ಸೋಮವಾರ, ಜೂನ್ 21, 2021
27 °C

ಹೊರಗುತ್ತಿಗೆ ಮೇಲೆ ಅವಲಂಬನೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭಾರತದ ಅರ್ಥವ್ಯವಸ್ಥೆಯಲ್ಲಿ ಸೇವಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಇದು ಅಸಮತೋಲನದ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವಂತಿದೆ~ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಬಿಸಲಯ್ಯ ಅವರು ಹೇಳಿದರು.`ರಾಷ್ಟ್ರದ ವಾಣಿಜ್ಯ ವ್ಯವಹಾರಗಳ ಮೇಲೆ ಬಜೆಟ್‌ನ ಪರಿಣಾಮಗಳು~ ಕುರಿತು `ಎಂ.ಪಿ.ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್~ (ಎಂಪಿಬಿಐಎಂ), ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಸೇವಾ ಕ್ಷೇತ್ರದ ಬೆಳವಣಿಗೆಯ ಪ್ರಮಾಣ ಶೇಕಡಾ 59ರಷ್ಟಿದೆ. ಇದನ್ನು ನೋಡಿದರೆ ಭಾರತ, ಜಗತ್ತಿನ ಸೇವಾ ಕ್ಷೇತ್ರದ ರಾಜಧಾನಿಯಾಗಲು ಹೊರಟಿದೆಯೇ ಎಂಬ ಪ್ರಶ್ನೆ ಮೂಡುತ್ತದೆ~ ಎಂದು ಅವರು ಹೇಳಿದರು.

`ಸೇವಾ ಕ್ಷೇತ್ರದಲ್ಲಿರುವ ಭಾರತದ ಬಹುತೇಕ ಕಂಪೆನಿಗಳು ಹೊರಗುತ್ತಿಗೆಯ ವ್ಯವಹಾರಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ. ಈ ರೀತಿಯ ಪರಾವಲಂಬನೆಯು ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಅವರು ತಿಳಿಸಿದರು.`ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಯ ವೇಗ ಕಡಿಮೆ ಆಗಿರುವುದು ಕಳವಳಕಾರಿ ಸಂಗತಿಯಾಗಿದೆ. ಕೃಷಿ, ಭಾರತದ ಅರ್ಥ ವ್ಯವಸ್ಥೆಯ ಬೆನ್ನೆಲುಬು ಇದ್ದ ಹಾಗೆ. ಕೃಷಿ ಮತ್ತು ತಯಾರಿಕಾ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಇನ್ನಷ್ಟು ಒತ್ತು ಸಿಗಬೇಕಿತ್ತು~ ಎಂದು ಅವರು ಅಭಿಪ್ರಾಯಪಟ್ಟರು.ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಮಾತನಾಡಿ, `ಬಜೆಟ್‌ನ ತೆರಿಗೆ ಪ್ರಸ್ತಾವಗಳು ಇನ್ನಷ್ಟು ನಾಗರಿಕ ಸ್ನೇಹಿ ಆಗುವ ಅಗತ್ಯವಿತ್ತು. 80 ವರ್ಷ ಮೇಲ್ಪಟ್ಟ ನಾಗರಿಕರಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡಲಾಗಿದೆ. ಖರ್ಚು ಮಾಡಬಲ್ಲ ವಯೋಮಾನದ ನಾಗರಿಕರಿಗೆ ತೆರಿಗೆ ರಿಯಾಯಿತಿ ನೀಡಬೇಕಿತ್ತು. ಚಿನ್ನಾಭರಣಗಳು, ರೆಫ್ರಿಜರೇಟರ್, ಎಸಿಗಳ ಮೇಲೆ ತೆರಿಗೆ ವಿಧಿಸಿರುವುದು ಸರಿಯಲ್ಲ~ ಎಂದರು.`ಎಂಪಿಬಿಐಎಂ~ ಡೀನ್ ಡಾ.ಎನ್.ಎಸ್.ವಿಶ್ವನಾಥ್ ಮಾತನಾಡಿ, `ಬೆಳವಣಿಗೆಯ ಗುರಿಗಳು, ಬೆಲೆ ಸ್ಥಿರತೆ, ಹಣದುಬ್ಬರ ನಿಯಂತ್ರಣ ಕ್ರಮಗಳು ಒಂದಕ್ಕೊಂದು ಪೂರಕವಾಗಿಲ್ಲ~ ಎಂದರು. ಅಕ್ಲೀವ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ ಜೋಯಿಸ್ ಮಾತನಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.