನ ಅಭಾವವಿದೆ. ಕುಡಿಸಾಕ್ ನೀರು, ತಿನ್ನಸಾಕ ಹೊಟ್ಟು-ಮೇವು ಇಲ್ಲರ‌್ರೀ... ದನಕರ ಸಾಕೂದು ಕಷ್ಟ ಆಗೈತ್ರೀ ಎಪ್ಪಾ...' ಎಂದು ನೊಂದು ಹೇಳುತ್ತಾರೆ ಮಾರುಕಟ್ಟೆಗೆ ಎತ್ತುಗಳನ್ನು ಮಾರಲು ಬಂದ ಯಲಬುರ್ಗಿಯ ರೈತ ಹನುಮಂತಪ್ಪ ಕಂಠಿ.`ನಾವು ರೈತಾಪಿ ಮಂದಿ. ನಮಗ ದನಕರಾ ಬೇಕೇಬೇಕು. ಇದೇ ಚಿಂತಿ ಆಗಾಕ ಹತ್ತೈತಿ. ಉಪವಾಸ ಕೆಡವಾಕ ಮನಸ್ಸ್ ಒಪ್ಪಾಂಗಿಲ್ರೀ... ಅದ್ಕ ಮಾರಾಕ ಹತ್ತೇನಿ' ಎನ್ನುವುದು ಕೊಪ್ಪಳ ಜಿಲ್ಲೆ ಕುಷ್ಟಗಿಯ ರೈತ ಅಮರಪ್ಪ ಕೆರಿಯಪ್ಪ ಅವರ ಅಳಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.