ಹೊಡಿ ಬಡಿ ಚಿತ್ರಗಳಲ್ಲಿ ನಟಿಸುವುದಿಲ್ಲ..

7

ಹೊಡಿ ಬಡಿ ಚಿತ್ರಗಳಲ್ಲಿ ನಟಿಸುವುದಿಲ್ಲ..

Published:
Updated:

‘ಡೆಡ್ಲಿ ಸೋಮ’, ‘ಎದೆಗಾರಿಕೆ’ ಚಿತ್ರಗಳಲ್ಲಿ ನಟ ಆದಿತ್ಯ ಅವರದ್ದು ಅಂಡರ್‌ವರ್ಲ್ಡ್ ಸ್ಪರ್ಶ. ಸದ್ಯಕ್ಕೆ ಅವರದ್ದು ವಿರುದ್ಧ ದಿಕ್ಕಿನ ನಡಿಗೆ. ಅಂಡರ್‌ವರ್ಲ್ಡ್ ನಟನ ಪೊರೆ ಕಳಚುವ ತವಕದಲ್ಲಿರುವ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗುರ್ತಿಸಿಕೊಳ್ಳಲು ಕಾತರಿಸಿದ್ದಾರೆ. ಅವರ ‘ರೆಬೆಲ್’ ಮತ್ತು ‘ಸ್ವೀಟಿ’  ಈಗ ತೆರೆಗೆ ಸಿದ್ಧವಾಗಿರುವ ಚಿತ್ರಗಳು.

ಲಾಂಗು, ಮಚ್ಚುಗಳಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಿಲ್ಲ ಎನ್ನುವುದು ಆದಿತ್ಯ ಅನುಭವದಿಂದ ಕಂಡುಕೊಂಡಿರುವ ಸತ್ಯ. ಇನ್ನುಮುಂದೆ ಎಂದೂ ಡೆಡ್ಲಿ ಪಾತ್ರಗಳನ್ನು ಪ್ರವೇಶಿಸುವುದಿಲ್ಲ ಎನ್ನುವ ನಿರ್ಧಾರ ಅವರದು. ಸಂದೇಶಾತ್ಮಕವಾಗಿರುವ ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮನೆ ಮನ ತಲುಪುವ ಅವರ ಹಂಬಲ ‘ಸಿನಿಮಾ ರಂಜನೆ’ಯೊಂದಿಗಿನ ಸಂದರ್ಶನದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು.

ತೆರೆಗೆ ಸಿದ್ಧವಾಗಿರುವ ‘ರೆಬೆಲ್’ ಮತ್ತು ‘ಸ್ವೀಟಿ’ ಚಿತ್ರಗಳ ಬಗ್ಗೆ ಹೇಳಿ?

ಎರಡೂ ವ್ಯಾಪಾರಿ ಚಿತ್ರಗಳು. ‘ರೆಬೆಲ್’ ಸಂದೇಶಾತ್ಮಕ ಚಿತ್ರವಾದರೆ, ‘ಸ್ವೀಟಿ’ ಕೌಟುಂಬಿಕ ಪ್ರಧಾನ ಪ್ರೇಮ ಕಥೆಯುಳ್ಳ ಚಿತ್ರ. ತಾಯಿ, ತಾಯ್ನಾಡಿನ ಬಗ್ಗೆ ಪ್ರೇಮವುಳ್ಳ ಯೋಧನ ಕಥೆ. ತಾಯಿ ಹೆಚ್ಚೋ ತಾಯ್ನಾಡು ಹೆಚ್ಚೋ ಎನ್ನುವ ವಸ್ತು ‘ರೆಬೆಲ್’ನಲ್ಲಿದೆ. ಒಟ್ಟಿನಲ್ಲಿ ಇದು ದೇಶಪ್ರೇಮವನ್ನು ಬಿಂಬಿಂಬಿಸುವ ಚಿತ್ರ. ‘ಸ್ವೀಟಿ’ಗೆ ಪ್ರೀತಿ ಪ್ರೇಮವೇ ವಸ್ತುವಾದರೂ ಕಥೆ ವಿಶಿಷ್ಟವಾಗಿದೆ. ‘ಸ್ವೀಟಿ’ ನಮ್ಮ ನಡುವೆಯೇ ನಡೆಯುವ ಪ್ರತಿ ಮನೆಗಳ ಪ್ರೇಮಕಥೆ.

‘ಅಂತ’ ಚಿತ್ರದ ಪಡಿಯಚ್ಚು ‘ರೆಬೆಲ್’ ಎನ್ನುವ ಆರೋಪ ಇದೆಯಲ್ಲ?

ಖಂಡಿತಾ ಇಲ್ಲ. ‘ಅಂತ’ ಚಿತ್ರದ ನಾಯಕನ ಛಾಯೆ ಬರುತ್ತದೆಯೇ ಹೊರತು ಅನುಕರಣೆ ಅಲ್ಲ. ‘ಅಂತ’ಕ್ಕೂ ‘ರೆಬೆಲ್‌’ಗೂ ಪೂರ್ಣ ವ್ಯತ್ಯಾಸವಿದೆ.

ದೇಶಪ್ರೇಮ ಮತ್ತು ಪ್ರೇಮಕಥೆಯುಳ್ಳ ಚಿತ್ರಗಳು ಸಾಕಷ್ಟು ಬಂದಿವೆ. ನಿಮ್ಮದು ಯಾವ ರೀತಿಯ ಹೊಸತನದ ಸಿನಿಮಾ?

ಒಮ್ಮೆಗೇ ಹೆಚ್ಚು ಸಿನಿಮಾಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಚಿತ್ರಕಥೆ ಇಷ್ಟವಾದರೆ ಮಾತ್ರ ತೊಡಗುವೆ. ಈ ಚಿತ್ರಗಳ ಕಥೆಯಲ್ಲಿ ಹೊಸತನವಿದೆ ಎನಿಸಿದ ಕಾರಣಕ್ಕೆ ಒಪ್ಪಿಕೊಂಡಿದ್ದು. ಚಿತ್ರಕಥೆಯ ಎದುರು ನನಗೆ ನಿರ್ದೇಶಕ ಮತ್ತು ನಿರ್ಮಾಪಕರು ಪ್ರಮುಖರಾಗುವುದಿಲ್ಲ. ಈ ಚಿತ್ರಗಳ ಮೂಲಕ ಹೊಸ ಬಗೆಯಲ್ಲಿ ನಾನು ಕಾಣಿಸಿಕೊಳ್ಳುವ ಪ್ರಯತ್ನ ನನ್ನದು.ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಮತ್ತು ಏಕೆ?

‘ಸ್ವೀಟಿ’ ಮೊದಲು ತೆರೆಕಾಣುತ್ತದೆ. ಮಚ್ಚು ಲಾಂಗುಗಳನ್ನು ಹಿಡಿದಿದ್ದ ನಾನು ಆ ಪಾತ್ರಗಳಿಂದ ದೂರ ನಿಂತಿದ್ದೇನೆ. ಹೊಸ ಬಗೆಯ ರೊಮ್ಯಾಂಟಿಕ್ ನಟನನ್ನಾಗಿ ಜನರು ಸ್ವೀಕರಿಸಲಿ ಎನ್ನುವುದಷ್ಟೇ ಕಾರಣ.

ಅಂಡರ್‌ವರ್ಲ್ಡ್ ಪಾತ್ರಗಳಿಂದ ದೂರ ಉಳಿಯುವಿರಾ?

ಹೌದು. ಮುಂದೆ ಮಚ್ಚು ಲಾಂಗುಗಳನ್ನು ಹಿಡಿಯುವುದಿಲ್ಲ. ಅಂಡರ್‌ವರ್ಲ್ಡ್ ಕಥೆಯ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದೇನೆ. ಅವು ಹೆಸರೂ ತಂದುಕೊಟ್ಟಿವೆ ನಿಜ. ಆದರೆ ಬ್ರಾಂಡ್ ಆಗಿ ಬಿಡುತ್ತೇವೆ. ಮಚ್ಚು ಲಾಂಗುಗಳಿಂದ ನಾಯಕತ್ವ ಕಾಯು್ದಕೊಳ್ಳಲು ಸಾಧ್ಯವಿಲ್ಲ. ಅದೂ ಒಂದು ಪಾತ್ರವಾದರೂ ಸಿನಿಮಾ ರಂಗ ನೋಡುವುದೇ ಬೇರೆ ದೃಷ್ಟಿಯಿಂದ. ‘ಎದೆಗಾರಿಕೆ’ ಚಿತ್ರದ ತರುವಾಯ ನನಗೆ ಹಲವು ಚಿತ್ರಗಳಲ್ಲಿ ಅವಕಾಶ ಬಂದಿತು. ಬಹುಪಾಲು ಚಿತ್ರಗಳು ಅಂಡರ್‌ವರ್ಲ್ಡ್ ಕಥಾನಕಗಳೇ. ಎಲ್ಲವನ್ನೂ ನಿರಾಕರಿಸಿದೆ.

‘ಎದೆಗಾರಿಕೆ’ಯೂ ರೀತಿಯ ಅವಕಾಶಗಳು ಬಂದರೆ ಒಪ್ಪಿಕೊಳ್ಳುವಿರಾ?

‘ಎದೆಗಾರಿಕೆ’ ಅಂಡರ್‌ವರ್ಲ್ಡ್ ಕಥೆಯಾದರೂ ರಕ್ತಪಾತವಿಲ್ಲದ್ದು. ರೌಡಿಸಂ ಚಿತ್ರಗಳೆಂದರೆ ಲಾಂಗು, ಮಚ್ಚುಗಳ ರಕ್ತಪಾತದ ಕಥೆ. ಆದರೆ ‘ಎದೆಗಾರಿಕೆ’ಯ ನಾಯಕನಿಗೆ ಸೂಕ್ಷ್ಮತೆ ಇದೆ. ಭಾವುಕತೆ ಇದೆ. ಭೂಗತ ಲೋಕದ ಚಿತ್ರವಾದರೂ ಕಲಾವಂತಿಕೆ ಮೆರೆದ ಸಿನಿಮಾ ಅದು. ಅಂತಹ ಪಾತ್ರಗಳು ಸಿಕ್ಕರೆ ನಟಿಸುತ್ತೇನೆ. ಆದರೆ ಹೊಡೆದಾಟ ಬಡಿದಾಟ, ರೌಡಿ ಇಲ್ಲವೇ ಡಾನ್ ವೈಭವೀಕರಣದ ಚಿತ್ರಗಳಲ್ಲಿ ಅಲ್ಲ.

ನಿಮ್ಮ ನಟನೆಯ ತುಡಿತ ಯಾವ ದಿಕ್ಕಿನತ್ತ?

ಕಮರ್ಷಿಯಲ್ ಆಯಾಮದ ಸಂದೇಶಾತ್ಮಕ ಚಿತ್ರಗಳತ್ತ. ರೌಡಿ ಪಾತ್ರಗಳನ್ನು ಆವಾಹಿಸಿಕೊಂಡರೆ ಮಹಿಳಾ ಪ್ರೇಕ್ಷಕ ವರ್ಗ ದೂರವಾಗುತ್ತದೆ. ಈಗ ಆ ವರ್ಗಕ್ಕೂ ಹತ್ತಿರವಾಗುವ ಕೌಟುಂಬಿಕ, ಭಾವಪ್ರಧಾನ, ರೊಮ್ಯಾಂಟಿಕ್ ಚಿತ್ರಗಳತ್ತ ನನ್ನ ಗಮನ. 

ನಿಮ್ಮ ತಂದೆ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ನಿಮಗೆ ಯಶಸ್ಸು ಸಿಕ್ಕಲಿಲ್ಲ. ಯಾಕೆ?

ಎಲ್ಲವನ್ನೂ ಜನರೇ ತೀರ್ಮಾನಿಸುವುದು. ಅದು ಭಗವಂತನಿಗೆ ಮತ್ತು ಜನರಿಗೆ ತಿಳಿದ ವಿಚಾರ

ಇಲ್ಲಿಯವರೆಗೂ ರೀಮೇಕ್ ಚಿತ್ರಗಳಲ್ಲಿ ನಟಿಸಿಲ್ಲ, ಮುಂದೆ?

ನಾನು ರೀಮೇಕ್ ವಿರೋಧಿ. ಬಹುಪಾಲು ಇದೇ ನಿಲುವು. ಪರಭಾಷೆಯ ಚಿತ್ರಗಳಲ್ಲಿ ಎಲ್ಲ ಬಗೆಯ ಕಥೆಗಳು ಹೇರಳವಾಗಿ ಹುಟ್ಟುತ್ತವೆ. ನಮ್ಮಲ್ಲೂ ಆ ಬಗೆಯ ಪ್ರಯತ್ನಗಳಾಗಬೇಕು. ಆದರೆ ನಮ್ಮ ನೆಲಕ್ಕೆ ಒಗ್ಗುವಂತಹ ಮತ್ತು ಅಚ್ಚುಕಟ್ಟಾಗಿ ಕಥೆಯನ್ನು ನಿರೂಪಿಸುವ ನಿರ್ದೇಶಕರು ಸಿಕ್ಕಿ ಆ ಕಥೆ ಇಷ್ಟವಾದರೆ ಒಪ್ಪಿಕೊಳ್ಳುವೆ.

ಮುಂದಿನ ಅವಕಾಶಗಳು?

ನಿರ್ದೇಶಕರಾದ ರವಿ ಶ್ರೀವತ್ಸ ಮತ್ತು ಮಾದೇಶ ಅವರ ಜೊತೆ ಸಿನಿಮಾ ಮಾಡಲು ಮಾತುಕತೆಯಾಗಿದೆ. ಪಕ್ಕಾ ಕಮಷಿಶಿಯಲ್, ರೊಮ್ಯಾಂಟಿಕ್ ಮತ್ತು ಆ್ಯಕ್ಷನ್ ಆ ಚಿತ್ರಗಳು. ಅವಕಾಶಗಳು ಕಡಿಮೆಯಾದರೂ ಪರವಾಗಿಲ್ಲ ಚಿತ್ರಕಥೆ ಆಧರಿಸಿ, ನಟಿಸುವೆ.

ಸಂದರ್ಶನ : ಡಿ.ಎಂ.ಕುರ್ಕೆ ಪ್ರಶಾಂತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry