ಬುಧವಾರ, ಏಪ್ರಿಲ್ 14, 2021
24 °C

ಹೊನ್ನೆಬೈಲ್ ಹಾಲಕ್ಕಿಗಳಿಂದ ಸುಗ್ಗಿ ಕುಣಿತಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಜಿಲ್ಲೆಯ ಜನಪದ ಕಲೆಯಾದ ಸುಗ್ಗಿ ಕುಣಿತಕ್ಕೆ ಮಂಜಗುಣಿ ಹೊನ್ನೆಬೈಲಿನ ತಂಡದವರು ಬುಧವಾರ ಚಾಲನೆ ನೀಡಿದರು. ಕೃಷಿ ಸಮುದಾಯಗಳಾದ ಹಾಲಕ್ಕಿಗಳ ಪ್ರಧಾನ ಕಲೆಯಾಗಿರುವ ಸುಗ್ಗಿ ಕುಣಿತ ಇತರ ಸಮುದಾಯಗಳಲ್ಲಿಯೂ ವ್ಯಾಪಕವಾಗಿ ಕಂಡು ಬರುತ್ತದೆ.  ಕೋಮಾರ ಪಂಥರು, ನಾಮಧಾರಿಗಳು ಪ್ರತ್ಯೇಕ ತಂಡಗಳಲ್ಲಿ ಪ್ರದರ್ಶನ ನೀಡುತ್ತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸುತ್ತಾರೆ.ಹೊನ್ನೆಬೈಲಿನ ರಾಘವೇಂದ್ರ ಗೌಡ, ತಿಮ್ಮ ಗಾಂವಕರ, ಶೇಷು ಗಾಂವಕರ, ಮಹದೇವ ಗುನಗಾ, ಸುಧಾಕರ ಗೌಡ ಮುಂತಾದವರ ನೇತೃತ್ವದಲ್ಲಿ  ಹಾಲಕ್ಕಿ ಯುವಕರು ವರ್ಣ ರಂಜಿತವಾದ ಸುಗ್ಗಿ ತುರಾಯಿಗಳನ್ನು ತಲೆಗೆ ಕಟ್ಟಿಕೊಂಡು ‘ಹೋ....ಹೋ...ಚೋ....’ ಎಂದು ಪದ ಹೇಳುತ್ತ ಗುಮಟೆ ಪಾಂಗಿನ ತಾಳಕ್ಕೆ ಹೆಜ್ಜೆ ಹಾಕುತ್ತ ಸಂಚರಿಸಲಿದ್ದಾರೆ.ತಂಡದಲ್ಲಿನ ಕರಡಿ ವೇಷ, ಹುಲಿವೇಷಧಾರಿಗಳು ಮಕ್ಕಳನ್ನು ರಂಜಿಸಲಿದ್ದಾರೆ. ಜನಪದ ಹಾಡುಗಳ ಜೊತೆಗೆ ಆಶು ಕವಿಗಳಾಗಿರುವ ಇವರ ಸ್ವಂತ ರಚನೆಗಳು ಮತ್ತು ಜನಸೇವಕ ಕವಿ ದಿನಕರ ದೇಸಾಯಿಯವರ ರೈತ ಚಳವಳಿಯ ಹಾಡುಗಳನ್ನು  ಈ ಸಂದರ್ಭದಲ್ಲಿ ಲಯಬದ್ಧವಾಗಿ ಮತ್ತು ದೇಸಿ ನುಡಿಗಟ್ಟಿನಲ್ಲಿ ಹಾಡುತ್ತಾರೆ. ನೃತ್ಯ ಮಿಶ್ರಿತ ಪದಗಳನ್ನು ಕೇಳುವ ಅಭಿಮಾನಿಗಳು ಇವರಿಗೆ ಇನಾಮು ನೀಡಿ ಗೌರವಿಸುತ್ತಾರೆ. ಹೋಳಿ ಹಬ್ಬದವರೆಗೂ ತಾಲ್ಲೂಕಿನಾದ್ಯಂತ ಸಂಚರಿಸುವ ಈ ಜಾನಪದ ಜಂಗಮರು ನೆಲದ ಮೇಲಿನ ನಕ್ಷತ್ರಗಳಂತೆ ಹೊಳೆಯುತ್ತ, ಕಾಮನಬಿಲ್ಲಿನಂತೆ ಬಣ್ಣದ ಸೊಬಗನ್ನು ಹರಡಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.