ಮಂಗಳವಾರ, ಜೂನ್ 22, 2021
29 °C

ಹೊಯ್ಸಳ ಶಿಲ್ಪದ ಹೊಳಹು

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಅತ್ಯಂತ ಸೂಕ್ಷ್ಮ ಕೆತ್ತನೆಯ ವಿಗ್ರಹ­ಗಳು, ಮಹಾಕಾವ್ಯಗಳಾದ ರಾಮಾ­ಯಣ ಮತ್ತು ಮಹಾಭಾರತದ ಪುರಾಣ ಕಥೆಗಳನ್ನು ನೋಡುಗರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು, ಶಿಲಾ­ಬಾಲಿಕೆಯರ ಅಪರೂಪದ ಭಾವ–ಭಂಗಿಗಳು, ನಕ್ಷತ್ರಾಕೃತಿಯ ಎತ್ತರವಾದ ಜಗುಲಿಯ ಮೇಲೆ ಆಕರ್ಷಕ ವಾಸ್ತು­ಶಿಲ್ಪದ ಕೆತ್ತನೆ, ಬಳಪದ ಕಲ್ಲಿನ ಬಳಕೆಯ ಹಾಗೂ ವಿಶಾಲವಾದ ಪ್ರದಕ್ಷಿಣೆ ಪಥ­ಗಳುಳ್ಳ ದೇವಾಲಯ ಇವು ಹೊಯ್ಸಳ ಶಿಲ್ಪಕಲೆಯ ಆಕರ್ಷಕ ಅಂಶಗಳು.ಕರ್ನಾಟಕದಲ್ಲಿ ಸುಮಾರು 90ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದ ಕೀರ್ತಿ ಹೊಯ್ಸಳರಿಗೆ ಸಲ್ಲುತ್ತದೆ. ಅದರಲ್ಲೂ 40 ದೇವಾಲಯಗಳು ಹಾಸನ ಜಿಲ್ಲೆಯಲ್ಲೇ ಕಂಡುಬರುವುದು ವಿಶೇಷ.ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದ ರಾಜಮನೆತನಗಳಲ್ಲಿ ಹೊಯ್ಸಳರದು ಪ್ರಮುಖ ಮನೆತನ. ಕದಂಬರು, ಚಾಲುಕ್ಯರಂತೆ ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ದೇವಾಲಯಗಳು ಪ್ರೇಕ್ಷಣೀಯ ಸ್ಥಳಗಳಾಗಿ ಪ್ರಸಿದ್ಧಿಯಾಗಿವೆ. ಆದರೆ, ಇತಿಹಾಸಕಾರರು ಹಾಗೂ ಪಾಶ್ಚಾತ್ಯ ವಿದ್ವಾಂಸರು ಚಾಲುಕ್ಯ ಮತ್ತು ಕದಂಬರ ವಾಸ್ತುಶಿಲ್ಪಕ್ಕೆ ನೀಡಿದ ಪ್ರಾಮುಖ್ಯ ಹೊಯ್ಸಳರಿಗೆ ನೀಡಿಲ್ಲ ಎಂಬುದು ಬಹುತೇಕ ಇತಿಹಾಸ ತಜ್ಞರ ಅಭಿಪ್ರಾಯ.ಆದ್ದರಿಂದ ಹೊಯ್ಸಳ ವಾಸ್ತುಶಿಲ್ಪವುಳ್ಳ ದೇವಾ­ಲಯಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವ ಹಾಗೂ ಅವುಗಳಲ್ಲಿ ಅಡಗಿರುವ ಸಾಂಸ್ಕೃತಿಕ ಶ್ರೀಮಂತಿಕೆಯ ಒಳನೋಟಗಳನ್ನು ಒರೆ ಹಚ್ಚುವ ಕೆಲಸ ತುರ್ತಾಗಿ ಆಗಬೇಕಾದ ಅಗತ್ಯ ಇದೆ.

ಹೊಯ್ಸಳರ ಬಗ್ಗೆ ಒಂದಿಷ್ಟು

ಹೊಯ್ಸಳರು ಮೂಲತಃ ಜೈನ­ಧರ್ಮೀಯರು. ಆದರೂ ಶೈವ, ವೈಷ್ಣವ ಮತ್ತು ಆರ್ಯ ಸಂಸ್ಕೃತಿಯನ್ನೂ ಗೌರವಿಸುವ ವಿಶಾಲ ಹೃದಯಿ­ಗಳಾಗಿದ್ದರು. ಸೋಮನಾಥಪುರದಲ್ಲಿ ಪಕ್ಕಾ ವೈಷ್ಣವ ಸಂಸ್ಕೃತಿಯ ಪ್ರತೀಕವಾಗಿ ದೇವಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರು. ಹೊಯ್ಸಳ ದೊರೆ ವಿಷ್ಣುವರ್ಧನನ ರಾಣಿ ಶಾಂತಲಾ­ದೇವಿ ಜೈನ ಧರ್ಮೀಯಳಾಗಿದ್ದರೂ ಕಪ್ಪೆ ಚನ್ನಿಗರಾಯನ ದೇವಾಲಯ ಕಟ್ಟಿಸಿದ್ದಳು. ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಬಳ್ಳಿಗಾವಿ ಮತ್ತು ಡಂಬಳದಲ್ಲಿ ಬೌದ್ಧ ವಿಹಾರಗಳು ಹೊಯ್ಸಳರ ಧಾರ್ಮಿಕ ಸಾಮರಸ್ಯಕ್ಕೆ ನಿದರ್ಶನಗಳಾಗಿವೆ.ದ್ರಾವಿಡ, ನಾಗರ, ಹೊಯ್ಸಳ ಮೂರು ಶೈಲಿಯ ಅಪರೂಪದ ಸಂಗಮ­ವಾಗಿರುವ ಹೊಯ್ಸಳ ವಾಸ್ತುಶಿಲ್ಪಕ್ಕೆ ಕೆಲವೇ ದೇವಾಲಯಗಳನ್ನು ಉದಾಹರಣೆಯಾಗಿ ಬಳಸಲಾಗುತ್ತಿದೆ. ಆದರೆ ನೇಪಥ್ಯದಲ್ಲಿರುವ ಇತರ ದೇವಾ­ಲಯಗಳ ಕುರಿತು ನಿರ್ಲಕ್ಷ್ಯ ವಹಿಸಿರುವು­ದರಿಂದ ಅಪರೂಪದ ವಾಸ್ತುಶಿಲ್ಪವುಳ್ಳ ದೇವಾಲಯಗಳ ವೀಕ್ಷಣೆಯಿಂದ ಪ್ರವಾಸಿಗರು ವಂಚಿತರಾಗಿದ್ದಾರೆ.ಇಂಥ ಅಪರೂಪದ 20 ದೇವಾಲಯ­ಗಳ ಮಾರ್ಗಸೂಚಿಯುಳ್ಳ ನಕ್ಷೆಯೊಂದನ್ನು ಬೆಂಗಳೂರಿನ ‘ರಿಜೋರ್ಸ್‌ ರಿಸರ್ಚ್‌ ಫೌಂಡೇಷನ್’ ಅಧ್ಯಕ್ಷ ಕೆ.ವಿ. ನರೇಂದ್ರ ರೂಪಿಸಿದ್ದಾರೆ. ಈ ಸಂಬಂಧ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಪ್ರವಾಸೋ­ದ್ಯಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅರವಿಂದ್‌ ಜಾದವ್‌, ಕರ್ನಾಟಕ ರಾಜ್ಯ ಪ್ರವಾಸೋ­ದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಡಿ. ದ್ಯಾವಯ್ಯ ಅವರಿಗೆ ನೀಲನಕ್ಷೆಯುಳ್ಳ ಯೋಜನೆಯನ್ನೂ ಸಲ್ಲಿಸಿದ್ದಾರೆ.ಏನಿದು ಯೋಜನೆ?

ರಾಜ್ಯದಲ್ಲಿ ಬೇಲೂರು, ಹಳೇಬೀಡು ಹೊರತುಪಡಿಸಿದರೆ ಹೊಯ್ಸಳ ಶೈಲಿಯ ಇತರ ಪ್ರಮುಖ 20 ದೇವಾಲಯ­ಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸುವುದೇ ಈ ಯೋಜನೆ.ಈಗಾಗಲೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಮೂಲಕ ಪ್ರವಾಸಿ ತಾಣಗಳಿಗೆ ಪ್ರವಾಸ ಸೌಕರ್ಯ ಕಲ್ಪಿಸಿದೆ. ಇದೇ  ಮಾದರಿಯಲ್ಲಿ ಹೊಯ್ಸಳ ದೇವಾಲಯಗಳುಳ್ಳ ಈ 20 ಸ್ಥಳಗಳಿಗೆ ಪ್ರವಾಸ ಸೌಲಭ್ಯ ಕಲ್ಪಿಸಬೇಕು. ರಾಜಸ್ತಾನ ಹೊರತುಪಡಿಸಿದರೆ, ಅದ್ಭುತ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿರುವ ಕೀರ್ತಿ ಕರ್ನಾಟಕದ್ದು. ಹಾಗಾಗಿ, ರಾಜ್ಯದ ಪ್ರವಾಸಿಗರನ್ನಷ್ಟೇ ಅಲ್ಲ, ವಿದೇಶಿ ಪ್ರವಾಸಿಗರನ್ನೂ ಈ ತಾಣಗಳ ವೀಕ್ಷಣೆಗೆ ಆಕರ್ಷಿಸಲು ಸಾಧ್ಯ ಎನ್ನುತ್ತಾರೆ ಹೊಯ್ಸಳ ದೇವಾಲಯಗಳ ಸಂಶೋಧನೆ ನಡೆಸಿರುವ ಕೆ.ವಿ. ನರೇಂದ್ರ.ತುಮಕೂರು, ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗುರುತಿಸಿರುವ 20 ದೇವಾಲಯಗಳು ಈಗಾಗಲೇ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ಭಾರತೀಯ ಪುರಾತನ ಸರ್ವೇಕ್ಷಣ ಇಲಾಖೆ ಅಡಿಯಲ್ಲಿ ಈ ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳೆಂದೂ ಗುರುತಿಸಲಾಗಿದೆ. ಹಾಗಾಗಿ, ಈ ದೇವಾಲಯಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಲು ಸರ್ಕಾರಕ್ಕೆ ಯಾವುದೇ ಕಾನೂನಿನ ತೊಡಕು ಉಂಟಾಗದು ಎನ್ನುತ್ತಾರೆ ಅವರು.ಬಜೆಟ್‌ ಹೊಂದಾಣಿಕೆ

