ಹೊರಕೇರಿದೇವರಪುರ ಲಕ್ಷ್ಮೀನರಸಿಂಹ

7

ಹೊರಕೇರಿದೇವರಪುರ ಲಕ್ಷ್ಮೀನರಸಿಂಹ

Published:
Updated:
ಹೊರಕೇರಿದೇವರಪುರ ಲಕ್ಷ್ಮೀನರಸಿಂಹ

ಹೊಳಲ್ಕೆರೆ ತಾಲ್ಲೂಕಿನ ಹೊರಕೇರಿ ದೇವರಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ದೇವಸ್ಥಾನ. ನಾಲ್ಕು ಹಂತಗಳಲ್ಲಿ ನಿರ್ಮಾಣವಾಗಿರುವ ಈ ದೇವರ ಬೃಹತ್ ದೇವಸ್ಥಾನಕ್ಕೆ ಸುಮಾರು ಎಂಟು ನೂರು ವರ್ಷಗಳ ಇತಿಹಾಸವಿದೆ.ಎಂಟು ನೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಕೃಷ್ಣಾಚಲ ಎಂಬ ಹೆಸರಿನ ಬೆಟ್ಟವಿತ್ತಂತೆ. ಅಲ್ಲಿ ನಂದರಾಜನೆಂಬ ದೊರೆ ಆಳ್ವಿಕೆ ಮಾಡುತ್ತಿದ್ದ. ಅವನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ.ಸ್ವಭಾವತಃ ಅಹಂಕಾರಿಯೂ, ದುಷ್ಟನೂ ಆಗಿದ್ದ. ತಿರುಪತಿಗೆ ಹೋಗುವ ಭಕ್ತರಿಗೆ ಹಿಂಸೆಕೊಟ್ಟು ಅವರಲ್ಲಿದ್ದ ಹಣ ಕಸಿದುಕೊಂಡು ತನ್ನ ರಾಜ್ಯ ಮುದ್ರೆ ಇದ್ದ ಚರ್ಮದ  ನಾಣ್ಯಗಳನ್ನು ಕೊಡುತ್ತಿದ್ದನಂತೆ.

 

ಹೀಗಿರುವಾಗ ನೇಕಾರ ದಂಪತಿ ರೇಷ್ಮೆ ವಸ್ತ್ರವೊಂದನ್ನು ನೇಯ್ದುಕೊಂಡು ರಾಜನಲ್ಲಿಗೆ  ಹೋಗಿ ಅದನ್ನು ಅವನಿಗೆ ಅರ್ಪಿಸಿ ತಿರುಪತಿಗೆ ಯಾತ್ರೆ ಹೋಗಲು ನಮಗೆ ಹಣ ಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ದುರಹಂಕಾರಿಯಾದ ರಾಜನು ಹಣದ ತೊಗಲಿನ ನಾಣ್ಯಗಳನ್ನು ಕೊಡುತ್ತಾನೆ. ಅಸಹಾಯಕ ದಂಪತಿ ಆ ನಾಣ್ಯಗಳನ್ನೇ ತಿರುಪತಿಯಲ್ಲಿ ತಿಮ್ಮಪ್ಪನ ಹುಂಡಿಗೆ ಹಾಕಿಬರುತ್ತಾರೆ.ಹೀಗೆ ತನ್ನ ಭಕ್ತರಿಗೆ ಕಿರುಕುಳ ಕೊಟ್ಟು ಅವಮಾನಿಸುತ್ತಿದ್ದ ನಂದರಾಜನ ನಿಗ್ರಹಕ್ಕೆ ವೆಂಕಟೇಶ್ವರನೇ ಕೃಷ್ಣಾಚಲಕ್ಕೆ ಬಂದು ಅರಮನೆ ದಹನ ಮಾಡುತ್ತಾನೆ. ಅದೇ ಸಂದರ್ಭದಲ್ಲಿ  ಕೃಷ್ಣಾಚಲದ ಸಾಧ್ವಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದಳು.ಇದು ವೆಂಕಟೇಶ್ವರನ ಕೃಪೆಯಿಂದ ಸಾಧ್ಯವಾಯಿತು ಎಂದು ನೆನೆದು ಮಗುವನ್ನು ಒಂದು ಹರಿವಾಣದಲ್ಲಿ ಹಾಕಿ ಮಲಗಿಸುತ್ತಾಳೆ. ಆ ಮಗುವಿಗೆ ಕರ್ಪೂರದ ಆರತಿ ಬೆಳಗಿ ನಂತರ ಕೃಷ್ಣಾಚಲ ಬೆಟ್ಟದ ಕಡೆ ಬೆಳಗುತ್ತಾ ರಾಜ್ಯವನ್ನು ಉಳಿಸು ಎಂದು ಪ್ರಾರ್ಥಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ವೆಂಕಟೇಶ್ವರ ಸ್ವಾಮಿಯು ಬೆಂಕಿಯನ್ನು ನಂದಿಸಿ ಜನರನ್ನು ರಕ್ಷಿಸುತ್ತಾನೆ.ಆನಂತರ ವೆಂಕಟೇಶ್ವರ ಸ್ವಾಮಿ ಪಟ್ಟಣದ ಹೊರವಲಯದಲ್ಲಿದ್ದ ಒಂದು ಹುತ್ತದಲ್ಲಿ ಐಕ್ಯನಾಗುತ್ತಾನೆ. ನಂದರಾಜನ ಪಟ್ಟಣದ ಹೊರಗಿನ ಕೇರಿಯಾಗಿದ್ದ ಈ ಸ್ಥಳದಲ್ಲಿ ದೇವರು ನೆಲೆಸಿದ್ದರಿಂದ ಹೊರಕೇರಿ ದೇವರಪುರ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ವೆಂಕಟೇಶ್ವರ ಸ್ವಾಮಿ ಇಲ್ಲಿ ಲಕ್ಷ್ಮಿನರಸಿಂಹ ಸ್ವಾಮಿಯ ರೂಪದಲ್ಲಿ ಉದ್ಭವವಾಗಿದ್ದಾನೆ.ದುಷ್ಟ ನಂದರಾಜನನ್ನು ಸಂಹರಿಸಿದ ರಂಗನಾಥ ಮತ್ತು ಲಕ್ಷ್ಮಿ ನರಸಿಂಹಸ್ವಾಮಿಯರನ್ನು ಭಕ್ತರು ಪೂಜಿಸಲು ಮುಂದಾದರು. ಆ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರು.ನಾಲ್ಕು ಹಂತಗಳಲ್ಲಿ ಸಂಪೂರ್ಣ ಕಲ್ಲುಗಳಿಂದ ನಿರ್ಮಿಸಿರುವ ಬೃಹತ್ ದೇವಸ್ಥಾನವು ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿದೆ. ಗರ್ಭಗುಡಿಯ ಹೊರಭಾಗದಲ್ಲಿ ವಿಶಾಲ ಆವರಣವಿದೆ. 1386ರಲ್ಲಿ ದುಮ್ಮಿ ಸಂಸ್ಥಾನದ ದೊರೆ  ವೀರಪ್ಪನಾಯಕರು ಇಲ್ಲಿನ ತಿರುವೆಂಗಟನಾಥರ ರಂಗ ಮಂಟಪವನ್ನು ಕಟ್ಟಿಸಿದರು ಎಂಬ ಮಾಹಿತಿ ಇಲ್ಲಿ ದೊರೆತಿರುವ ಶಾಸನದಲ್ಲಿದೆ.ಲಕ್ಷ್ಮಿ ನರಸಿಂಹಸ್ವಾಮಿ ಇಲ್ಲಿ ನೆಲೆಸಿದ್ದು ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದಾನೆ ಎಂದು ಜನರು ನಂಬಿದ್ದಾರೆ. ಪ್ರತಿ ಮಾರ್ಚ್‌ನಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಶನಿವಾರ ಅನ್ನಸಂತರ್ಪಣೆ ನಡೆಯುತ್ತದೆ. ಕಾರ್ತಿಕ ಮಾಸ, ಸಂಕ್ರಾಂತಿ, ದಸರಾ ಹಬ್ಬಗಳಲ್ಲಿ ವಿಶೇಷ ಪೂಜೆ, ಉತ್ಸವ ನಡೆಯುತ್ತದೆ. ವಿಜಯದಶಮಿ ಸಂದರ್ಭದಲ್ಲಿ ಅಂಬಿನ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ.ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಭಕ್ತರು ಉಳಿದುಕೊಳ್ಳಲು ಟ್ರಸ್ಟ್‌ನ ವಸತಿ ಗೃಹವಿದೆ.ಹೊರಕೇರಿ ದೇವರಪುರ ಚಿತ್ರದುರ್ಗದಿಂದ 30ಕಿ.ಮೀ ದೂರದಲ್ಲಿದೆ. ಹೊಳಲ್ಕೆರೆ ಮಾರ್ಗವಾಗಿ ಬಂದು ಚಿತ್ರಹಳ್ಳಿ ಕ್ರಾಸ್ ಮೂಲಕ ಅಲ್ಲಿಗೆ ಹೋಗಬಹುದು. ಶಿವಮೊಗ್ಗದಿಂದ 90 ಕಿ.ಮೀ ದೂರವಿದೆ. ಅಲ್ಲಿಂದ ಬರುವವರು ಹೊಳಲ್ಕೆರೆ ಮಾರ್ಗವಾಗಿ ಬರಬಹುದು.ಇಲ್ಲಿಗೆ ಬರಲು ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವಿದೆ. ಮಾಹಿತಿಗೆ ಟ್ರಸ್ಟ್‌ನ ಕಾರ್ಯದರ್ಶಿ ತಿಪ್ಪೆಸ್ವಾಮಿ ಅವರನ್ನು ಸಂಪರ್ಕಿಸಬಹುದು.ಅವರ ಮೊಬೈಲ್ ನಂಬರ್- 87626 21042

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry