ಶುಕ್ರವಾರ, ಡಿಸೆಂಬರ್ 6, 2019
18 °C

ಹೊದ್ದೂರು ರಸ್ತೆ: ಬೇಕಿದೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊದ್ದೂರು ರಸ್ತೆ: ಬೇಕಿದೆ ಚಿಕಿತ್ಸೆ

ನಾಪೋಕ್ಲು: ಪಟ್ಟಣದಿಂದ ಸಮೀಪದ ಮೂರ್ನಾಡು ಪಟ್ಟಣಕ್ಕೆ ಹತ್ತು ಕಿ.ಮೀ.ಗಳ ಅಂತರ. ಇಲ್ಲಿಂದ ಹೊದ್ದೂರು ಗ್ರಾಮಕ್ಕೆ ತಲುಪುವಲ್ಲಿಯವರೆಗಿನ ರಸ್ತೆ ಸಂಚಾರ ಯೋಗ್ಯವಾಗಿದೆ. ಆದರೆ ಇದೇ ರಸ್ತೆಯನ್ನು ನಂಬಿ ಮುಂದೆ ಸಾಗಿದರೆ ವಾಹನ ಚಾಲಕರು ಪರಿತಪಿಸುವುದು ಖಂಡಿತ!ಮುಂದಿನ ರಸ್ತೆಯುದ್ದಕ್ಕೂ ಹೊಂಡಗಳಾಗಿ ಸಂಚಾರವೇ ದುಸ್ತರವಾಗಿದೆ. ಬಹುತೇಕ ಹೊಂಡಗಳನ್ನು ಜಲ್ಲಿ ಕಲ್ಲುಗಳಿಂದ ಮುಚ್ಚಿದ್ದು ಡಾಂಬರೀಕರಣ ಆಗಿಲ್ಲ. ಈ ರಸ್ತೆಯನ್ನು ದುರಸ್ತಿಗೊಳಿಸುವ ಅಗತ್ಯವಿದೆ.ಮೂರ್ನಾಡು ಭಾಗದಿಂದ ನಾಪೋಕ್ಲು ಭಾಗಮಂಡಲ ಕರಿಕೆ ಕಕ್ಕಬ್ಬೆ ವಿಭಾಗಗಳಿಗೆ ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಭಾರ ತುಂಬಿದ ಲಾರಿ ಮತ್ತಿತರ ವಾಹನಗಳು ಸಂಚರಿಸುತ್ತವೆ. ಪರಿಣಾಮ ರಸ್ತೆಯಲ್ಲಿ ಗುಂಡಿಗಳಾಗುತ್ತಿವೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.  ನೆಪಮಾತ್ರಕ್ಕೆ ಎಂಬಂತೆ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಈ ಕಾಮಗಾರಿಗಳೂ ಸಮರ್ಪಕವಾಗಿಲ್ಲ. ಕೇವಲ ನಾಮಕಾವಸ್ತೆಗಾಗಿ ಒಂದೆರಡು ಕಿ.ಮೀ. ದೂರ ಮಾತ್ರ ದೊಡ್ಡ ಗುಂಡಿಗಳನ್ನು ಮುಚ್ಚಲಾಗಿದೆ. ಬಹುತೇಕ ಕಡೆಗಳಲ್ಲಿ ರಸ್ತೆಯ ಗುಂಡಿಗಳು ಹಾಗೆಯೇ ಉಳಿದಿವೆ. ಈ ರಸ್ತೆಯ ವಿವಿಧ ಕಾಮಗಾರಿಗಳಿಗಾಗಿ ಸುಮಾರು ರೂ. 9 ಲಕ್ಷ ಬಿಡುಗಡೆಯಾಗಿದ್ದರೂ ಅದಕ್ಕೆ ತಕ್ಕಂತೆ ಯಾವುದೇ ಕಾಮಗಾರಿ ಇಲ್ಲಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಮಳೆಗಾಲ ಆರಂಭಕ್ಕೆ ಮುನ್ನ ಈ ರಸ್ತೆಗೆ ಮರುಡಾಂಬರೀಕರಣ ಮಾಡದಿದ್ದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಲಿದೆ. ರಸ್ತೆ ದುಃಸ್ಥಿತಿಯಿಂದಾಗಿ ನಾಪೋಕ್ಲಿನಿಂದ ಮಡಿಕೇರಿಗೆ ತೆರಳುವವರು ಮೂರ್ನಾಡು ಮೂಲಕ ಸಾಗದೇ ಬೆಟ್ಟಗೇರಿ ಮೂಲಕ ಸಾಗುತ್ತಿದ್ದಾರೆ. ಒಳನಾಡು ಸಾರಿಗೆ ಇಲಾಖೆಗೆ ಸೇರಿದ ರಸ್ತೆಗಳು ಬಹಳಷ್ಟು ಕಳಪೆಯಾಗಿವೆ. ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.         

ಪ್ರತಿಕ್ರಿಯಿಸಿ (+)