ಶುಕ್ರವಾರ, ಜೂನ್ 18, 2021
21 °C
ಮದುವೆ ಮುಗಿಸಿ ವಾಪಸಾಗುವಾಗ ಘಟನೆ

ಹೊತ್ತಿ ಉರಿದ ಕಾರು: ಏಳು ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಗುರುವಾರ ರಾತ್ರಿ ಕಾರಿಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಟ್ಯಾನರಿ ರಸ್ತೆ ನಿವಾಸಿಗಳಾದ ಮಹಮದ್‌ ಸಾದಿಕ್ (60), ರಶೀದಾ (55), ಮಮತಾಜ್‌ ಬೇಗಂ (40),  ಸಾಹನ್ (25),  ಸುರಯ್ಯಾ ಭಾನು (20), ಜುಬಿಯಾ ಮಹಮ್ಮದ್‌ (5) ಹಾಗೂ ಒಂದು ವರ್ಷದ ಮಗು ಅಲೀನಾ ಮಹಮ್ಮದ್‌ ಗಾಯಗೊಂಡವರು.ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದ ಕುಟುಂಬ ಸದಸ್ಯರು, ರಾತ್ರಿ 10 ಗಂಟೆ ಸುಮಾರಿಗೆ ಕಾರಿನಲ್ಲಿ (ಕೆಎ 18 ಎಂ 5590) ಶಿವಾಜಿನಗರ ಮಾರ್ಗವಾಗಿ ಮನೆಗೆ ಹೋಗುತ್ತಿದ್ದರು. ಕನ್ನಿಂಗ್‌ ಹ್ಯಾಂ ರಸ್ತೆಗೆ ಬರುತ್ತಿದ್ದಂತೆ ಕಾರು ಕೆಟ್ಟು ಹೋಗಿದ್ದರಿಂದ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿದ್ದಾನೆ. ನಂತರ ಪೆಟ್ರೋಲ್‌ ಟ್ಯಾಂಕ್‌ ಬಳಿ ಬಂದ ಆತ, ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾಗ ಏಕಾಏಕಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.ಈ ವೇಳೆ ವಾಹನದ ಬಾಗಿಲು­ಗಳೆಲ್ಲ ಬಂದ್‌ ಆಗಿದ್ದರಿಂದ ಒಳಗಿ­ದ್ದವರು ತಕ್ಷಣವೇ ಕೆಳಗಿಳಿಯಲು ಸಾಧ್ಯವಾಗಿಲ್ಲ. ಆಗ ಖಾಸಗಿ ಕಂಪೆನಿಯೊಂದರ ಸೆಕ್ಯುರಿಟಿ ಗಾರ್ಡ್‌ ಮುಜುಂದಾರ್‌ ಕುಟುಂಬ ಸದಸ್ಯರ ರಕ್ಷಣೆಗೆ ಮುಂದಾಗಿದ್ದಾರೆ.‘ರಸ್ತೆ ಬದಿ ಇದ್ದ ಕಾರು ಏಕಾಏಕಿ ಹೊತ್ತಿ ಉರಿಯಲಾರಂಭಿಸಿತು. ಆ ವಾಹನದ ಚಾಲಕ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ. ವಾಹನ­ದಲ್ಲಿದ್ದವರ ಚೀರಾಟ ಕೇಳಿ ಕೂಡಲೇ ಸ್ಥಳಕ್ಕೆ ಹೋದೆ. ಕಾರಿನ ಬಾಗಿಲಿಗೆ ಜೋರಾಗಿ ಒದ್ದಿದ್ದರಿಂದ ಬಾಗಿಲು ಮುರಿದು ಕೆಳಗೆ ಬಿತ್ತು. ನಂತರ ಸ್ಥಳೀಯರ ನೆರವು ಪಡೆದು ಒಬ್ಬೊಬ್ಬರನ್ನೇ ಸಮೀಪದ ಅಲ್‌ ಅಮೀನ್‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತು’ ಎಂದು ಮುಜುಂದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಷಯ ತಿಳಿದ ಕೂಡಲೇ ಒಂದು ವಾಹನದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಗಾಯಾಳು ಸಾದಿಕ್‌ ಅವರು ಶಿವಾಜಿನಗರದಲ್ಲಿ ರಸ್ತೆ ಬದಿಯ ವ್ಯಾಪಾರಿಯಾಗಿದ್ದರು. ‘ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲ್‌ ಅಮೀನ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸ­ಲಾ­ಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ತಿಳಿಸಿದರು.‘ಪೆಟ್ರೋಲ್ ಖಾಲಿಯಾಗಿದ್ದರಿಂದ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದರು. ಒಬ್ಬ ವ್ಯಕ್ತಿ ಸಮೀಪದ ಬಂಕ್‌ನಿಂದ ಕ್ಯಾನ್‌ನಲ್ಲಿ ಪೆಟ್ರೋಲ್‌ ತಂದು ಟ್ಯಾಂಕ್‌ಗೆ ತುಂಬುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಗಾಯಾಳುಗಳು ಚೇತರಿಸಿಕೊಂಡ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.