ಈ 20 ದೇವಾಲಯಗಳನ್ನು ನಿರ್ವಹಿಸಲು ಇಲ್ಲವೇ ಅಲ್ಪಸ್ವಲ್ಪ ರಿಪೇರಿ ಕೆಲಸಗಳಿಗಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲದಿದ್ದಲ್ಲಿ ಇತರ ಮೂಲಗಳನ್ನು ಆಶ್ರಯಿಸ­ಬಹುದು. ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ರಾಷ್ಟ್ರೀಯ ಸಾಂಸ್ಕೃತಿಕ ನಿಧಿ ಅಡಿ ಕೇವಲ ಹಳೇಬೀಡು ದೇವಾಲ­ಯವನ್ನು ಮಾತ್ರ ನಿರ್ವಹಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರ ಹೊಯ್ಸಳ ದೇವಾಲಯಗಳನ್ನೂ ಈ ನಿಧಿ ಅಡಿ ನಿರ್ವಹಿಸಬಹುದು. ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನದ ‘ಮನಗುಡಿ’ ಕಾರ್ಯಕ್ರಮದಡಿಯೂ ಈ ದೇವಾಲಯಗಳ ಜೀರ್ಣೋದ್ಧಾರ ಮಾಡಲು ಸಾಧ್ಯವಿದೆ.ಧರ್ಮಸ್ಥಳದ ಮಂಜುನಾಥ ಧರ್ಮೋಸ್ಥಾನ ಟ್ರಸ್ಟ್‌­ನಿಂದಲೂ ಜೀರ್ಣೋದ್ಧಾರ ಕಾರ್ಯಕ್ಕೆ ಸಹಾಯ ಪಡೆಯಬಹುದು. ಉಳಿದಂತೆ ದೇವಾಲಯಗಳ ತಾಂತ್ರಿಕ ನಿರ್ವಹಣೆಗಾಗಿ ಸಾಂಪ್ರದಾಯಿಕ ಶಿಲ್ಪ ಮತ್ತು ವಾಸ್ತು­ಶಿಲ್ಪ ಕುರಿತು  ತರಬೇತಿ ನೀಡುತ್ತಿರುವ ‘ಎಸ್‌.ವಿ ಇನ್‌ಸ್ಟಿಟ್ಯೂಟ್‌’ನ ಸಲಹೆ ಪಡೆ­ಯಬ­ಹುದು ಎಂದು ತಮ್ಮ ಯೋಜನೆ­ಯನ್ನು ವಿವರಿಸುತ್ತಾರೆ ನರೇಂದ್ರ.ಹೊಯ್ಸಳ ಶಿಲ್ಪಕಲೆಯ 20 ಸ್ಥಳ­ಗಳಿಗೆ ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸ ಯೋಜನೆಯನ್ನು ಸರ್ಕಾರ ಬೆಂಗಳೂರು, ಮೈಸೂರು, ಮಂಗಳೂರು ಕೇಂದ್ರಗಳಿಂದ ಆರಂಭಿಸಿದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯವೂ ಬರುತ್ತದೆ. ಅಲ್ಲದೇ, ನೇಪಥ್ಯದಲ್ಲಿರುವ ಅಪರೂಪದ ಸಾಂಸ್ಕೃತಿಕ ಶ್ರೀಮಂತಿಕೆಯ ಹೊಯ್ಸಳಗಳ ದೇಗುಲಗಳನ್ನು ನೋಡುವ ಅವಕಾಶ ಪ್ರವಾಸಿಗರಿಗೂ ಲಭಿಸಿದಂತಾಗುತ್ತದೆ.ಈ ನಿಟ್ಟಿನಲ್ಲಿ ರಾಜ್ಯದ ಪ್ರವಾ­ಸೋದ್ಯಮ ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರ ತುರ್ತು ಗಮನ ನೀಡಬೇಕು ಎಂಬುದು ನರೇಂದ್ರ ಅವರ ಕಳಕಳಿಯ ಮನವಿ. ಇದಕ್ಕೆ ಇತಿಹಾಸ ಪ್ರಿಯ­ರಿಂದಲೂ ಒತ್ತಡ ಬಂದಲ್ಲಿ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲಲು ಸಾಧ್ಯವಾದೀತು. ನರೇಂದ್ರ ಅವರ ಸಂಪರ್ಕಕ್ಕೆ 92430 46271.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.