ಹೊಡಿ ನಗಾರಿ ಮೇಲೆ ಕೈಯ್ಯ..

7

ಹೊಡಿ ನಗಾರಿ ಮೇಲೆ ಕೈಯ್ಯ..

Published:
Updated:

ಅದು ರವೀಂದ್ರ ಕಲಾಕ್ಷೇತ್ರದಲ್ಲಿ `ಫ್ಯೂಷನ್ ಡ್ರೀಮ್ಸ~ ಹೆಸರಿನಲ್ಲಿ ನಡೆದ ಫ್ಯೂಷನ್ ಸಂಗೀತ ಕಾರ್ಯಕ್ರಮ. ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಡಾ. ಬಾಲಮುರಳಿಕೃಷ್ಣ ಅವರು ಹಲವು ವಾದ್ಯಗಳ ಮಧ್ಯೆ ಬಂದು ನಿಂತರು. ಪಿಟೀಲು ವಾದಕಿ ಜ್ಯೋತ್ಸ್ನಾ ಶ್ರೀಕಾಂತ್ ಶ್ರುತಿ ಮಾಡಿಟ್ಟ ಪಿಟೀಲು ಕೈಗೆತ್ತಿಕೊಂಡರು. ಡಾ. ಬಾಲಮುರಳಿಕೃಷ್ಣ ಆರಂಭಿಸಿದ್ದು ಆನಂದ ಭೈರವಿ ರಾಗ. ರೂಪಕ ತಾಳದಲ್ಲಿರುವ ಪುರಂದರ ದಾಸರ ಪದ `ಹೊಡಿ ನಗಾರಿ ಮೇಲೆ ಕೈಯ್ಯ..~ ಹಾಡುತ್ತಿದ್ದಂತೆ ನೆರೆದವರು ತಾಳ ಹಾಕುತ್ತಾ ಅವರ ಹಾಡಿನ ಮೋಡಿಗೆ ಮಾರು ಹೋದರು.ದಾಸರ ಈ ಪದದಲ್ಲಿ `ನಗಾರಿ~ ಎಂಬ ವಾದ್ಯದ ಉಲ್ಲೇಖ ಬರುತ್ತದೆ. ನಗಾರಿ ಎಂಬುದು ಅವನದ್ಧ ಗುಂಪಿಗೆ ಸೇರುವ ವಾದ್ಯ. ಇದನ್ನು ಉತ್ತರ ಭಾರತದ್ಲ್ಲಲಿ ನಗಾರ ಎಂದು ಕರೆಯುವರು. ದಕ್ಷಿಣ ಭಾರತದಲ್ಲಿ ಇದನ್ನು ದೇವಸ್ಥಾನಗಳಲ್ಲಿ ಮಂಗಳಾರತಿ ಸಮಯದಲ್ಲಿ ಡೋಲಿನ ಜತೆಗೆ ಇನ್ನೊಂದು ದೊಡ್ಡ ಚರ್ಮವಾದ್ಯ ಡಗ ಡಗ ಎನ್ನುತ್ತಿರುತ್ತದೆ. ಆ ವಾದ್ಯವೇ ನಗಾರಿ.ದಕ್ಷಿಣಾದಿಯಲ್ಲಿ ಇದು ಪಕ್ಕವಾದ್ಯವಾಗಿ ಬಳಕೆಯಾಗುತ್ತಿಲ್ಲ. ಆದರೆ ಉತ್ತರ ಭಾರತದಲ್ಲಿ ಈ ವಾದ್ಯವನ್ನು ತಬಲಾ ತರವೇ ಸಾಥಿವಾದ್ಯವಾಗಿ ಶಾಸ್ತ್ರೀಯ ಸಂಗೀತಗಳಲ್ಲಿ ಬಳಸುವುದಿದೆ.ನಗಾರಿ ವಾದ್ಯದ ಹಿನ್ನೆಲೆ ಕೆದಕುತ್ತಾ ಹೋದರೆ ಅದು ಅತ್ಯಂತ ರೋಚಕವಾದದ್ದು. ಈ ವಾದ್ಯವನ್ನು ಹಿಂದೆ ಕೋಟೆ ಕೊತ್ತಲಗಳಲ್ಲಿ ಸೈನಿಕರನ್ನು ಯುದ್ಧಕ್ಕೆ ಹುರಿದುಂಬಿಸುವ ಸಲುವಾಗಿ ಬಳಸುತ್ತಿದ್ದರಂತೆ. ಅರಮನೆಗಳಲ್ಲಿ ರಾಜ ಮಹಾರಾಜರು ಸಂದೇಶ ರವಾನೆಗಾಗಿ, ಅರಮನೆಯ ನಿಯಮಾವಳಿಯನ್ನು ಪ್ರಜೆಗಳಿಗೆ ತಿಳಿಯಪಡಿಸುವುದಕ್ಕಾಗಿ ಡಂಗುರದ ಬದಲಾಗಿ ನಗಾರಿ ಬಳಸುತ್ತಿದ್ದರು ಎನ್ನುತ್ತದೆ ಒಂದು ಮೂಲ.ನಗಾರ ವಾದ್ಯವನ್ನು ಉತ್ತರ ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಸುಷಿರ ವಾದ್ಯ ಶೆಹನಾಯ್‌ಗೆ ಸಾಥಿವಾದ್ಯವಾಗಿ ಬಳಸುವರು. ಶೆಹನಾಯ್ ಮಾಂತ್ರಿಕರಾಗಿದ್ದ ಉಸ್ತಾದ್ ಬಿಸ್ಮಿಲ್ಲಾಖಾನ್ ಅವರೂ ನಗಾರವನ್ನು ಸಾಥಿಯಾಗಿ ಪಡೆಯುತ್ತಿದ್ದರು.ನಗಾರಿ- ನಗಾರ ಎರಡೂ ವಾದ್ಯಗಳನ್ನು ಕೋಲಿನಲ್ಲೇ ಬಾರಿಸುವುದು. ಒಂದು ಚಿಕ್ಕ ಕೋಲು ಮತ್ತು ಇನ್ನೊಂದು ದೊಡ್ಡ ಕೋಲು ಬಳಸುವುದು ರೂಢಿ. ಎರಡಕ್ಕೂ `ಟಾಪ್~ ಮತ್ತು `ಬೇಸ್~ ಇರುತ್ತದೆ. ಎರಡನ್ನೂ ಮರದಿಂದಲೇ ಮಾಡುವುದು; ಕೆಲವು ವಾದ್ಯಗಳನ್ನು ಮೆಟಲ್‌ನಿಂದಲೂ ಮಾಡಿರುತ್ತಾರೆ. ಮುಚ್ಚಿಗೆಗೆ ಹದಗೊಳಿಸಿದ ಚರ್ಮ ಬಳಸುತ್ತಾರೆ.`ನಗಾರವನ್ನು ತಬಲಾ ತಂತ್ರಗಾರಿಕೆಯ ರೀತಿಯೇ ನುಡಿಸಬಹುದು. ಇದರಲ್ಲಿ ತಿಹಾಯ್, ಠೇಕಾ, ಪೇಶ್‌ಕಾರ್ ಎಲ್ಲವೂ ಇರುತ್ತದೆ. ಶಾಸ್ತ್ರೀಯ ವಾದ್ಯದಂತೆಯೇ ಇದರ ನುಡಿಸಾಣಿಕೆ ಕ್ರಮವೂ ಇರುತ್ತದೆ~ ಎಂದು ವಿವರ ನೀಡುತ್ತಾರೆ ನಗಾರಿ ಜತೆಗೆ ಬೇರೆ ಬೇರೆ ಅವನದ್ಧ ವಾದ್ಯಗಳಲ್ಲಿ ಪಳಗಿರುವ ಖ್ಯಾತ ಮೃದಂಗ ವಾದಕ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ.ನಗಾರಿಯಲ್ಲಿ ಶಾಸ್ತ್ರೀಯ ವಾದನ ಸಾಧ್ಯವಿಲ್ಲ. ಇದಕ್ಕೆ ಪಾಠ, ಅಭ್ಯಾಸ ಕ್ರಮ ಮುಂತಾದ ಯಾವುದೇ ಕಟ್ಟುಪಾಡುಗಳೂ ಇಲ್ಲ. ಒಂದೇ ಲಯದಲ್ಲಿ ನುಡಿಸುವುದು ಇದರ ವಾದನ ಪದ್ಧತಿ ಎಂದು ವಿವರಿಸುತ್ತಾರೆ ಅವರು.ವಿದೇಶಗಳಲ್ಲಿ ನಗಾರ

ನಗಾರದಲ್ಲಿ ಅಮೆರಿಕನ್ ನಗಾರ ಎಂಬ ಮತ್ತೊಂದು ವಿಧದ ವಾದ್ಯವಿದೆ. ಇದು ಹೆಚ್ಚು ಕಡಿಮೆ ಡೋಲು ತರವೇ ಇರುತ್ತದೆ. ಎರಡೂ ಬದಿಯಲ್ಲಿ ಚರ್ಮದ ಮುಚ್ಚಿಗೆಯಿದ್ದು ಕೋಲಿನಿಂದ ಬಾರಿಸುವುದು. ಅಮೆರಿಕ, ಜಾರ್ಜಿಯ, ಟರ್ಕಿ, ಯೂರೋಪ್ ಮುಂತಾದ ದೇಶಗಳಲ್ಲಿ ಈ ವಾದ್ಯವನ್ನು ಜಾನಪದ ಸಂಗೀತಕ್ಕೆ ಬಳಸುವರು. ಭಾರತದಲ್ಲಿ ಸಿಖ್ ಸಮುದಾಯದವರು ಈ ವಾದ್ಯವನ್ನು ಹೆಚ್ಚಾಗಿ ಬಳಸುವರು.ಬೆಂಗಳೂರಿನಲ್ಲಿ ಈ ವಾದ್ಯ ನುಡಿಸುವವರು ಕಾಣ ಸಿಗುವುದು ಕಡಿಮೆ. ಹಲವು ಅವನದ್ಧ ವಾದ್ಯಗಳ ನುಡಿಸಾಣಿಕೆ ಬಲ್ಲ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು ನಗಾರಿ ವಾದ್ಯವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಮನ ಬಂದಾಗ ಅವರ ಕೈಗಳೂ ಕೋಲಿನ ಸಹಾಯದಿಂದ ನಗಾರಿ ಮೇಲೆ ನರ್ತಿಸುತ್ತವೆ. ನಗಾರಿ ಬಗ್ಗೆ ಇನ್ನೂ ಮಾಹಿತಿ ಬೇಕಿದ್ದರೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರನ್ನು  98440 70302 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry