ಮಂಗಳವಾರ, ಮಾರ್ಚ್ 2, 2021
28 °C

ಹೊಣೆಗೇಡಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಣೆಗೇಡಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಬಳ್ಳಾರಿ: `ಅಧಿಕಾರಿಗಳು ಬರಗಾಲ ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸದೆ, ರೈತರು, ಕೂಲಿಕಾರರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು. ಹೊಸದಾಗಿ ವರ್ಗಾ ಆಗಿ ಬಂದಿದ್ದು, ಮಾಹಿತಿಯೇ ಇಲ್ಲ. ಈ ಹಿಂದೆ ನಡೆದಿರುವ ತಪ್ಪಿಗೆ ನಾವು ಹೊಣೆಯಲ್ಲ ಎಂದು ನುಣುಚಿಕೊಳ್ಳದೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬರಗಾಲ ಪರಿಹಾರ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.`ಹೊಸದಾಗಿ ಜಿಲ್ಲೆಗೆ ನಿಯುಕ್ತಿಗೊಂಡಿರುವ ಅಧಿಕಾರಿಗಳು ಗೊತ್ತಿಲ್ಲ ಎಂಬ ಸಬೂಬು ನೀಡುವುದು ಬೇಡ. ಬರಗಾಲ ಆವರಿಸಿರುವುದರಿಂದ ನಿಮ್ಮ ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ ಯಾವ ಕೆಲಸಗಳು ಆಗಬೇಕಿದೆ, ಸಮಸ್ಯೆಗಳು ಎಂಥವು  ಎಂಬುದನ್ನು ಅರ್ಥ ಮಾಡಿಕೊಂಡು, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು~ ಎಂದು ಅವರು ಆದೇಶಿಸಿದರು.ವಿಶೇಷವಾಗಿ ಭೂಸೇನಾ ನಿಗಮದ ಅಧಿಕಾರಿಗಳು ಸಮಸ್ಯೆ ಕುರಿತು ಕೇಳಿದ ಕೂಡಲೇ, `ನಾನು ಈಗ ತಾನೇ ಬಂದಿದ್ದೇನೆ~ ಎಂಬ ಉತ್ತರ ನೀಡುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳು ಬದಲಾಗುತ್ತಲೇ ಇರುತ್ತಾರೆ. ಸಮಸ್ಯೆಗಳು ಮಾತ್ರ ಮುಂದುವರಿಯುತ್ತಲೇ ಇರುತ್ತವೆ. ಹೀಗಾಗುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.ಜನ ತಾಳ್ಮೆ ಕಳೆದುಕೊಳ್ಳದಂತೆ ನೋಡಿಕೊಳ್ಳ ಬೇಕು. ಜನರಿಗೆ ಸೌಲಭ್ಯ ದೊರೆಯದಿದ್ದರೆ ಉಗ್ರರಾಗುತ್ತಾರೆ. ಜನ ತಾಳ್ಮೆ ಕಳೆದು ಕೊಳ್ಳುವುದಕ್ಕಿಂತ ಮೊದಲೇ ಎಚ್ಚರಿಕೆವಹಿಸಿ ಕೆಲಸ ಮಾಡಬೇಕು ಎಂದು  ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗುವ ಸಾಧ್ಯತೆ ಇದೆ. ಎಲ್ಲ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ, ಸುಸಜ್ಜಿತವಾಗಿ ಇರಿಸಬೇಕು. ಬಳ್ಳಾರಿ ನಗರದಲ್ಲಿರುವ ಎಲ್ಲ ಕೊಳವೆ ಬಾವಿಗಳನ್ನು ಪರ್ಯಾಯವಾಗಿ ಬಳಸಿಕೊಳ್ಳಲು ಅನುವಾಗುವಂತೆ ಸುಸ್ಥಿತಿಯಲ್ಲಿ ಇರಿಸಬೇಕು ಎಂದು ಸಚಿವರು ತಿಳಿಸಿದರು.ತುಂಗಭದ್ರಾ ಜಲಾಶಯದಲ್ಲಿ ಈಗ 12 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಬಲದಂಡೆಯ ಕೆಳಹಂತದ ಕಾಲುವೆಗಳಿಂದ ನೀರು ಪೂರೈಸುವಂತೆ ಸಂಬಂಧಿಸಿದ ಮಂಡಳಿಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ನೀರು ಬಿಡುವ ಸಾದ್ಯೆತೆಯೂ ಇದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಗೋಶಾಲೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ, ರೈತರ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಉಚಿತವಾಗಿ ಅವರವರ ಮನೆಗೇ ಮೇವು ವಿತರಿಸುವುದೇ ಉತ್ತಮ ಎಂಬ ಚಿಂತನೆಯನ್ನೂ ಸರ್ಕಾರ ನಡೆಸುತ್ತಿದೆ ಎಂದು ಅವರು ತಿಳಿಸಿದರು.ಕಡಿಮೆ ಅನುದಾನ: ಜಿಲ್ಲೆಯಾದ್ಯಂತ ರಾಷ್ಟ್ರೀಯ ಉದ್ಯೋಗ  ಖಾತರಿ ಯೋಜನೆ ಅಡಿ ಕಾರ್ಯಕ್ರಮ ರೂಪಿಸಲು ಕೇಂದ್ರ ಸರ್ಕಾರ ಕೇವಲ ರೂ 40 ಕೋಟಿ ಬಿಡುಗಡೆ ಮಾಡಿದೆ. ಅವ್ಯವಹಾರ ಹಾಗೂ ಅಸಮರ್ಪಕ ನಿರ್ವಹಣೆ ಗಮನಿಸಿರುವ ಕೇಂದ್ರ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿಗೆ ಅತ್ಯಂತ ಕಡಿಮೆ ಅನುದಾನ ನೀಡಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಈ ಹಿಂದೆ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಜಿ.ಪಂ. ಉಪಕಾರ್ಯದರ್ಶಿ ಮಹೇಶ್ವರಸ್ವಾಮಿ ವಿವರಿಸಿದರು.`ಕೂಡಲೇ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಈ ಕುರಿತು ಆದೇಶ ಹೊರಡಿಸಿ, ಕ್ರಿಯಾ ಯೋಜನೆ ರೂಪಿಸಲು ಸೂಚಿಸಿ. ಬೇಜವಾಬ್ದಾರಿ ಪ್ರದರ್ಶಿಸದಂತೆ ತಾಕೀತು ಮಾಡಿ, ಕೂಲಿಕಾರರಿಗೆ ಉದ್ಯೋಗ ನೀಡಿ~ ಎಂದು  ಆನಂದ್‌ಸಿಂಗ್ ಆದೇಶಿಸಿದರು.ಕೆರೆ ಅಭಿವೃದ್ಧಿ ನಿರ್ಲಕ್ಷ್ಯ: ಜಿಲ್ಲೆಯ ವಿವಿಧೆಡೆ ಕೈಗೆತ್ತಿಕೊಳ್ಳಲಾಗಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ. ಅಂಕಮನಾಳು, ಕುಡುತಿನಿ, ಏಳುಬೆಂಚಿ ಮತ್ತಿತರ ಗ್ರಾಮಗಳ ಕೆರೆಗಳ ಅಭವೃದ್ಧಿಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮಗಳ ಜನತೆಗೆ ಕುಡಿಯುವ ನೀರೇ ಸಂಗ್ರಹವಾಗಿಲ್ಲ ಎಂದು ಸಂಡೂರು ಶಾಸಕ ಇ.ತುಕಾರಾಮ್ ಆರೋಪಿಸಿದರು.ಅಂಕಮನಾಳು ಗ್ರಾಮದ ಕೆರೆ 2010ರಲ್ಲಿ ಒಡೆದಿದೆ. 400 ಎಕರೆ ಭೂಮಿಗೆ ನೀರಾವರಿ ಸೌಲಭ್ಯವೇ ಸ್ಥಗಿತಗೊಂಡಿದೆ. ದುರಸ್ತಿ ಕೈಗೆತ್ತಿಕೊಳ್ಳಲೂ ಸಣ್ಣ ನೀರಾವರಿ ಇಲಾಖೆಯವರು ಮೀನ- ಮೇಷ ಎಣಿಸುತ್ತಿದ್ದಾರೆ ಎಂದು ಅವರು ದೂರಿದರು.ಬಳ್ಳಾರಿ ತಾಲ್ಲೂಕಿನ ಮಿಂಚೇರಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಕೆರೆಯಲ್ಲಿ ನೀರೇ ಸಂಗ್ರಹವಾಗುತ್ತಿಲ್ಲ ಎಂದು ತಿಳಿಸಲಾಗುತ್ತಿದೆ. ವೈಜ್ಞಾನಿಕವಾದ ಸಮೀಕ್ಷೆ ನಡೆಸಿ ಕೆರೆ ಕಟ್ಟಿದ್ದರೂ ಈ ರೀತಿ ಆಗಿದೆ. ಆದರೆ, ಬರಗಾಲದ ಹಿನ್ನೆಲೆಯಲ್ಲಿ ಕಾಲುವೆ ಮೂಲಕ ನೀರು ಬಂದಿಲ್ಲ. ಕೆರೆಗೆ ನೀರು ಹರಿಸಲಾಗಿಲ್ಲ ಎಂದು ತಿಳಿಸುತ್ತ ಬರಗಾಲವನ್ನೇ ದೂಷಿಸುತ್ತ ಅಧಿಕಾರಿಗಳು ತಮ್ಮ ಲೋಪವನ್ನು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಬಿಸ್ವಾಸ್ ತರಾಟೆಗೆ ತೆಗೆದುಕೊಂಡರು.ಹಣ ಖರ್ಚು ಮಾಡಿ ಕೆರೆ ಕಟ್ಟುವಾಗಲೇ ಈ ಕುರಿತು ಸಮೀಕ್ಷೆ ನಡೆಸಿರಲಿಲ್ಲವೇ? ಎಂದು ಕೇಳಿದ ಸಚಿವರು, ಈ ಬಾರಿ ಕಾಲುವೆಗೆ ನೀರು ಹರಿದ ನಂತರ ಆ ಕೆರೆಯಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.ಅನಧಿಕೃತ ನೀರು: ಬಳ್ಳಾರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪರವಾನಗಿಯನ್ನೇ ಪಡೆಯದೆ ಅನೇಕ ಸಂಸ್ಥೆಗಳು ಅನಧಿಕೃತವಾಗಿ ನೀರು ಶುದ್ಧೀಕರಿಸಿ ಮಾರಾಟ ಮಾಡುತ್ತಿವೆ. ಪಾಲಿಕೆ ಪೂರೈಸುವ ನೀರನ್ನೇ ಸಂಗ್ರಹಿಸಿ, ಶುದ್ಧೀಕರಿಸಿ ಬಾಟಲಿಗಳಲ್ಲಿ ನೀರು ಸಂಗ್ರಹಿಸಿ ಪರವಾನಗಿ ದೊರೆಯದಿದ್ದರೂ ಮಾರಾಟ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಆರೋಪಿಸಿದರು.ಅನಧಿಕೃತ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಡಲಾಗಿದ್ದು, ಕೆಲವೇ ದಿನಗಳಲ್ಲಿ ಅನಧಿಕೃತ ಮಾರಾಟವನ್ನು ನಿಯಂತ್ರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.