ಹೊದ್ದು ಮಲಗಿದ ಪ್ರಾದೇಶಿಕ, ಸಾಮಾಜಿಕ ಅರಣ್ಯ ಸಿಬ್ಬಂದಿ

ಗುರುವಾರ , ಜೂಲೈ 18, 2019
24 °C

ಹೊದ್ದು ಮಲಗಿದ ಪ್ರಾದೇಶಿಕ, ಸಾಮಾಜಿಕ ಅರಣ್ಯ ಸಿಬ್ಬಂದಿ

Published:
Updated:

ಗಂಗಾವತಿ: ವಾಯು, ಜಲ ಮಾಲಿನ್ಯದಿಂದಾಗಿ ಪರಿಸರ ಕಲುಷಿತವಾಗುತ್ತಿರುವ ಇಂದಿನ ದಿನದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಿರುವ ಅರಣ್ಯ ಇಲಾಖೆ ಸಿಬ್ಬಂದಿ, ವಿಶ್ವ ಪರಿಸರ ದಿನಾಚರಣೆಯಂತಹ ಸಂದರ್ಭದಲ್ಲಿ  `ಹಾಸಿಗೆ ಹೊದ್ದು ಮಲಗಿದೆ~ ಎಂಬ ಆರೋಪ ವ್ಯಕ್ತವಾಗಿದೆ.ಪ್ರತಿ ವರ್ಷ ಜೂನ್ 6ರಂದು ವಿಶ್ವದಾದ್ಯಂತ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಎಲ್ಲೆಡೆ ಸರ್ಕಾರದ ವಿವಿಧ ಇಲಾಖೆ ಸಂಘ-ಸಂಸ್ಥೆಗಳು ಅಷ್ಟೇ ಏಕೆ ಸಾರ್ವಜನಿಕರೂ ಕೂಡ ಪರಿಸರದ ಬಗ್ಗೆ ಅಲಲ್ಲಿ ಕಾರ್ಯಕ್ರಮ ಆಯೋಜಿಸುತ್ತಾರೆ.ಆದರೆ ಗಿಡ-ಮರಗಳನ್ನು ನೆಟ್ಟು, ಸಂರಕ್ಷಿಸಿ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಬೇಕಾದ ಅರಣ್ಯ ಇಲಾಖೆ ಮಾತ್ರ ಭಾನುವಾರ ಯಾವುದೇ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಕನಿಷ್ಠ ಪಕ್ಷ ಭಾನುವಾರ ಸಿಬ್ಬಂದಿಯೂ ಕಚೇರಿಯತ್ತ        ಸುಳಿದಿರಲಿಲ್ಲ.`ಅರಣ್ಯ ಇಲಾಖೆ ಅಧಿಕಾರಿಗಳು ಕನಿಷ್ಠ ತಮ್ಮ ಕಚೇರಿ ಆವರಣದಲ್ಲಿ ಒಂದು ಸಸಿಯನ್ನಾದರೂ ನೆಟ್ಟು ಪರಿಸರದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇಲಾಖೆ  ಮೌನಕ್ಕೆ ಶರಣಾಗಿದೆ~ ಎಂದು ವೃಕ್ಷ ಪ್ರಿಯ ಕೆ. ವಿಜಯಕುಮಾರ ಆರೋಪಿಸಿದರು.ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಸದ್ಯ ಗಂಗಾವತಿಯಲ್ಲಿ ಎರಡು ವಿಭಾಗ ಅಸ್ತಿತ್ವದಲ್ಲಿವೆ. ಒಂದು ಪ್ರಾದೇಶಿಕ ಅರಣ್ಯ ಇಲಾಖೆ ಮತ್ತೊಂದು ಸಾಮಾಜಿಕ ಅರಣ್ಯ ಇಲಾಖೆ. ಈ ಎರಡು ವಿಭಾಗ ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಸಾಮಾಜಿಕ ವಲಯದವರು ಕಾರ್ಯಕ್ರಮ ಆಯೋಜಿಸಬಹುದು ಎಂದು ಪ್ರಾದೇಶಿಕದವರು, ಪ್ರಾದೇಶಿಕ ವಿಭಾಗದವರು ಆಯೋಜಿಸಬಹುದು ಎಂದು ಸಾಮಾಜಿಕ ಅರಣ್ಯ ಇಲಾಖೆಗಳ ಸಿಬ್ಬಂದಿ ಪರಿಸರ ದಿನಾಚರಣೆಯ ಬಗ್ಗೆ ನಿರ್ಲಕ್ಷ್ಯ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.ಪರಿಸರದ ಬಗ್ಗೆ ಸ್ವತಃ ಅರಣ್ಯ ಇಲಾಖೆಯ ಸಿಬ್ಬಂದಿಯೇ ಜಾಗೃತರಾಗಿಲ್ಲ. ಇನ್ನೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ದೂರದ ಮಾತು ಎಂದು ವಿದ್ಯಾರ್ಥಿಗಳಾದ ಶರಣ ಬಸವ, ವಿನಾಯಕ, ವಿದ್ಯಾಧರ, ಶಂಭುಲಿಂಗ, ತುಳಜಾ       ನಾಯಕ್ ವ್ಯಂಗ್ಯವಾಡಿದ್ದಾರೆ.ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿ ಮತ್ತು ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೊಪ್ಪಳ ಗವಿಮಠದ ಸ್ವಾಮೀಜಿಗಳಂತವರೇ ಜಿಲ್ಲೆವ್ಯಾಪಿ ಸಸಿನೆಟ್ಟು, ಪರಿಸರ ಸಂರಕ್ಷಿಸುವ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದರು.ಆದರೆ ಪರಿಸರ ಸಂರಕ್ಷಣೆ, ಮರ-ಗಿಡಗಳನ್ನು ಉಳಿಸಿ, ಬೆಳೆಸಬೇಕಾದ ಮಹತ್ತರ ಪಾತ್ರ ವಹಿಸಬೇಕಿದ್ದ  ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಪರಿಸರದ ಬಗ್ಗೆ ಅರಿವಿರದಿದ್ದು ಪರಿಸರ ಪ್ರೇಮಿಗಳಲ್ಲಿ ಅಚ್ಚರಿ ತಂದಿದೆ.ವಿಶ್ವ ಪರಿಸರ ದಿನದಂದು ಯಾವ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಸಂಗನಗೌಡ ಅವರನ್ನು ಕೇಳಿದರೆ,     `ಆರ‌್ಹಾಳದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.ಜಡ್ಜ್ ಸಾಹೇಬ್ರು ಬಂದಿದ್ರು. ಅವರು ಹೇಳಿದ್ಹಾಂಗ ನಮ್ಮ ಮಂದಿ ಕೇಳಿದ್ರು. ಪಿಟ್ ತೋಡ್ಸಿದ್ರು. ಸಸಿ ನೆಟ್ರು. ಸಾಲ್ಯಾಗ ಮಕ್ಕಳಿಗೆ ಹೇಳಿದ್ವಿ. ಕಾರ್ಯಕ್ರಮ ಮುಗ್ಸಿಕೊಂಡು ಬಂದ್ವಿ. ಮತ್ತೇನು ಹೆಚ್ಚಿಂದು ಮಾಡಿಲ್ಲ ನೋಡ್ರಿ~ ಎಂದು ಉತ್ತರಿಸಿದರು.ಈ ಬಗ್ಗೆ ಸಾಮಾಜಿಕ ಅರಣ್ಯ ಅಧಿಕಾರಿ ಬಸಪ್ಪ ಅವರನ್ನು ವಿಚಾರಿಸಲು ಯತ್ನಿಸಿದರೆ, ಭಾನುವಾರದಿಂದಲೇ ಅವರ ಮೊಬೈಲ್ ಸ್ವಿಚ್ ಅಫ್. ಕೊನೆಗೆ ಜಿಲ್ಲಾ ಸಮಾಜಿಕ ಅರಣ್ಯ ಅಧಿಕಾರಿ ಮಾಯಣ್ಣ ಅವರನ್ನು ಸಂಪರ್ಕಿಸಲಾಯಿತು.`ಎನ್.ಆರ್.ಇ.ಜಿ.ಯಲ್ಲಿ ಗುಂಡಿ ತೋಡುವುದು, ವಡ್ಡು ನಿರ್ಮಾಣ ಮಾಡುವುದು, ಆಸಕ್ತರಿಗೆ ಸಸಿ ವಿತರಿಸುವುದು, ನರ್ಸರಿ ಬೆಳೆಸುವುದು, ಬೇಕಾದರವರಿಗೆ ಕೊಡುವುದು ಅಷ್ಟೆ ನಮ್ಮ ಕೆಲಸ~ ಎನ್ನುವ ಮೂಲಕ ಪರಿಸರ ದಿನಾಚರಣೆಯ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry