ಭಾನುವಾರ, ಜೂನ್ 20, 2021
21 °C

ಹೊನಗುಂಟಿ ಬಸ್ ನಿಲ್ದಾಣ ದುಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ರಾಷ್ಟ್ರಕೂಟರ ಆಡಳಿತಾವಧಿಯಲ್ಲಿ ಐತಿಹಾಸಿಕ ಮಹತ್ವ ಪಡೆದಿದ್ದ ಚಿತ್ತಾಪುರ ತಾಲ್ಲೂಕಿನ  ಹೊನಗುಂಟಿ ಗ್ರಾಮದ ಸುಪ್ರಸಿದ್ಧ ತಾಣದ ಶ್ರೀಚಂದ್ರಲಾ ಪರಮೇಶ್ವರಿಯ ನೆಲದಲ್ಲಿ ಬಸ್‌ನಿಲ್ದಾಣ ಮಾತ್ರ ಅತ್ಯಂತ ದುಸ್ಥಿತಿಯಲ್ಲಿದ್ದು ಯಾವ ಸಂದರ್ಭದಲ್ಲಿ ಕುಸಿದು ಬೀಳುವುದೊ ಎಂಬ ಆತಂಕ ಸೃಷ್ಟಿಯಾಗಿದೆ.ಸುಮಾರು ಒಂದೂವರೆ ದಶಕದ ಹಿಂದೆ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣವಾಗಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಕುಸಿಯುವ ಹಂತಕೆ ತಲುಪಿದ್ದು ಗ್ರಾಮಸ್ಥರಿಗೆ ಇದರ ಪ್ರಯೋಜನವಾದ ನೆನಪೆ ಇಲ್ಲ ಎಂದು ಹೇಳಲಾಗುತ್ತಿದೆ. ಮಜಬೂತಾದ ಕಲ್ಲುಗಳಿಂದ ನಿರ್ಮಾಣವಾದ ಬಸ್‌ನಿಲ್ದಾಣದ ಒಂದೊಂದೆ ಕಲ್ಲುಗಳು ಬೀಳತೊಡಗಿವೆ.ನಿಲ್ದಾಣದ ಎರಡು ಭಾಗಗಳಲ್ಲಿ ಕಲ್ಲುಗಳು ಕಿತ್ತಿ ಕಿಂಡಿ ಕೊರೆಯಲಾಗಿದೆ. ಭಾರಿ ಗಾತ್ರದ ಕಲ್ಲುಗಳು ಕಳ್ಳರ ಪಾಲಾಗಿವೆ. ನಿಲ್ದಾಣದ ಒಳಗಡೆ ಜಾಗ ಇದೀಗ ಸಾರ್ವಜನಿಕ ಶೌಚಾಲಯದಂತಾಗಿದ್ದು ದನ-ಕರುಗಳ ತಾಣವಾಗಿದೆ.`ಹೊರ ರಾಜ್ಯ ಹಾಗೂ ವಿದೇಶದಿಂದ ಇಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆಯಾಗಲಿ, ಬಸ್ ನಿಲ್ದಾಣದ ವ್ಯವಸ್ಥೆಯಾಗಲಿ ಇಲ್ಲ. ಸಂಬಂಧಿಸಿದವರ ಗಮನಕ್ಕೆ ತರಲಾಗಿದ್ದು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲ.ಗ್ರಾಮದ ಜನತೆ ನೆರಳಿನ ಆಶ್ರಯ ಪಡೆಯಲು ಸಾಧ್ಯವಾಗದ ಬಗ್ಗೆ ಗ್ರಾಮದ ರಾಜು ಆಡಿನ್ ಮತ್ತು ಸಿದ್ದು ವಾರಕರ್ ಬೇಸರ ವ್ಯಕ್ತಪಡಿಸುತ್ತಾರೆ. ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಹೊನಗುಂಟಿ ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಣ್ಣ ಹುಳಗೋಳಕರ್ `ಸದರಿ ವಿಷಯದ ಬಗ್ಗೆ ಶಾಸಕ ವಾಲ್ಮೀಕಿ ನಾಯಕ್ ಗಮನಕ್ಕೆ ತರಲಾಗಿದೆ~ ಎಂದು ತಿಳಿಸಿದರು. ಬರುವ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ನೆಲಕ್ಕೆ ಉರಳಬಹುದಾದ ಈ ಬಸ್ ನಿಲ್ದಾಣದ ಬಗ್ಗೆ ಅಧಿಕಾರಿಗಳು ತುರ್ತು ಗಮನಕೊಡದಿದ್ದರೆ ಬರುವ ಮಳೆಗಾಲಕ್ಕೆ ಈ ನಿಲ್ದಾಣ ಮಾತ್ರ ಕುಸಿಯುವುದು ಖಾತ್ರಿ ಎನ್ನುತ್ತಾರೆ ಗ್ರಾಮಸ್ಥರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.