ಗುರುವಾರ , ನವೆಂಬರ್ 21, 2019
21 °C
ವಿಧಾನಸಭಾ ಕ್ಷೇತ್ರ ಪರಿಚಯ

`ಹೊನ್ನಾಳಿ ಹೊಡ್ತ' ಖ್ಯಾತಿಯ ಕ್ಷೇತ್ರದ ಸುತ್ತ...

Published:
Updated:

ಹೊನ್ನಾಳಿ: ಹೊನ್ನಾಳಿ ಕ್ಷೇತ್ರ ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಪ್ರಖ್ಯಾತವಾಗಿದೆ.

ತುಂಗಭದ್ರಾ ನದಿ ಪಾತ್ರದಲ್ಲಿ ಹಾಗೂ ದಂಡೆಯ ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಬೆಳೆಯುವ ವಿಶಿಷ್ಟ ಸೊಗಡಿನ, ಮರಳು ಮರಳಾದ ಕಲ್ಲಂಗಡಿ ಹಣ್ಣಿನಿಂದಾಗಿ ಹೊನ್ನಾಳಿ ದೇಶ, ರಾಜ್ಯದ ಗಮನ ಸೆಳೆದಿದೆ.ಹೊನ್ನಾಳಿ ಹೆಸರು ಮಾಡಿರುವುದು `ಹೊನ್ನಾಳಿ ಹೊಡ್ತ' ಎಂಬ ವಿಶಿಷ್ಟ ಪದಪುಂಜದ ಮೂಲಕ. ಮಾಜಿ ಶಾಸಕ ಎಚ್.ಬಿ. ಕಾಡಸಿದ್ದಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ವಿಷಯವಾಗಿ ಸದನದಲ್ಲಿ ಅಂದಿನ ಮುಖ್ಯಮಂತ್ರಿ ಜತೆ ಚರ್ಚಿಸುವ ಸಂದರ್ಭದಲ್ಲಿ ಬಳಸಿದ `ಹೊನ್ನಾಳಿ ಹೊಡ್ತ' ಎಂಬ ಶಬ್ದ, ನಂತರದ ದಿನಗಳಲ್ಲಿ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿಯೂ ಬಳಕೆಯಾಗಿ ಜನಪ್ರಿಯವಾಯಿತು.ರಾಜ್ಯದ ಬೆರಳೆಣಿಕೆಯಷ್ಟು ವರ್ಣರಂಜಿತ ರಾಜಕಾರಣಿಗಳ ಪೈಕಿ ಎಂ.ಪಿ. ರೇಣುಕಾಚಾರ್ಯ ಕೂಡ ಒಬ್ಬರು. ಇವರು ಪ್ರತಿನಿಧಿಸಿದ ಕ್ಷೇತ್ರ ಹೊನ್ನಾಳಿ.1952ರಿಂದ ಇಲ್ಲಿಯವರೆಗೆ 13 ಚುನಾವಣೆಗಳು ನಡೆದಿವೆ. 7 ಬಾರಿ ಕಾಂಗ್ರೆಸ್, 2 ಬಾರಿ ಪಕ್ಷೇತರ, 2 ಬಾರಿ ಬಿಜೆಪಿ, ಜನತಾ ಪಕ್ಷ ಹಾಗೂ ಕೆಸಿಪಿಯ ಅಭ್ಯರ್ಥಿಗಳು ತಲಾ ಒಂದು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.1985ರವರೆಗೆ ಹೊನ್ನಾಳಿ ಕ್ಷೇತ್ರದಿಂದ ಪ್ರತಿ ಅಭ್ಯರ್ಥಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989ರಿಂದ 1999ರವರೆಗೆ ಮೂವರು ಒಮ್ಮೆ ತಲಾ ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.1952ರಿಂದ 1962ರವರೆಗಿನ ಎರಡು ಅವಧಿಗೆ ಎಚ್.ಎಸ್. ರುದ್ರಪ್ಪ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1962ರಿಂದ 1972ರವರೆಗಿನ ಎರಡು ಅವಧಿಗೆ ಪರಮೇಶ್ವರಪ್ಪ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1972ರಿಂದ 1982ರವರೆಗಿನ ಎರಡು ಅವಧಿಗೆ ಕಾಡಸಿದ್ದಪ್ಪ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1983ರಲ್ಲಿ ಡಿ.ಜಿ. ಬಸವನಗೌಡ ಪಕ್ಷೇತರರಾಗಿ, 1985ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿದ್ದರು.1989ರಲ್ಲಿ ಡಾ.ಡಿ.ಬಿ. ಗಂಗಪ್ಪ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1994ರಲ್ಲಿ ಮಾಜಿ ಶಾಸಕ ಕಾಡಸಿದ್ದಪ್ಪ ಪುತ್ರ ಎಚ್.ಬಿ. ಕೃಷ್ಣಮೂರ್ತಿ ಕೆಸಿಪಿಯಿಂದ ಶಾಸಕರಾಗಿದ್ದರು.1999ರಲ್ಲಿ ಮಾಜಿ ಶಾಸಕ ಡಿ.ಜಿ. ಬಸವನಗೌಡ ಸಹೋದರ ಡಿ.ಜಿ. ಶಾಂತನಗೌಡ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ಪಕ್ಷ ಸೇರಿದ್ದರು.2004ರಿಂದ 2013ರವರೆಗಿನ ಎರಡು ಅವಧಿಗೆ ಎಂ.ಪಿ. ರೇಣುಕಾಚಾರ್ಯ ಬಿಜೆಪಿಯಿಂದ ಶಾಸಕರಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ ರೇಣುಕಾಚಾರ್ಯ ಕೆಜೆಪಿಗೆ ಸೇರ್ಪಡೆಗೊಂಡಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಸ್ಪರ್ಧಿಸಿದ್ದಾರೆ.ಹೊನ್ನಾಳಿ ಕ್ಷೇತ್ರದಲ್ಲಿ ಬಹುತೇಕವಾಗಿ ಕಾಂಗ್ರೆಸ್, ಜನತಾ ಪರಿವಾರ ಹಾಗೂ ಪಕ್ಷೇತರರ ಮಧ್ಯೆ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, 2004ರಿಂದ ಕ್ಷೇತ್ರದಲ್ಲಿ ಬಿಜೆಪಿ ಅಲೆ ಶುರುವಾಯಿತು. 2004ರಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಗಳಿಸಿದ ಬಿಜೆಪಿ, 2008ರಲ್ಲಿ ಯಡಿಯೂರಪ್ಪ ಅವರ ಪ್ರಭಾವದಿಂದ ಜಯಗಳಿಸಿತು. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಅವರ ವಿರುದ್ಧ 5,300 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2010ರಲ್ಲಿ  ರೇಣುಕಾಚಾರ್ಯ ಅವರು ಯಡಿಯೂರಪ್ಪ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನೂ ಗಿಟ್ಟಿಸಿದರು.ಹೊನ್ನಾಳಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,69,993. ಈ ಪೈಕಿ 86,926 ಪುರುಷರು, 82,067 ಮಹಿಳೆಯರು ಇದ್ದಾರೆ.

ಈ ಬಾರಿ ಹೊನ್ನಾಳಿ ಕ್ಷೇತ್ರದಲ್ಲಿ ಕೆಜೆಪಿಯಿಂದ ಎಂ.ಪಿ. ರೇಣುಕಾಚಾರ್ಯ, ಕಾಂಗ್ರೆಸ್‌ನಿಂದ ಡಿ.ಜಿ. ಶಾಂತನಗೌಡ, ಜೆಡಿಎಸ್‌ನಿಂದ ಎಂ.ಆರ್. ಮಹೇಶ್ ಕಣದಲ್ಲಿದ್ದಾರೆ. ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಆಯ್ಕೆಯಾದವರ ವಿವರ

ವರ್ಷ          ಆಯ್ಕೆಯಾದವರು                       ಪಕ್ಷ

------------------------------------------------


1952         ಎಚ್.ಎಸ್. ರುದ್ರಪ್ಪ                    ಕಾಂಗ್ರೆಸ್

1957         ಎಚ್.ಎಸ್. ರುದ್ರಪ್ಪ                    ಕಾಂಗ್ರೆಸ್

1962         ಡಿ. ಪರಮೇಶ್ವರಪ್ಪ                     ಪಿಎಸ್‌ಪಿ

1967         ಡಿ. ಪರಮೇಶ್ವರಪ್ಪ                     ಕಾಂಗ್ರೆಸ್

1972         ಎಚ್.ಬಿ. ಕಾಡಸಿದ್ದಪ್ಪ                  ಕಾಂಗ್ರೆಸ್

1978         ಎಚ್.ಬಿ. ಕಾಡಸಿದ್ದಪ್ಪ                   ಕಾಂಗ್ರೆಸ್

1983         ಡಿ.ಜಿ. ಬಸವನಗೌಡ                    ಪಕ್ಷೇತರ

1985         ಡಿ.ಜಿ. ಬಸವನಗೌಡ                    ಜನತಾ ಪಕ್ಷ

1989         ಡಾ. ಡಿ.ಬಿ. ಗಂಗಪ್ಪ                    ಕಾಂಗ್ರೆಸ್

1994         ಎಚ್.ಬಿ. ಕೃಷ್ಣಮೂರ್ತಿ                ಕಾಂಗ್ರೆಸ್

1999         ಡಿ.ಜಿ. ಶಾಂತನಗೌಡ                    ಪಕ್ಷೇತರ

2004         ಎಂ.ಪಿ. ರೇಣುಕಾಚಾರ್ಯ              ಬಿಜೆಪಿ

2009         ಎಂ.ಪಿ. ರೇಣುಕಾಚಾರ್ಯ              ಬಿಜೆಪಿ2008ರ ಫಲಿತಾಂಶ

ಸಂಖ್ಯೆ       ಅಭ್ಯರ್ಥಿ                         ಪಕ್ಷ        ಪಡೆದ ಮತ


1         ಎಂ.ಪಿ. ರೇಣುಕಾಚಾರ್ಯ        ಬಿಜೆಪಿ         62,483

2         ಡಿ.ಜಿ. ಶಾಂತನಗೌಡ              ಕಾಂಗ್ರೆಸ್      56,083

3         ಡಾ.ಡಿ.ಬಿ. ಗಂಗಪ್ಪ               ಜೆಡಿಎಸ್      2,975

4         ಎಚ್.ಬಿ. ಶಿವಯೋಗಿ             ಎಸ್‌ಪಿ        2,853

ಪ್ರತಿಕ್ರಿಯಿಸಿ (+)